
ಊರಲ್ಲಿ ಒಂದು ಸಮಸ್ಯೆ ಇದ್ದರೂ ಜೀವನ ನಡೆಸೋದೆ ಕಷ್ಟ. ಅಂತದ್ದರಲ್ಲಿ ಹತ್ತಾರು ಸಮಸ್ಯೆಗಳಿದ್ದರೆ ಆ ಊರಿನ ನಾಗರಿಕರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿದ್ದೀರಾ? ಅಂತದ್ದೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದುಕೊಂಡ ಊರೊಂದಿದೆ. ಆ ಊರು ಯಾವುದು ಅಂತೀರಾ. ಈ ಸ್ಪೆಶಲ್ ರಿಪೋರ್ಟ್ ನೋಡಿ.
ಕುಂದಾಪುರ ತಾಲೂಕಿನ ಜಪ್ತಿ ಗ್ರಾಮ ಬಸ್ರೂರು-ಹುಣ್ಸೆಮಕ್ಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವಲ್ಲಿದೆ. ಸಂಚಾರಕ್ಕೆ ರಸ್ತೆಯ ಹೊಂಡಾಗುಂಡಿ ಸಮಸ್ಯೆಯಾದರೆ, ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಕಣ್ಣೀರು ತರುತ್ತೆ. ಮಳೆಗಾಲದಲ್ಲಂತೂ ವಾರಗಟ್ಟಲೆ ವಿದ್ಯುತ್ ನಾಪತ್ತೆಯಾಗಿ ಬಿಡುತ್ತೆ. ಬಿ.ಹೆಚ್ ರಸ್ತೆ ಆರಂಭದಿಂದ ಹುಣ್ಸೆಮಕ್ಕಿ ಸೇರುವವರೆಗೂ ಕೋಳಿ ಇನ್ನಿತರ ತ್ಯಾಜ್ಯಗಳ ಗೊಬ್ಬರಗುಂಡಿ. ಕೃಷಿಕರು ಬೆಳೆದ ಬೆಳೆ ಕಾಡುಪ್ರಾಣಿಗಳು ತಿಂದು ಉಳಿದಿದ್ದು ಕೃಷಿಕರಿಗೆ. ಬಾಳೆಕಾಯಿ, ತರಕಾರಿ, ಹಣ್ಣು ಹಂಪಲ ಕೋತಿಗಳ ಪಾಲು! ಕಳೆದ ಒಂದೂವರೆ ದಶಕದ ಹಿಂದೆ ಜಪ್ತಿ ಗ್ರಾಮಸ್ಥರು ನೆಮ್ಮದಿಯಲ್ಲೇ ಇದ್ದರು. ಯಾವತ್ತು ಅಕೇಶಿಯಾ ಮರ ತಲೆ ಎತ್ತಿತೋ ಅಂದಿನಿಂದ ಜಪ್ತಿ ಗ್ರಾಮಕ್ಕೆ ಸಂಕಷ್ಟಗಳು ಒಕ್ಕರಿಸಿಕೊಂಡಿವೆ. ಮೇ ತಿಂಗಳವರೆಗೆ ತೋಡು, ಹಳ್ಳ ಕೊಳ್ಳದಲ್ಲಿ ಹರಿಯುತ್ತಿದ್ದ ನೀರು ಜನವರಿಗೆ ನಿಲ್ಲಿಸುತ್ತದೆ. ಬೇಸಿಗೆಗೆ ಕುಡಿಯುವ ನೀರಿಗೆ ಟ್ಯಾಂಕರ್ ದಿಕ್ಕು. ಚಿರತೆ ಎರಡು ಬಾರಿ ದಾಳಿ ನಡೆಸಿ ದಾಳಿಗೊಳಗಾದ ಮಹಿಳೆ ಸಾವಿನ ದವಡೆಯಿಂದ ಪಾರಾಗಿದ್ದೇ ಅಚ್ಚರಿ. ಇನ್ನು ದನ ಕರುಗಳು ಚಿರತೆ ದಾಳಿಯಿಂದ ಪಾರಾಗಿಲ್ಲ. ರಾತ್ರಿ ಜಿಂಕೆಗಳ ಓಡಾಟ ದ್ವಿಚಕ್ರ ಸವಾರರಿಗೆ ಪ್ರಾಣಸಂಕಟ. ರಸ್ತೆ ಬದಿಯಲ್ಲಿ ಬಿದ್ದ ಮಾಂಸ, ಕೋಳಿ ಇನ್ನಿತರ ತ್ಯಾಜ್ಯದ ರಾಶಿಗಳಲ್ಲಿ ನಾಯಿಗಳ ಕಿತ್ತಾಟ ಮಾಮೂಲು. ಒಟ್ಟಿನಲ್ಲಿ ಜಪ್ತಿ ಗ್ರಾಮದವರ ಜೀವನ ಕಬ್ಬಿಣದ ಕಡಲೆ. ಊರು ಬಿಟ್ಟು ಹೋಗೋದಕ್ಕೂ ಆಗದೆ ಇರೋದಕ್ಕೂ ಆಗದೆ ಇಲ್ಲಿನ ಜನರು ಸಮಸ್ಯೆಗಳ ನಡುವಲ್ಲೇ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಗಿ ಬಿಟ್ಟಿದೆ.
