
ಕುಂಟುತ್ತಾ ಸಾಗಿದ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಕಿರು ಸೇತುವೆ ಕಾಮಗಾರಿ ಈಗಾಗಲೇ ಮುಗಿದಿದ್ದು, ಐದು ವಷಗಳ ಬಳಿಕವಾದರೂ ವನವಾಸ ಮುಗಿಯಿತು ಎಂದು ಸಂತೋಷದಲ್ಲಿದ್ದ ಹೆದ್ದಾರಿ ಸಂಚಾರಿಗಳಿಗೆ, ಈ ನೂತನ ರಸ್ತೆ ಕುಸಿಯುವ ಮೂಲಕ ಮತ್ತೆ ಜನ ನಿರಾಶೆ ಅನುಭವಿಸುವಂತ್ತಾಗಿದೆ.
ಛಿಂದಿಯಾದ ರಸ್ತೆ.. ಹೊಂಡಗಳ ಮೇಲೆ ಪ್ರಯಾಣ.. ಮಳೆಗೆ ಕೆಸರು.. ಬಿಸಿಲಿಗೆ ಧೂಳು.. ಈ ರೀತಿಯಾಗಿದ್ದ ಸಮಸ್ಯೆಗೆ ಸೋಮವಾರ ಮುಕ್ತಿ ಕಾಣಿತು ಎಂಬ ಸಂತೋಷದಲ್ಲಿದ್ದ ಹೆದ್ದಾರಿ ಪ್ರಯಾಣಿಕರಿಗೆ ಮತ್ತೆ ಶಾಕ್, ನೂತನ ರಾಷ್ಟ್ರೀಯ ಹೆದ್ದಾರಿ ಕೆಲವೇ ಗಂಟೆಗಳ ವಾಹನ ಸಂಚಾರದಿಂದ ಕುಸಿತ ಕಂಡಿದ್ದು, ಹಳೆ ಗಂಡನ ಪಾದವೇ ಗತಿ ಎಂಬಂತ್ತೆ ಮತ್ತೆ ಹೊಂಡಮಯ ಧೂಳು ರಸ್ತೆಯಲ್ಲೇ ವಾಹನ ಸಂಚಾರ ಮುಂದುವರಿದಿದೆ.
ಹೆದ್ದಾರಿ ಗುತ್ತಿಗೆ ಕಂಪನಿ ತಾನೇನೇ ಮಾಡಿದರೂ ಅದನ್ನು ಕೇಳುವವರು ಈ ದೇಶದಲ್ಲಿ ಯಾರೂ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡ ಬಳಿಕ, ಆನೆ ನಡೆದದ್ದೇ ದಾರಿ ಎಂಬಂತ್ತೆ ವರ್ತಿಸುತ್ತಿದೆ, ಕೇವಲ ಒಂದು ಕಿರು ಸೇತುವೆ ನಿರ್ಮಾಣಕ್ಕೆ ಬರೋಬ್ಬರೀ ಐದು ವರ್ಷಗಳನ್ನು ಬಳಸಿದ ಕಂಪನಿ, ಈ ಆಮೆಗತಿಯ ಕಾಮಗಾರಿಯ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಪರ್ಯಾಯ ರಸ್ತೆಯಾಗಿ ನೀಡಿದ್ದು, ನಿರ್ವಾಹನೆಯೇ ಇಲ್ಲದ ಹೊಂಡಮಯ ಧೂಳು ರಸ್ತೆಯನ್ನು, ಇಷ್ಟಾದರೂ ಜನಪ್ರತಿನಿಧಿಗಳಾಗಲೀ.. ಸರ್ಕಾರಿ ಅಧಿಕಾರಿಗಳಾಗಲೀ.. ಕಂಪನಿಗೆ ಎಚ್ಚರಿಕೆಯನ್ನು ನೀಡುವ ಧೈರ್ಯ ತೋರಿಲ್ಲ.. ಇದೀಗ ಒಂದು ಪಾಶ್ವದ ಸೇತುವೆ ನಿರ್ಮಾಣಗೊಂಡು ಅದಕ್ಕೆ ಸಂಪರ್ಕ ರಸ್ತೆ ನಿರ್ಮಿಸಿ ಸೋಮವಾರ ಹೊಂಡಮಯ ರಸ್ತೆಗೆ ಮುಕ್ತಿ ತೋರಿ ಈ ನೂತನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಆದರೆ ವಾಹನ ಸಂಚರಿಸಿದ ಕೆಲವೇ ಗಂಟೆಗಳಲ್ಲಿ ಈ ನೂತನ ರಸ್ತೆ ಕುಸಿಯುವ ಮೂಲಕ ನವಯುಗ್ ಕಂಪನಿ ತನ್ನ ಕಾಮಗಾರಿಯ ಮೌಲ್ಯವನ್ನು ಅನಾವರಣಗೊಳಿಸಿದೆ.