Header Ads
Header Ads
Breaking News

ತುಳು ಜಾನಪದ ವೈದ್ಯ-ಮರುಚಿಂತನೆ ಕಾರ್ಯಕ್ರಮ : ದೇರಳಕಟ್ಟೆ ನಿಟ್ಟೆ ಸಭಾಂಗಣದಲ್ಲಿ ಆಯೋಜನೆ

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಿಟ್ಟೆ ಗುಲಾಬಿ ಶೆಟ್ಟಿ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯ ತುಳು ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ತುಳು ಜಾನಪದ ವೈದ್ಯ-ಮರುಚಿಂತನೆ ಹಾಗೂ ಅಂತರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ನಾಟಿ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮವು ನಿಟ್ಟೆ ಸಭಾಂಗಣದಲ್ಲಿ ನಡೆಯಿತು.

ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಭಾಷಾ ಮತ್ತು ತೌಲನಿಕ ಸಾಹಿತ್ಯ ಅಧ್ಯಯನ ನಿಕಾಯದ ಶೈಕ್ಷಣಿಕ ಸಂಯೋಜಕ ಹಾಗೂ ಪ್ರಾದ್ಯಾಪಕ ಡಾ| ಬಿ. ಶಿವರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಹದಲ್ಲಿ ಆಗುವ ಏರುಪೇರುಗಳನ್ನು ರೋಗವನ್ನಾಗಿ ಗ್ರಹಿಸದೆ ದೇಹವನ್ನು ಪ್ರಕೃತಿಯನ್ನಾಗಿ ಗ್ರಹಿಸಿ ಮದ್ದನ್ನು ಆಹಾರ ರೂಪದಲ್ಲಿ ನೀಡುವ ಸಂಸ್ಕೃತಿ ಜನಪದ ವೈದ್ಯ ಪದ್ಧತಿಯಾಗಿದ್ದು, ಈ ವೈದ್ಯ ಪದ್ಧತಿಯ ದಾಖಲೀಕರಣ ಮಾಡುವ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಲೋಪಥಿ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಕಾರ್ಯಗಳಾಗಿವೆ. ಮಹಾಮಾರಿಯಂತಹ ರೋಗಗಳನ್ನು ನಿಯಂತ್ರಿಸುವಲ್ಲಿ ಅಲೋಪಥಿ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಅಲೋಪಥಿಯೊಂದಿಗೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯ ವಿಚಾರದಲ್ಲಿ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ನಾಟಿ ವೈದ್ಯರೊಂದಿಗೆ ಸಂವಹನ ನಡೆಸುವ ಕಾರ್ಯವನ್ನು ನಿಟ್ಟೆ ವಿಶ್ವವಿದ್ಯಾನಿಲಯ ಆಯೋಜನೆ ಮಾಡಿದ್ದು, ಇಲ್ಲಿರುವ ಗುಣಾತ್ಮಕ ಅಂಶಗಳನ್ನು, ಗಿಡಮೂಲಿಕೆಗಳನ್ನು ಸಂಶೋಧನೆ ನಡೆಸುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರ ಯಶಸ್ವಿಯಾಗಿ ನಡೆಸಿದ್ದು ಮುಂದಿನ ದಿನಗಳಲ್ಲಿ ದಾಖಲೀಕರಣವನ್ನು ಮಾಡುವ ಕಾರ್ಯವನ್ನು ನಡೆಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯರಾದ ಪದ್ಯಾಣ ಶಂಕರಿ ಅಮ್ಮ, ತೋಕೂರು ಗುತ್ತು ವಾರಿಜಾಕ್ಷಿ ಶೆಟ್ಟಿ, ಮೀನಾಕ್ಷಿ ನಾರಾಯಣ ಆಚಾರ್ಯ ಬಿ.ಸಿ.ರೋಡ್, ಬಾಲಕೃಷ್ಣ ರೈ, ಈಶ್ವರಪ್ಪಯ್ಯ ಬೈರಿಕಟ್ಟೆ, ಪ್ರೇಮ ಧರೆಗುಡ್ಡೆ, ಸುಶೀಲ ದಿನೇಶ್ ರೈ ಚೆಂಡುಕಲ, ಜಗನ್ನಾಥ ಪಕ್ಕಳ ಇರಾ, ಹರಿಣಾಕ್ಷಿ ಶೆಟ್ಟಿ, ಬಿಲ್ಲಂಪದವು ನಾರಾಯಣ ಭಟ್, ರಮಣಿ ಕೊಣಾಜೆ ಅವರನ್ನು ಸನ್ಮಾನಿಸಲಾಯಿತು.

ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವೆ ಅಲ್ಕಾ ಕುಲಕರ್ಣಿ, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಸಿ.ಎಸ್ ಶಾಸ್ತ್ರಿ, ನಿಟ್ಟೆ ವಿಶ್ವವಿದ್ಯಾನಿಲಯ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ| ಸಾಯಿಗೀತಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *