Header Ads
Breaking News

ಜನತಾ ಕರ್ಫ್ಯೂ’ಗೆ ದ.ಕ. ಜಿಲ್ಲೆ ಸ್ತಬ್ಧ

ಮಂಗಳೂರು:ಕೊರೊನ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ `ಜನತಾ ಕರ್ಫ್ಯೂ’ಗೆ ದ.ಕ. ಜಿಲ್ಲೆಯ ಜನತೆ ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ನೀಡಿದ್ದು, ಮಂಗಳೂರು ಸಹಿತ ದ.ಕ. ಜಿಲ್ಲೆಯು ಸ್ತಬ್ಧಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಬೆಳಗ್ಗೆ 7ರಿಂದಲೇ `ಜನತಾ ಕರ್ಫ್ಯೂ’ವನ್ನು ಬೆಂಬಲಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ವಾರದ ಹಿಂದೆಯೇ ಮಾಲ್‍ಗಳು, ಚಲನಚಿತ್ರ ಮಂದಿರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರಕಾರ ನಿರ್ಬಂಧ ಹೇರಿತ್ತು. ರವಿವಾರ ಜನತಾ ಕರ್ಫ್ಯೂಗೆ ಬೆಂಬಲ ನೀಡುವಂತೆ ಪ್ರಧಾನಿ ಕರೆ ನೀಡಿದ ಮೇರೆಗೆ ಖಾಸಗಿ ಮತ್ತು ಸರಕಾರಿ ಬಸ್‍ಗಳು, ರೈಲು, ರಿಕ್ಷಾ, ಟ್ಯಾಕ್ಸಿ, ವಿಮಾನ ಯಾನ ಸಹಿತ ಎಲ್ಲಾ ರೀತಿಯ ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಅದರಂತೆ ಯಾವ ವಾಹನವೂ ರಸ್ತೆಗೆ ಇಳಿಯಲಿಲ್ಲ. ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್‍ಗಳು ತೆರೆಯಲಿಲ್ಲ. ಸದಾ ಜನರ ಓಡಾಟದಿಂದ ಗಮನ ಸೆಳೆಯುತ್ತಿದ್ದ ನಗರದ ಸೆಂಟ್ರಲ್ ಮಾರ್ಕೆಟ್, ಸ್ಟೇಟ್‍ಬ್ಯಾಂಕ್ ಪರಿಸರ, ರೈಲು ಮತ್ತು ರಿಕ್ಷಾ ಹಾಗೂ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿತ್ತು.

  ನಗರ ಮತ್ತು ಗ್ರಾಮಾಂತರ ಪ್ರದೇಶದ ಕೆಲವು ಕಡೆ ಬೆರೆಳೆಣಿಕೆಯ ವಾಹನಗಳು ಓಡಾಡುತ್ತಿತ್ತು. ಆಂಬುಲೆನ್ಸ್ ಮತ್ತು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ತುರ್ತು ಘಟಕಗಳು ಮಾತ್ರ ತೆರೆದಿತ್ತು. ನಗರದಲ್ಲಿ ಒಂದೆರಡು ಪೆಟ್ರೋಲ್ ಬಂಕ್‍ಗಳು ಮತ್ತು ಮೆಡಿಕಲ್ ಅಂಗಡಿಗಳು ತೆರೆದಿತ್ತು. ಉಳಿದಂತೆ ಮಂಗಳೂರು ಸ್ತಬ್ಧಗೊಂಡಿದೆ. ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್, ತೊಕ್ಕೊಟ್ಟು ಪರಿಸರದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ 66 ಬಹುತೇಕ ಸ್ತಬ್ಧ ಗೊಂಡಿದೆ. ಮುಡಿಪು, ಕೊಣಾಜೆ, ಅಸೈಗೋಳಿ, ನಾಟೆಕಲ್ ಸಂಪೂರ್ಣ ಬಂದ್ ಆಗಿವೆ.
ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಜನರು ಸ್ವಯಂಪ್ರೇರಿತರಾಗಿ `ಜನತಾ ಕರ್ಫ್ಯೂ’ವಿನಲ್ಲಿ ಪಾಲ್ಗೊಂಡಿದ್ದರೆ ಪೌರ ಕಾರ್ಮಿಕರು ಮಾತ್ರ ಎಂದಿನಂತೆ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ನಗರದ ಸೆಂಟ್ರಲ್ ಮಾರ್ಕೆಟ್ ಸಹಿತ ವಿವಿಧ ಮಾರ್ಕೆಟ್, ಹಂಪನಕಟ್ಟೆ, ಸ್ಟೇಟ್‍ಬ್ಯಾಂಕ್ ಮತ್ತಿತರ ಕಡೆ ಪೌರಕಾರ್ಮಿಕರು ಎಂದಿನಂತೆ ಮಾಸ್ಕ್ ಧರಿಸಿ ತ್ಯಾಜ್ಯವಸ್ತುಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ದಿನ ಈ ತ್ಯಾಜ್ಯಗಳನ್ನು ತೆರವುಗೊಳಿಸದೇ ಇದ್ದರೆ ಅನಾರೋಗ್ಯಕ್ಕೆ ದೊಡ್ಡ ಕೊಡುಗೆ ನೀಡುವ ಅಪಾಯದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ದೃಶ್ಯ ಕಂಡು ಬಂತು.

Related posts

Leave a Reply

Your email address will not be published. Required fields are marked *