Header Ads
Breaking News

ದ.ಕ. ಜಿಲ್ಲೆಯಲ್ಲಿಂದು ಸರಕಾರಿ ಬಸ್‍ಗಳ ಓಡಾಟ ಆರಂಭ

ಲಾಕ್‍ಡೌನ್‍ನ ಸಡಿಲಿಕೆಯ ಹಿನ್ನೆಲೆಯಲ್ಲಿ ಅಂತರ್ ಜಿಲ್ಲೆ ಸೇರಿದಂತೆ ಜಿಲ್ಲಾಯೊಳಗೆ ಸರಕಾರಿ ಬಸ್ಸುಗಳ ಸಂಚಾರಕ್ಕೆ ರಾಜ್ಯ ಸರಕಾರ ಅನುಮತಿ ನೀಡಿರುವಂತೆಯೇ, ದ.ಕ. ಜಿಲ್ಲೆಯಲ್ಲಿ ಇಂದು ಕೆಲವೊಂದು ಸರಕಾರಿ ಬಸ್ಸುಗಳು ಓಡಾಟ ಆರಂಭಿಸಿವೆ.

ಲಾಕ್‍ಡೌನ್ ಸುಮಾರು ಎರಡು ತಿಂಗಳ ಬಳಿಕ ಕೆಎಸ್ಸಾಟಿಸಿ ಬಸ್ಸುಗಳು ಮಂಗಳೂರಿನಿಂದ ಬೆಂಗಳೂರು ಸಹಿತ ಕೆಲ ಜಿಲ್ಲೆಗಳಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿವೆ. ನಗರದ ಬಿಜೈಯ ಕೆಎಸ್ಸಾಟಿಸಿ ಬಸ್ಸು ನಿಲ್ದಾಣದಿಂದ ಇಂದು ಬೆಂಗಳೂರಿಗೆ ಹೊರಟ ಮೊದಲ ಬಸ್ಸಿನಲ್ಲಿ 29 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಾಸ್ಕ್, ಸುರಕ್ಷಿತ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕಾದ ಹಿನ್ನೆಲೆಯಲ್ಲಿ ಬಸ್ಸೊಂದರಲ್ಲಿ 30 ಪ್ರಯಾಣಿಕರಿಗೆ ಮಾತ್ರವೇ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ದ.ಕ. ಜಿಲ್ಲೆಯೊಳಗೂ ಬೇಡಿಕೆ ಇರುವಲ್ಲಿಂದ 30 ಪ್ರಯಾಣಿಕರೊಂದಿಗೆ ಬಸ್ ಸಂಚಾರ ಆರಂಭಗೊಂಡಿದೆ. ಹೊರ ಜಿಲ್ಲೆಗಳಿಂದ ಮಂಗಳೂರಿಗೆ ಕೂಡಾ ಬೆಳಗ್ಗೆ 7 ಗಂಟೆಗೆ ಬಸ್ಸು ಸಂಚಾರ ಆರಂಭಗೊಂಡಿವೆ. ಎಷ್ಟು ಬಸ್ಸುಗಳು, ಯಾವ ಜಿಲ್ಲೆಗಳಿಂದ ಬರಲಿವೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ದ.ಕ. ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಮಂಗಳೂರಿನಿಂದ 6 ಬಸ್ಸುಗಳು ಈಗಾಗಲೇ ಹೊರಟಿವೆ. ಸುರಕ್ಷಿತ ಕ್ರಮಗಳೊಂದಿಗೆ ಬಸ್ಸು ಸಂಚಾರ ನಡೆಯುತ್ತಿದೆ” ಎಂದು ಕೆಎಸ್ಸಾಟಿಸಿ ಮಂಗಳೂರು ವಿಭಾಗದ ಮುಖ್ಯ ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳ ಪ್ರಯಾಣಕ್ಕೆ ಸದ್ಯ ಅವಕಾಶವಿಲ್ಲ. ಮಾತ್ರವಲ್ಲದೆ, ಪ್ರಯಾಣದ ನಿಗದಿತ ತಾಣಕ್ಕೆ ಸಂಚಾರದ ನಡುವೆ ದಾರಿ ಮಧ್ಯೆ ಯಾರೂ ಬಸ್ಸು ಹತ್ತುವಂತಿಲ್ಲ ಎಂಬ ನಿಯಮಗಳೊಂದಿಗೆ ಬಸ್ಸು ಸಂಚಾರ ಆರಂಭವಾಗಿದೆ

Related posts

Leave a Reply

Your email address will not be published. Required fields are marked *