
ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ನಾಗರಾಜ್ ಕಾರ್ವಿ ಅವರು, ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಲು ಹೊರಟಿದ್ದಾರೆ. ಡಿಸೆಂಬರ್ 18ರಂದು ಮಂಗಳೂರಿನ ತಣ್ಣೀರುಬಾವಿಯ ಅರಬ್ಬಿ ಸಮುದ್ರದಲ್ಲಿ ಒಂದು ಕಿ.ಮೀ. ದೂರವನ್ನು ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಬ್ರೆಷ್ಟ್ ಸ್ಟ್ರೋಕ್ನಲ್ಲಿ ಈಜಲಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗರಾಜ್ ಕಾರ್ವಿ ಅವರು, ನಾನು ಪದವೀಧರ ಪ್ರಾಥಮಿಕ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಜನವರಿಯಲ್ಲಿ ಗುಜರಾತಿನ ವಡೋದರದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಮತ್ತು ಒಂದು ಕಂಚಿನ ಪದಕವನ್ನು ಪಡೆದಿದ್ದೇನೆ. ಇದರಿಂದ ಪ್ರೇರಣೆಗೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸುವ ಸಲುವಾಗಿ ಈಜು ಗುರುಗಳಾದ ಬಿ.ಕೆ. ನಾಯ್ಕ್ರ ಮಾರ್ಗದರ್ಶನದಲ್ಲಿ ಸರ್ವ ಇಲಾಖಾಧಿಕಾರಿಗಳ ಸಹಕಾರದೊಂದಿಗೆ ಡಿಸೆಂಬರ್ 18ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರಿನ ತಣ್ಣೀರು ಬಾವಿಯ ಅರಬ್ಬಿ ಸಮುದ್ರದಲ್ಲಿ ಬ್ರೆಷ್ಟ್ ಸ್ಟ್ರೋಕ್ನಲ್ಲಿ ಈಜಲಿದ್ದೇನೆ. ಈ ದಾಖಲೆಯ ಸಮಯದಲ್ಲಿ ಹರಸಿ ಆಶೀರ್ವದಿಸಿ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಈಜು ತರಬೇತಿದಾರರಾದ ಬಿ.ಕೆ. ನಾಯ್ಕ್, ಶಿವಾನಂದ್ ಗಟ್ಟಿ, ಲೋಕರಾಜ್, ಅಶೋಕ್ ಉಪಸ್ಥಿತರಿದ್ದರು.