Header Ads
Header Ads
Breaking News

ತಾರಕಕ್ಕೆ ಏರಿದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿವಾದ : ಸಂಧಾನಕ್ಕೆ ಮುಂದಾದ್ರು ಪೇಜಾವರ ಶ್ರೀಗಳು

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಸುಬ್ರಹ್ಮಣ್ಯ ಮಠದ ನಡುವಿನ ವಿವಾದ ತಾರಕಕ್ಕೇರುತ್ತಿದೆ. ಇಲ್ಲಿರುವ ದೇವಸ್ಥಾನಕ್ಕೂ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಬಗ್ಗೆ ತಕರಾರು ಕೇಳಿ ಬರುತ್ತಿದೆ. ಮಾಧ್ವ ಸಂಪ್ರದಾಯದ ಅತ್ಯುನ್ನತ ಸಂಘಟನೆಯಾದ ತುಳು ಶಿವಳ್ಳಿ ಮಾದ್ವ ಮಹಾಮಂಡಲ ತಮ್ಮದೇ ಸಂಪ್ರದಾಯ ಪಾಲಿಸುವ ಸುಬ್ರಹ್ಮಣ್ಯ ಮಠದ ಬೆಂಬಲಕ್ಕೆ ನಿಂತಿದೆ. ಏನಿದು ವಿವಾದ? ಮಾಧ್ವ ಸಂಘಟನೆಯ ವಾದವಾದರೂ ಏನು? ಇಲ್ಲಿದೆ ನೋಡಿ ಸ್ಪೆಷಲ್ ರಿಪೋರ್ಟ್..ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿಯಂತಹಾ ಧಾರ್ಮಿಕ ಆಚರಣೆಗಳ ಮೂಲಕ ದೇಶದ ಗಮನ ಸೆಳೆದ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರದಲ್ಲಿ ಎದ್ದಿರುವ ಧಾರ್ಮಿಕ ಜಿಜ್ಞಾಸೆಯು ದಿನಕ್ಕೊಂದು ವಿವಾದದ ಸ್ವರೂಪ ಪಡೆಯುತ್ತಿದೆ. ಸುಬ್ರಹ್ಮಣ್ಯ ಮಠದಲ್ಲಿ ಸರ್ಪ ಸಂಸ್ಕಾರ ಅಥವಾ ಆಶ್ಲೇಷ ಬಲಿ ನಡೆಸಿದರೆ ಸೂಕ್ತಫಲ ಸಿಗಲ್ಲ, ದೇವಸ್ಥಾನಕ್ಕೂ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವಾದ ಜೋರಾಗಿ ಕೇಳಿಬರುತ್ತಿದೆ. ಆದರೆ ಇದು ಮಾದ್ವ ಸಮುದಾಯವನ್ನು ಕೆರಳಿಸಿದೆ. ಮಾದ್ವ ಮತದ ಮೂಲ ಕೇಂದ್ರವಾದ ಉಡುಪಿಯಲ್ಲಿ ಸುಬ್ರಹ್ಮಣ್ಯಮಠದ ಪರ ಬ್ಯಾಟಿಂಗ್ ನಡೆಸಲಾಗುತ್ತಿದೆ. ತುಳು ಶಿವಳ್ಳಿ ಮಾದ್ವ ಮಹಾಮಂಡಲದ ಪ್ರಮುಖರು ಕಾನೂನು ರೀತಿಯ ಹೋರಾಟ ನಡೆಸೋದಾಗಿ ಎಚ್ಚರಿಸಿದ್ದಾರೆ. ಮಠಕ್ಕೂ ದೇವಸ್ಥಾನಕ್ಕೂ ಪ್ರಾಚೀನವಾದ ಸಂಬಂಧವಿದೆ. ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಟಾಪಿಸಿದ್ದು ಆಚಾರ್ಯ ಮಧ್ವರೇ. ಮಾಧ್ವ ಮಠಗಳ ಸಂಪ್ರದಾಯದಂತೆ ತಂತ್ರಸಾರ ಆಗಮ ಪ್ರಕಾರವೇ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದೆ. ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಿಗೆ ಮಠಾಧೀಶರೇ ಮಂತ್ರೋಪದೇಶ ಹಾಗೂ ಮುದ್ರಾಧಾರಣೆ ಮಾಡುತ್ತಾರೆ. ಹಾಗಾಗಿ ಎರಡೂ ಕ್ಷೇತ್ರಗಳ ಸಂಬಂಧ ಅಲ್ಲಗಳೆಯುವಂತಿಲ್ಲ ಎಂದು ಗಮನಸೆಳೆದಿದ್ದಾರೆ.


 ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಕರಪತ್ರ ಹಂಚಲಾಗುತ್ತಿದೆ. ಅದರಲ್ಲಿ ಮಠದಲ್ಲಿ ಧಾರ್ಮಿಕ ಕಾರ್ಯ ನಡೆಸಲು ಅವಕಾಶವಿಲ್ಲ ಎಂದು ಬರೆಯಲಾಗಿದೆ ಅನ್ನೋದು ಮಾಧ್ವರ ಆರೋಪ. ಅಷ್ಟು ಮಾತ್ರವಲ್ಲ ಮಠಕ್ಕೆ ಹೋಗುವ ಮಾರ್ಗವನ್ನು ಅಡ್ಡಗಟ್ಟಲಾಗಿದೆ. ಇಷ್ಟಾಗಿಯೂ ಮಠದಲ್ಲಿ ಸೇವೆ ನಡೆಸುವವರ ಸಂಖ್ಯೆ ಕಡಿಮೆಯಾಗಿಲ್ಲ ಅನ್ನೋದು ತುಳು ಶಿವಳ್ಳಿ ಮಾದ್ವ ಮಹಾಮಂಡಲ ಸಂಘಟನೆಯ ಅಭಿಪ್ರಾಯ. ಸುಬ್ರಹ್ಮಣ್ಯ ಮಠದಲ್ಲಿ ಅಕ್ರಮ ನಡೆಯುತ್ತಿದೆ ಅನ್ನೋದೆಲ್ಲಾ ಸುಳ್ಳು. ಇಷ್ಟಕ್ಕೂ ದಳ್ಳಾಳಿಗಳ ಮೂಲಕ ಮಠಕ್ಕೆ ಭಕ್ತರನ್ನು ಕರೆಸಿ ಪೂಜಾಕಾರ್ಯ ನಡೆಸುತ್ತಿಲ್ಲ. ಬಯಸಿ ಬಂದರಷ್ಟೇ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಸೇವೆ ನಡೆಸಲಾಗುತ್ತೆ. ಇಲ್ಲಿ ನಡೆಯುವ ಪ್ರತಿಯೊಂದು ಪೂಜೆಗೂ ರಶೀದಿ ನೀಡಲಾಗುತ್ತೆ. ಸುಬ್ರಹ್ಮಣ ಮಠಾಧೀಶ ವಿದ್ಯಾಪ್ರಸನ್ನ ತೀರ್ಥರು ಸರಳ ಸಾಧು ಸ್ವಭಾವದವರು, ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾದರೆ ನಾವು ಸಹಿಸಲ್ಲ ಎಂದು ಉಡುಪಿಯ ಮಾಧ್ವರು ಎಚ್ಚರಿಸಿದ್ದಾರೆ. ಇತ್ತ ಮಠ ಹಾಗೂ ಕ್ಷೇತ್ರಗಳ ನಡೆದಿರುವ ಸಂಘರ್ಷಕ್ಕೆ ಇತೀಶ್ರೀ ಹಾಕಲು ಪೇಜಾವರ ಶ್ರೀಗಳು ಮುಂದಾಗಿದ್ದಾರೆ. ಸಂಧಾನಕ್ಕಾಗಿ ಶ್ರೀಗಳು ನಾಳೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದು ಎರಡೂ ಕ್ಷೇತ್ರದ ಮುಖ್ಯಸ್ರ್ಥರ ಜೊತೆ ಮಾತುಕತೆ ನಡೆಸಿ ಸಮನ್ವಯತೆಯನ್ನು ಸಾಧಿಸಲು ಪ್ರಯತ್ನಿಸಲಿದ್ದಾರೆ ಈ ಮೂಲಕ ವಿವಾದ ಇತ್ಯರ್ಥಕ್ಕೆ ಪೇಜಾವರ ಶ್ರೀಗಳು ಮುಂದಾಗಿದ್ದಾರೆ.

 ಕುಕ್ಕೆ ಸುಬ್ರಹ್ಮಣ್ಯ ಮಠ ಹಾಗೂ ಕ್ಷೇತ್ರದ ನಡುವೆ ಉಂಟಾಗಿರುವ ಸಂಘರ್ಷಕ್ಕೆ ಮುಜಾರಾಯಿ ಇಲಾಖೆ ಮಧ್ಯಪ್ರವೇಶಕ್ಕೂ ಒತ್ತಾಯ ಕೇಳಿಬರುತ್ತಿದೆ. ಆದ್ರೆ ಮಠ ಹಾಗೂ ದೇವಳ ನಡುವಿನ ತಿಕ್ಕಾಟಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಾ ಅಥವಾ ಪೇಜಾವರ ಶ್ರೀಗಳ ಸಂಧಾನ ಸಕ್ಸಸ್ ಆಗುತ್ತಾ ಅಂತ ಕಾದುನೋಡಬೇಕಿದೆ.

Related posts

Leave a Reply

Your email address will not be published. Required fields are marked *