Header Ads
Breaking News

ಜ.16ರಿಂದ ಶ್ರೀ ಕ್ಷೇತ್ರ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶ್ರೀ ಕ್ಷೇತ್ರ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ, ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜನವರಿ 16ರಿಂದ 18ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಮಂಗಳೂರಿನ ಕಂಕನಾಡಿ ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

 

ಕಡಬ ತಾಲೂಕು ಎಣ್ಮೂರು ಗ್ರಾಮದ ಕೆಮ್ಮಲೆ, ಹೇಮಳದಲ್ಲಿರುವ ಪುರಾತನವಾದ ನಾಗಬ್ರಹ್ಮ ದೇವಸ್ಥಾನ, ಬ್ರಹ್ಮರ ಮೂಲಸ್ಥಾನ, ಉಳ್ಳಾಕುಲು, ಚಾಮುಂಡಿ ಹಾಗೂ ಪರಿವಾರ ದೈವಗಳ ಗುಡಿಗಳು ನವೀಖರಣಗೊಂಡಿದ್ದು, ಜನವರಿ 16ರಿಂದ 18ರವರೆಗೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನದ ಬಗ್ಗೆ ಸಾಕಷ್ಟು ಐತಿಹ್ಯವಿದೆ. ಆದರೆ ಅದು ಕಾಡಿನ ನಡುವೆ ಇರುವುದರಿಂದ ಹೆಚ್ಚಿನವರಿಗೆ ಅದರ ಬಗ್ಗೆ ಅರಿವಿಲ್ಲದ ಸ್ಥಿತಿಯಿತ್ತು. ಕೇವಲ ಕೋಟಿಚೆನ್ನಯರು ಮಾತ್ರವಲ್ಲ, ಇಡೀ ಕುಲಕ್ಕೆ ಕುಲದೈವ ನಾಗಬ್ರಹ್ಮರು. ಕೆಮ್ಮಲೆ ಅತ್ಯಂತ ಕಾರಣಿಕದ ಕ್ಷೇತ್ರದ. ಕೋಟಿ ಚೆನ್ನಯರಿಗೆ ಸಂಬಂಧಿಸಿದ ಯಾವುದೇ ಹೆಸರು ಬಂದರೂ ಮೊದಲು ಕೇಳಿಬರುವ ಹೆಸರು ನಾಗಬ್ರಹ್ಮರದ್ದು. ಈ ಹಿಂದೆ ಶಿಥಿಲಗೊಂಡ ಕ್ಷೇತ್ರದಲ್ಲಿ ಪೂಜಾದಿ ಪುನಸ್ಕಾರಗಳು ನಡೆಯುತ್ತಿತ್ತು. ಊರಿನ ಮಂದಿಗೆ ಅದನ್ನು ಜೀಣೋದ್ಧಾರ ಮಾಡಬೇಕೆನ್ನುವ ಇಚ್ಚೆಯಿತ್ತು. ಎಲ್ಲರ ಸಂಕಲ್ಪದಂತೆ ಇಂದು ಕ್ಷೇತ್ರವು ಜೀರ್ಣೊದ್ಧಾರಗೊಂಡಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ 1.74 ಕೋಟಿ ರೂ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ಹೇಳಿದರು. ಸಿಎಂ ಯಡಿಯೂರಪ್ಪನವರು 45 ಲಕ್ಷ ರೂ. ಅನುದಾನವನ್ನು ಒದಗಿಸಿದ್ದಾರೆ. ಉಳಿದಂತೆ ಶಾಸಕ ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರು ಅನುದಾನ ಒದಗಿಸಿದ್ದಾರೆ ಎಂದರು. ಜನವರಿ 16, 17 ಮತ್ತು 18ರಂದು ಮೂರು ದಿನಗಳ ಕಾಲ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.ಎಲ್ಲಾ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಕಾರ್ಯಕ್ರಮ ನಡೆಯಲಿದೆ. ಯಾವುದೇ ರೀತಿಯ ಅನನುಕೂಲಗಳಾಗದಂತೆ ಕಾರ್ಯಕ್ರಮವನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್, ಕಂಕನಾಡಿ ಬ್ರಹ್ಮಶ್ರೀ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಗರೋಡಿ, ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಕೆ., ಅಧ್ಯಕ್ಷ ಗಂಗಾಧರ ಹೇಮಳ, ಪ್ರಧಾನ ಕಾರ್ಯದರ್ಶಿ ಜಯರಾಮ ಐಪಳ, ಉಪಾಧ್ಯಕ್ಷರಾದ ಧನಂಜಯ ಕೇನಾಜೆ, ಕೋಶಾಧಿಕಾರಿ ಮೋನಪ್ಪ ಗೌಡ ಹೆಚ್., ಜೊತೆ ಕಾರ್ಯದರ್ಶಿ ಪ್ರವೀಣ್ ಹೇಮಳ, ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಾನಂದ ಕೆ., ಕಾರ್ಯದರ್ಶಿ ಜಯರಾಮ ಐಪಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಐಪಳ ಮತ್ತಿತರ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *