
ಎಲ್ಲೂರಿನಲ್ಲಿ ಜನವಿರೋಧಿಯಾಗಿ ಅಸ್ಥಿತ್ವಕ್ಕೆ ಬಂದಿರುವ ಯುಪಿಸಿಎಲ್ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ, ನಮ್ಮ ಕೃಷಿ ನಾಶಗೊಂಡರೆ, ದನ-ಕರುಗಳು ರೋಗ ರುಜಿನೆಗಳಿಂದ ನರಳುವಂತ್ತಾಗಿದೆ ಎಂಬುದಾಗಿ, ಪರಿಸರ ಹಾನಿಗಳ ಬಗೆಗೆ ಪರಿಶೀಲಿಸಿ ವರದಿ ನೀಡಲು ಆಗಮಿಸಿದ ಕೇಂದ್ರೀಯ ಪರಿಸರ ತಜ್ಞರ ಮುಂದೆ ಎಲ್ಲೂರಿನ ತಜೆ ನಿವಾಸಿ ಗಣೇಶ್ ರಾವ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಂದಿಕೂರು ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಸಿರು ಪೀಠದ ಮುಂದೆ 2018ರಲ್ಲಿ ದಾಖಲಿಸಿರುವ ದಾವೆಯನ್ವಯ ಯೋಜನೆಯಿಂದಾಗಿ ಉಂಟಾಗಿರುವ ಪರಿಸರ ಹಾನಿಗಳ ಬಗ್ಗೆ ಕೇಂದ್ರೀಯ ಪರಿಸರ ತಜ್ಞರ ತಂಡವು ಎಲ್ಲೂರು ಗ್ರಾಮದ ಉಳ್ಳೂರು, ಕೊಳಚೂರು, ಮುದರಂಗಡಿ ಭಾಗಗಳಿಗೆ ತೆರಳಿ ಪರಿಶೀಲನೆಯನ್ನು ನಡೆಸಿದೆ ಎಂಬುದಾಗಿ ಜನಜಾಗೃತಿ ಸಮಿತಿಯ ಪದಾಧಿಕಾರಿ ಜಯಂತ್ ಕುಮಾರ್ ಹೇಳಿದ್ದಾರೆ. ಈ ತಂಡದಲ್ಲಿ ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕ ತಿರುಮೂರ್ತಿ, ಬೆಂಗಳೂರಿನ ಫ್ರೊ| ಡಾ| ಶ್ರೀಕಾಂತ್ ಮೊದಲಾದವರಿದ್ದರು.
ಈ ಹಿಂದೆ ಪರಿಸರ ಕಾನೂನು ಉಲ್ಲಂಘನೆಗಾಗಿ ಸುಮಾರು 5ಕೋಟಿ ರೂ. ಗಳ ಪರಿಹಾರವನ್ನು ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಯುಪಿಸಿಎಲ್ ದಂಡ ಪಾವತಿಸಿದೆ. ಸದ್ಯ ಜನತೆಗೆ ಯೋಜನೆಯಿಂದಾಗಿ ಆಗಿರಬಹುದಾದ ಸುಮಾರು 177.8 ಕೋಟಿ ರೂ. ನಷ್ಟ ಪಾವತಿಗಾಗಿ ನಂದಿಕೂರು ಜನಜಾಗೃತಿ ಸಮಿತಿಯ ದಾವೆಯಲ್ಲಿ ಅಂತಿಮ ಆದೇಶವೂ ನ. ಜ. ಜಾ, ಸಮಿತಿಯ ಪರವಾಗಿಯೇ ಬಂದಿದೆ. ಅದಕ್ಕಾಗಿ ಈ ಸಮಿತಿಯು ಪರಿಶೀಲಿಸಿ ವರದಿಯನ್ನು ನೀಡಲಿದೆ ಎಂದೂ ತಜ್ಞರ ಸಮಿತಿ ಸದಸ್ಯ ಡಾ|ಕೃಷ್ಣರಾಜ್ ತಿಳಿಸಿದರು.