ಎಸ್.. ಈ ಅಕೇಶಿಯಾ ಮರದಿಂದ ಅಲರ್ಜಿ, ಅಸ್ತಮ, ಚರ್ಮ ಖಾಯಿಲೆಯಂತಹ ಕಾಯಿಲೆಗಳು ಇಲ್ಲಿನ ನಿವಾಸಿಗಳನ್ನು ಆವರಿಸುತ್ತಿದೆ. ಅಕೇಶಿಯಾ ಜನರ ಮೇಲೆ ಬೀರುವ ಪರಿಣಾಮಕ್ಕಿಂತಲೂ ಹೆಚ್ಚು ಔಷಧೀಯ ಸಸ್ಯ ಸಂಕುಲವನ್ನೆ ಮಾಡುತ್ತಿದೆ. ಅಕೇಶಿಯಾ ಪ್ಲಾಂಟೇಶನ್ನಿಂದ ಊರಲ್ಲಿದ್ದ ಎಲ್ಲಾ ಗಿಡ ಮೂಲಿಕೆಗಳು ಸರ್ವನಾಶವಾಗುತ್ತಿದೆ. ಅಕೇಶಿಯಾ ಎಲೆಗಳು ರಬ್ಬರ್ ಹಾಗೆ ಇದ್ದು ಉಷ್ಣಾಂಶ ಹೀರಿಕೊಳ್ಳದೆ ಹಾಗೆಯೇ ಉಳಿಯುತ್ತಿದೆ. ಒಣಗಿದ ಎಲೆ ಕೊಳೆಯದೆ ಗೊಬ್ಬರವೂ ಆಗೋದಿಲ್ಲ. ದೇಶೀಯ ಸಸ್ಯಗಳ ನಾಶಮಾಡುವ ಅಕೇಶಿಯಾ ನಮಗೆ ಬೇಕಾ ಎನ್ನೋದು ಊರ ಜನರ ಮುಂದಿರುವ ಪ್ರಶ್ನೆ. ಮನುಷ್ಯರ ಆರೋಗ್ಯದ ಮೇಲೆ ಒಂದೇ ಅಲ್ಲಾ. ಪ್ರಾಣಿ, ಪಕ್ಷಿಗಳಿಗೂ ಅಕೇಶಿಯಾ ಆಶಾದಾಯಕವಲ್ಲ. ರಬ್ಬರ್ ಪ್ಲಾಂಟೇಶನ್ ಹಾಗೆ ಅಂತರ್ಜಲ ಹೀರಿ ಅಕೇಶಿಯ ಬೆಳೆಯುವುದರಿಂದ ನೀರಿನ ಮಟ್ಟ ಕುಸಿತಕ್ಕೂ ಕಾರಣವಾಗುತ್ತದೆ. ದೇಶಿಯಾ ಮರಗಿಡಗಳು ಹಣ್ಣು, ಹೂವು, ಎಲೆ ಎಲ್ಲವೂ ಪ್ರಾಣಿ,ಪಕ್ಷಗಳ ಆಹಾರವಾದರೆ ಅಕೇಶಿಯಾ ಮರದಲ್ಲಿ ಅಂತಾ ಯಾವುದೇ ಉಪಯೋಗವಿಲ್ಲ. ಅಕೇಶಿಯಾ ಪರಿಸರಕ್ಕೆ ಮಾರಕವೇ ಹೊರತು ಪೂರಕವಲ್ಲ. ಕಾಡಿಲ್ಲದ ಕಡೆ ಪ್ಲಾಂಟೇಶನ್ ಮಾಡಲಾಗುತ್ತಿದ್ದು, ಅಕೇಶಿಯಾ ಗಿಡ ಊರಿ ಹೋದರೆ ಅದು ತನ್ನಷ್ಟಕ್ಕೆ ಬೃಹದಾಕಾರವಾಗಿ ಬೆಳೆಯುತ್ತೆ ಅನ್ನೋ ಕಾರಣಕ್ಕೆ ಅರಣ್ಯ ಇಲಾಖೆ ಅಕೇಶಿಯಾ ಬೆಳೆಸುತ್ತಿದ್ದಾರೆ ಎನ್ನುವುದ ಸ್ಥಳೀಯರ ಆರೋಪ.
ಜಪ್ತಿಯಲ್ಲಿನ ಅಕೇಶಿಯಾ ಮರಗಳ ತೆರವು ಮಾಡುವಂತೆ ಗ್ರಾಪಂ ಸಭೆಯಲ್ಲಿ ನಿರ್ಣಯ ಮಾಡಿ ಕೊಟ್ಟರೂ ಅರಣ್ಯ ಇಲಾಖೆ ಗ್ರಾಮಪಂಚಾಯತ್ ನಿರ್ಣಯ ಏನು ಮಾಡಿದೆ ಎನ್ನೋದು ತಿಳಿದಿಲ್ಲ. ಊರಿನ ನೆಮ್ಮದಿ ಹಾಳು ಮಾಡಿದ ಅಕೇಶಿಯಾ ಮರಗಳನ್ನು ತೆರವು ಮಾಡಿ, ಸ್ಥಳಿಯ ಮರಗಿಡಗಳಿಗೆ ಪ್ರಾಮುಖ್ಯತೆ ಕೊಡಬೇಕು. ಅಕೇಶಿಯಾ ಮರಗಳು ವಿದ್ಯುತ್ ಲೈನ್ ಮಧ್ಯದಲ್ಲಿ ಹಾದು ಹೋಗಿದ್ದರಿಂದ ಮಳೆಗಾಲದಲ್ಲಿ ಬರುವ ಗಾಳಿ, ಮಳೆಗೆ ವಾರಗಟ್ಟಲೆ ವಿದ್ಯುತ್ ಇಲ್ಲದೆ ಕಳೆಯಬೇಕು. ಹೀಗಾಗಿ ನಮ್ಮ ಗ್ರಾಮದ ಸಮಸ್ಯೆ ಪರಿಹಾರ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆ ಮುಂದೆ ಧರಣಿ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.