Header Ads
Breaking News

ತಲಪಾಡಿ ಸಿಟಿ ಬಸ್ಸುಗಳಿಗೂ ಟೋಲ್ ನೀಡುವಂತೆ ನವಯುಗ ಸಂಸ್ಥೆ ನಿರ್ದೇಶನ

ಉಳ್ಳಾಲ: ಮಕ್ಕಳನ್ನು ಎತ್ತಿಕೊಂಡು ತಾಯಿ, ವಿಶೇಷ ಚೇತನರು, ವೃದ್ಧರು, ಬಡ ಕೂಲಿ ಕಾರ್ಮಿಕರು ಸೊತ್ತುಗಳನ್ನು ಹೊತ್ತು, ವಿದ್ಯಾರ್ಥಿಗಳು ಹೀಗೆ ಸಿಟಿ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ಒಂದು ಕಿ.ಮೀ ಉದ್ದ ನಡೆದುಕೊಂಡು ಬಂದ ಬಳಿಕವಷ್ಟೇ ಬಸ್ಸನ್ನು ಏರಬೇಕಿದೆ. ಇದು ತಲಪಾಡಿ ಟೋಲ್ ಎದುರುಗಡೆ ತಲಪಾಡಿ ಸಿಟಿ ಬಸ್ಸು ಪ್ರಯಾಣಿಕರು ಕಳೆದ ಒಂದು ತಿಂಗಳಿನಿಂದ ಅನುಭವಿಸುತ್ತಿರುವ ಸಮಸ್ಯೆಯಾಗಿದೆ.

ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ದಿನದಿಂದ ತಲಪಾಡಿ ಸಿಟಿ ಬಸ್ಸುಗಳಿಗೂ ಕಡ್ಡಾಯ ಟೋಲ್ ನೀಡುವಂತೆ ನವಯುಗ ಸಂಸ್ಥೆ ನಿರ್ದೇಶಿಸಿತ್ತು. ವಾರ್ಷಿಕವಾಗಿ ರೂ. 15,000 ನೀಡುವಂತೆಯೂ, 30 ಬಸ್ಸುಗಳಿಗೆ ರೂ.18 ಲಕ್ಷ ಪಾವತಿಸುವಂತೆ ಸಂಸ್ಥೆ ಕೇಳಿಕೊಂಡಿದೆ. ಆದರೆ ಇದಕ್ಕೆ ತಲಪಾಡಿ ಸಿಟಿ ಬಸ್ಸು ಮಾಲೀಕರ ಸಂಘ ರೂ. 4,100 ಪಾವತಿಸಲು ಬದ್ಧ, ಅಲ್ಲದೆ ಹೆಚ್ಚು ಸುಂಕ ಕಟ್ಟಿದಲ್ಲಿ ಅದರ ಹೊರೆಯನ್ನು ಬಡ ಪ್ರಯಾಣಿಕನ ಮೇಲೆ ಹಾಕಬೇಕಾಗುತ್ತದೆ. ಟಿಕೇಟಿಗೆ ರೂ. 3 ಏರಿಸುವುದು ಅನಿವಾರ್ಯ ಎಂಬುದು ಬಸ್ಸು ಮಾಲೀಕರ ವಾದ. ಈ ಕುರಿತು ಟೋಲ್ ಸಿಬ್ಬಂದಿ, ಬಸ್ಸು ಮಾಲೀಕರು ಉಳ್ಳಾಲ ಠಾಣೆಯಲ್ಲಿ ಮಾತುಕತೆ ನಡೆಸಿದರೂ, ಸಂಧಾನ ವಿಫಲವಾಗಿತ್ತು. ಅಲ್ಲದೆ ಫಾಸ್ಟ್ ಟ್ಯಾಗ್ ಕಡ್ಡಾಯದ ನಂತರ ಕೇವಲ ಒಂದು ಗೇಟಿನಲ್ಲಿ ನಗದು ಪಾವತಿಸುವ ವಾಹನಗಳಿಗೆ ಪ್ರವೇಶವನ್ನು ನೀಡಲಾಗಿದೆ.. ಆದರೆ ಒಂದು ತಿಂಗಳ ಕಾಲ ಟೋಲ್ ಸಂಸ್ಥೆಯವರು ಮಾತುಕತೆಗೆ ಬರುವವರೆಂದು ಬಸ್ಸು ಮಾಲೀಕರು ಟೋಲ್ ಎದುರುಗಡೆಯೇ ಬಸ್ಸು ನಿಲ್ಲಿಸಿದ ಪರಿಣಾಮವಾಗಿ ಪ್ರಯಾಣಿಕರು ಒಂದು ಕಿ.ಮೀ ವರೆಗೂ ಸುಡುಬಿಸಿಲಿನಲ್ಲಿ ನಡೆಯುವಂತಹ ದುಸ್ಥಿತಿ. ಇದನ್ನು ಖಂಡಿಸಿ ಸ್ಥಳೀಯ ನಾಗರಿಕರು, ಬಸ್ಸು ಮಾಲೀಕರ ಜತೆಗೆ ತಲಪಾಡಿ ಟೋಲ್ ಎದುರುಗಡೆ ಭಾನುವಾರ ಜಮಾಯಿಸಿ, ಸಮಸ್ಯೆಗೆ ಪರಿಹಾರ ನೀಡುವಂತೆ ಟೋಲ್ ಸಿಬ್ಬಂದಿಯನ್ನು ಒತ್ತಾಯಿಸಿದರು. ಈ ಸಂದರ್ಭ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಕರೀಂ ನಾಗತೋಟ, ಸಂಚಾಲಕ ಸತೀಶ್ ಕುದ್ರು, ತಾ.ಪಂ ಸದಸ್ಯೆ ಸಿದ್ದೀಖ್ ಕೊಳಂಗೆರೆ, ಡಿವೈ ಎಫ್ನ ಅಶ್ರಫ್ ತಲಪಾಡಿ, ಹುಸೈನ್ ತಲಪಾಡಿ, ಶಬೀರ್ ತಲಪಾಡಿ, ವಿನ್ನು ಶೆಟ್ಟಿ, ವೈಭವ್ ಶೆಟ್ಟಿ, ಗೋಪಾಲ ತಲಪಾಡಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *