Header Ads
Breaking News

ದೆಹಲಿ ಗಡಿಗಳು ಯುದ್ಧದ ಗಡಿಗಳಾಗಿ ಪರಿವರ್ತನೆಯಾಗಿವೆ:ಸಿರಿಮನೆ ನಾಗರಾಜು

`ಭಾರತದ ಇತಿಹಾಸದಲ್ಲಿ ಹಿಂದೆದೂ ನಡೆಯದ ಸುಧೀರ್ಘ ಹೋರಾಟ ಇದಾಗಿದೆ. ದೀರ್ಘಕಾಲ ಅಂದರೆ ವರ್ಷಗಟ್ಟಲೆ ಹೋರಾಟ ನಡೆಸಲು ರೈತರು ತಯಾರಿ ನಡೆಸಿದ್ದಾರೆ. ಒಕ್ಕೂಟ ಸರ್ಕಾರ ಇಡೀ ದೇಶದ ಜನತೆ ಮೇಲೆ ಯುದ್ಧ ಸಾರಿದೆ. ಸರ್ಕಾರ ಗಡಿ ರಕ್ಷಣಾ ಪಡೆಗಳನ್ನು ನಿಲ್ಲಿಸಿದ್ದಾರೆ. ರೈತರು ಹೋರಾಟ ನಡೆಸುತ್ತಿರುವ ಗಡಿಗಳು ಯುದ್ಧದ ಗಡಿಗಳಾಗಿ ಪರಿವರ್ತನೆಯಾಗಿದೆ’ ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಭಾಗವಹಿಸಿ ಹಲವು ದಿನಗಳ ಕಾಲ ಹೋರಾಟದಲ್ಲಿ ತೊಡಗಿಕೊಂಡಿದ್ದ ರಾಜ್ಯದ ಯುವ ಹೋರಾಟಗಾರ ತಂಡ ಇಂದು ರೈತ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ರೈತ ಹೋರಾಟಕ್ಕೆ ಜಯವಾಗಲಿ ಘೋಷಣೆ ಕೂಗುತ್ತಾ ಬೆಂಗಳೂರಿಗೆ ಬಂದಿಳಿದರು.
`ಉತ್ತರ ಪ್ರದೇಶಗಳ ಹಳ್ಳಿ ಹಳ್ಳಿ ಗಳಲ್ಲಿ ಕಿಸಾನ್ ಮಹಾಪಂಚಾಯತ್‍ಗಳು ನಡೆಯುತ್ತಿವೆ. ಕರ್ನಾಟಕದಲ್ಲಿಯೂ ಕಿಸಾನ್ ಮಹಾಪಂಚಾಯತ್‍ಗಳು ನಡೆಯುತ್ತಿದ್ದು, ರೈತ ಮುಖಂಡರು ಕರ್ನಾಟಕಕ್ಕೂ ಬರಲಿದ್ದಾರೆ. ಸಂಯುಕ್ತ ರೈತ ಹೋರಾಟ ಸಮಿತಿಯಿಂದ ಕರ್ನಾಟಕದಲ್ಲಿ ತಾಲ್ಲೂಕು ಮಟ್ಟದಲ್ಲಿ ಕಿಸಾನ್ ಪಂಚಾಯತ್‍ಗಳು ನಡೆಯಲಿವೆ’ ಎಂದರು.

ಯುವ ಹೋರಾಟಗಾರ ಸಂತೋಷ್ ಮಾತನಾಡಿ, ‘ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಹೋರಾಟ ನಡೆಯುತ್ತಲಿರುವ 4 ಗಡಿಗಳಿಗೂ ನಾವು ಭೇಟಿ ಕೊಟ್ಟಿದ್ದೇವೆ. ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರಿಗೆ ನಾವು ನಿಜಕ್ಕೂ ಧನ್ಯವಾದ ಹೇಳಬೇಕು. ಏಕೆಂದರೆ ಕೃಷಿ ಕಾಯ್ದೆಗಳು ರೈತ ಸಮುದಾಯಕ್ಕೆ ಹೇಗೆ ಮಾರಕವಾಗಲಿವೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿಟ್ಟುಕೊಂಡು ಅವರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ದೇಶದ ಮೂಲೆ ಮೂಲೆಗೂ ತಲುಪಬೇಕು. ಬೆಳೆಗೆ ಕನಿಷ್ಠ ಬೆಂಬಲ ಸಿಗಬೇಕು ಎಂಬುದು ರೈತರ ಒಕ್ಕೊರಲ ಬೇಡಿಕೆಯಾಗಿದೆ. ರೈತ ಹೋರಾಟದಲ್ಲಿ ಯುವ ಜನತೆ ಭಾಗಿಯಾಗುವ ಅಗತ್ಯವಿದೆ’ ಎಂದರು.

ಕೊಡಗಿನ ಯುವ ಹೋರಾಟಗಾರ್ತಿ ಕಾವೇರಿ ಮಾತನಾಡಿ, `ಭಾರತೀಯರಾದ ನಾವು ಕರಾಳ ದಿನಗಳಲ್ಲಿ ಬುದುಕು ದೂಡುತ್ತಿದ್ದೇವೆ.. ಇಂತಹ ಸಂದರ್ಭದಲ್ಲಿ ಎಲ್ಲೆಡೆಯೂ ಆತಂಕ ಮನೆ ಮಾಡಿದೆ. ಭಾರತದ ಭವಿಷ್ಯ ಎತ್ತ ಸಾಗುತ್ತಿದೆ ಎಂಬ ಭಯ ಎಲ್ಲರಲ್ಲೂ ಇತ್ತು. ಆದರೆ, ಈಗ ಆಡಳಿತರೂಢ ಸರ್ಕಾರದ ಮೇಲಿನ ಕಿಚ್ಚು ದೇಶದ ತುಂಬೆಲ್ಲ ಹಬ್ಬುತ್ತಿದೆ. ಸದ್ಯ ಭಾರತದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಈ ಹೋರಾಟಕ್ಕೆ ರೈತರು ಮಾತ್ರವಲ್ಲ ನಾವೆಲ್ಲರೂ ಕೈಜೋಡಿಸಬೇಕು’ ಎಂದರು.

ಕಳೆದ ಮೂರು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳ ವಿವಿಧ ಸಂಘಟನೆಗಳ ಹೋರಾಟಗಾರರ `ದಕ್ಷಿಣ ಭಾರತ ನಿಯೋಗ’ ಭಾಗವಹಿಸಿತ್ತು. ಕರ್ನಾಟಕದಿಂದ ಕರ್ನಾಟಕ ಜನಶಕ್ತಿ, ಕರ್ನಾಟಕ ಶ್ರಮಿಕ ಶಕ್ತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಸುಮಾರು 60ಕ್ಕೂ ಹೆಚ್ಚು ಹೋರಾಟಗಾರರು ಒಂಬತ್ತು ದಿನಗಳ ಕಾಲ ಹೋರಾಟದಲ್ಲಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *