Header Ads
Breaking News

ತಾಕತ್ತಿದ್ದರೆ ಬಿ.ವೈ. ರಾಘವೇಂದ್ರರ ಹೆಸರು ಹೇಳಿ ಮತ ಕೇಳಲಿ: ಮಾಜಿ ಶಾಸಕ ಗೋಪಾಲ ಪೂಜಾರಿ ಸವಾಲು

ಕುಂದಾಪುರ: ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಮೋದಿಯವರನ್ನು ಮುಂದಿಟ್ಟುಕೊಂಡು ಶಿವಮೊಗ್ಗ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತ ಯಾಚನೆಗೆ ಬಿಜೆಪಿ ಮುಂದಾಗಿದೆ. ಬಿಜೆಪಿಗರಿಗೆ ತಾಕತ್ತಿದ್ದರೆ ಬಿವೈ ರಾಘವೇಂದ್ರನವರ ಹೆಸರು ಹೇಳಿ ಮತ ಕೇಳಲಿ, ನಾವು ಮಧು ಬಂಗಾರಪ್ಪನವರ ಹೆಸರು ಹೇಳಿ ಮತ ಕೇಳುತ್ತೇವೆ. ಯಾರು ಗೆಲ್ಲುತ್ತಾರೆಂದು ಆಮೇಲೆ ನೋಡೋಣ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸವಾಲೆಸೆದಿದ್ದಾರೆ.

ಕುಂದಾಪುರದ ನೆಹರೂ ಮೈದಾನದಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಮೈತ್ರಿ ಅಭ್ಯರ್ಥಿಗಳ ಪರವಾಗಿ ನಡೆದ ಮಹಿಳಾ ಮೀನುಗಾರರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಓಟು ಅವರಿಗೆ, ಆದರೆ ಕೆಲಸ ಮಾಡೋದು ಮಾತ್ರ ನಾವು. ಓಟು ಅವರಿಗೆ ಹಾಕಿ ನೀವು ಕೆಲಸ ಮಾಡಿ ಎಂದರೆ ಅದು ಆಗೋದಿಲ್ಲ. ಓಟು ಕೊಟ್ಟರೆ ಮಾತ್ರ ನಿಮ್ಮ ಕೆಲಸ ಮಾಡುತ್ತೇವೆ. ನಮಗೂ ಸಾಕಷ್ಟು ನೋವಿದೆ. ನಾನು, ಪ್ರಮೋದ್, ಸೊರಕೆ ಸಿದ್ದರಾಮಯ್ಯನವರ ಮೇಜು ಕುಟ್ಟಿ ನಿಮ್ಮ ಪರವಾಗಿ ಅನುದಾನವನ್ನು ತಂದಿದ್ದೇವೆ. ಕರಾವಳಿ ಭಾಗದ ಮೈತ್ರಿ ಅಭ್ಯರ್ಥಿ ನಿಮ್ಮ ಸಮುದಾಯದ ಪ್ರಮೋದ್ ಮಧ್ವರಾಜ್ ಅವರಿಗೆ ಮತ ನೀಡುವುದರ ಮೂಲಕ ಮೈತ್ರಿ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದರು.

ಮೀನುಗಾರರಿಗೆ ಸೀಮೆಎಣ್ಣೆ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಮೀನುಗಾರರ ಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಮೀನುಗಾರರಿಗೆ ಏನೂ ಕೊಡುಗೆ ಕೊಟ್ಟಿಲ್ಲ. ಕರಾವಳಿ ಮೀನುಗಾರರ ಅಭ್ಯುದಯಕ್ಕೆ ಸಿದ್ದರಾಮಯ್ಯನವರ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ಕರಾವಳಿಯ ಅಲ್ಲಲ್ಲಿ ಮೀನುಗಾರರ ಸಮುದಾಯ ಭವನಕ್ಕೆ ಕೋಟಿಗಟ್ಟಲೆ ಅನುದಾನವನ್ನು ಸಿದ್ದರಾಮಯ್ಯನವರ ಸರ್ಕಾರ ನೀಡಿದೆ. ಯಾವ ಪಕ್ಷ ಮೀನುಗಾರರ ಪರ ಇದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಗೋಪಾಲ ಪೂಜಾರಿ ಭಾವೋದ್ವೇಗದಿಂದ ಮಾತನಾಡಿದರು.

Related posts

Leave a Reply

Your email address will not be published. Required fields are marked *