ಪುತ್ತೂರು ನಗರ ಠಾಣೆ ಪೊಲೀಸ್ರು ಮಿಂಚಿನ ಕಾರ್ಯಾಚಾರಣೆ ನಡೆಸಿ ಮಾದಕ ದ್ರವ್ಯ ಸಾಗಾಟ ನಡೆಸುತಿದ್ದ ಎರಡು ಕಾರುಗಳನ್ನೂ ವಶ ಪಡಿಸಿ ಕೇರಳ ಮೂಲದ ಇಬ್ಬರು ಹಾಗೂ ಪುತ್ತೂರಿನ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 6 ಕೆಜಿ 360 ಗ್ರಾಂ ತೂಕದ ಗಾಂಜಾ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ
ಪೈವಳಿಕೆ ಗ್ರಾಮ ಮಂಜೇಶ್ವರ ನಿವಾಸಿ ಮಹಮ್ಮದ್ ಅರ್ಷದ್ (26), ಮಂಗಲ್ಪಾಡಿ ಗ್ರಾಮ ಉಪ್ಪಳ ನಿವಾಸಿ ರಿಯಾಜ್ (27) ಹಾಗೂ ಪುತ್ತೂರು ತಾಲೂಕು ಕಬಕ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಜಾಬೀರ್ (23) ಮತ್ತು ಪುತ್ತೂರು ತಾಲೂಕು ಬನ್ನೂರು ಗ್ರಾಮ ನಿವಾಸಿ ಅಬ್ದುಲ್ ನಜೀರ್ (37) ಬಂಧಿತ ಆರೋಪಿಗಳು. ಪುತ್ತೂರಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್ ಸಿಂಗ್ ರಸ್ತೆಯಲ್ಲಿ ಕೇರಳ ಹಾಗೂ ಕರ್ನಾಟಕ ನೋಂದಣಿಯ ಎರಡು ಕಾರುಗಳಲ್ಲಿ ಮಾದಕ ದ್ರವ್ಯ ಸಾಗಾಟ ನಡೆಸುತಿದ್ದಾಗ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಈ ದಾಳಿಯನ್ನು ನಡೆಸಿದರು. ಕೇರಳ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ ಸಾಗಾಟ ನಡೆಸುತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ.