Header Ads
Header Ads
Breaking News

ಧರ್ಮಸ್ಥಳ : ದಿಗ್ವಿಜಯಯಾತ್ರೆಯಲ್ಲಿ ಕಂಗೊಳಿಸಿದ ಕಲಾಶೈಲಿಗಳು

 

 

 

ಧರ್ಮಸ್ಥಳ: ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಆಯೋಜಿತವಾಗಿರುವ ಪಂಚ ಮಹಾವೈಭವರೂಪಕದ ಭಾಗವಾಗಿ ಬಿಂಬಿತವಾದ ಭರತಚಕ್ರವರ್ತಿಯ ದಿಗ್ವಿಜಯಯಾತ್ರೆಯಲ್ಲಿ ವಿವಿಧಕಲಾ ಶೈಲಿಗಳು ನೆರೆದವರ ಗಮನ ಸೆಳೆಯಿತು. ಭರತನಯಾತ್ರೆಯಲ್ಲಿನ ಕಲೆಗಾರರ ವೇಷಭೂಷಣವು ವರ್ಣರಂಜಿತವಾಗಿತ್ತು. ಬೇಡರ ವೇಷಧಾರಿಗಳು ಬೆನ್ನಿಗೆ ನವಿಲುಗರಿ, ಕಾಲಿಗೆ ಗೆಜ್ಜೆ, ದಪ್ಪನೆ ಮೀಸೆ, ಕೈಯಲ್ಲಿ ಕತ್ತಿ, ಕೊರಳ ತುಂಬ ಆಭರಣ ಧರಿಸಿ ಕುಣಿಯುವ ದೃಶ್ಯ ಎಲ್ಲರನ್ನೂ ಬೆರಗುಗೊಳಿಸಿತ್ತು.

ಆದಿವಾಸಿ ವೇಷಧಾರಿಗಳು ಕಪ್ಪು ಬಣ್ಣದ ಬಟ್ಟೆಯ ಮೇಲೆ ಹುಲಿಯ ಚರ್ಮವನ್ನು ಹೋಲುವ ಉಡುಪನ್ನು ಧರಿಸಿದ್ದರು. ತಲೆಗೆ ಹಕ್ಕಿಯ ಪುಕ್ಕಗಳನ್ನು ಕಟ್ಟಿಕೊಂಡಿದ್ದರು. ಕೈಯಲ್ಲಿ ಬಿಲ್ಲು ಬಾಣವನ್ನು ಹಿಡಿದಿದ್ದರು. ತಮಟೆಯ ಸದ್ದು ವೇಷಧಾರಿಗಳನ್ನು ಹೆಜ್ಜೆ ಹಾಕುವಂತೆ ಉತ್ತೇಜಿಸುತ್ತಿತ್ತು. ದಾರಿಯುದ್ದಕ್ಕು ಸಾಹಸಗಳನ್ನು ಪದರ್ಶಿಸಿದರು. ಈ ಸಾಹಸ ನೋಡುಗರನ್ನು ನಿಬ್ಬೆರಗಾಗಿಸಿತು. ಡೊಳ್ಳು ಕುಣಿತದ ವಾದನ ಪ್ರಕಾರಗಳಾದ ಕುಳಿತು ಬಾರಿಸುವುದು, ಲಾಗ ಹಾಕುವುದು, ಹಾರಿ ಬಾರಿಸುವುದು, ಮಂಡಿ ಬಡಿತ, ಒಂದ್ಹೆಜ್ಜೆ ಕುಣಿತ, ಜೋಡುಕುಣಿತ, ಎರಡ್ಡೆಜ್ಜೆ ಕುಣಿತಗಳು ಬಹಳ ಆಕರ್ಷಕವಾಗಿದ್ದವು. ಯಾತ್ರೆಯ ಮೆರಗನ್ನು ಇನ್ನೂ ಹೆಚ್ಚಿಸಿದವು.

ವೀರಗಚ್ಚೆ ಹಾಕಿದಕಲಾವಿದರು ಧರಿಸಿದ್ದ ಪೇಟ ಕಿವಿಗೆ ಕಡಕು, ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷ ಬ್ರಹ್ಮನ ಶಿರವನ್ನು ತ್ತೊಟ್ಟಿದ್ದರು. ತಲೆಗೆ ರೇಷ್ಮೆಯಿಂದ ತಯಾರಿಸಿದ ಚೌಲಿಯನ್ನು ಕಟ್ಟಿಕೊಂಡಿದ್ದರು, ಕಲಾವಿದರು ಕೆಂಪು ಬಣ್ಣದ ಪೈಜಾಮನ್ನು ಧರಿಸಿದ್ದು, ಕೈಯಲ್ಲಿ ಖಡ,್ಗ ಕಾಲಿಗೆ ಗೆಜ್ಜೆ ಕಟ್ಟಿ ಕಂಚಿನ ಲಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು.

ಕಹಳೆಯ ನಾದ ಈಡೀ ಯಾತ್ರೆಯ ತುಂಬೆಲ್ಲ ಮೊಳಗುತಿತ್ತು. ಕಲಾ ಪ್ರದರ್ಶನದ ಸಂದರ್ಭದಲ್ಲಿ ಕೋಟು ಪೇಟ ಧರಿಸಿ ಉಸಿರನ್ನು ಬಿಗಿ ಹಿಡಿದು ಕಹಳೆ ಊದುವ ದೃಶ್ಯ ಬಹಳ ವಿಶೇಷವಾಗಿದ್ದು, ನೆರೆದಿದ್ದವರನ್ನು ರಂಜಿಸಿತು. ಜೊತೆಗೆ ಕತ್ತಿವರಸೆ, ನಂದಿಕೋಲಿನ ನೃತ್ಯವನ್ನು ಸಹ ಜನಕಣ್ತುಂಬಿಕೊಂಡ್ಡರು. ಜಟ್ಟಲಗಿಯ ಮೇಲೆ ತಮಟೆ ಬಾರಿಸುತ್ತಿದ್ದ ಪರಿ ಎಲ್ಲರ ಗಮನ ಸೆಳೆಯಿತು. ಇವೆಲ್ಲದರ ಜೊತೆಗೆ ಚೆಂಡೆಯ ನಾದ ಎಲ್ಲಾ ಕಲಾವಿದರಿಗೆ ಆಯಾಸ ಮರೆಸುವಂತಿತ್ತು.

ಧರ್ಮಸ್ಥಳದಿಂದ ಶಾಂತಿವನದವರೆಗೆ ಸಾಗಿದ ಈ ಯಾತ್ರೆಯಲ್ಲಿ ಸುಮಾರು ಮೂರು ಸಾವಿರ ಮಂದಿ ಬಾಗವಹಿಸಿದ್ದರು. ರಾಜ, ಮಂತ್ರಿ ಪುರಜನ ಸೈನಿಕರು ಸೇರಿದಂದೆ ಭರತೇಷ ಬಾಹುಬಲಿಯ ಸಾಮ್ರಾಜ್ಯವನ್ನು ನೇರವಾಗಿ ನೋಡಿದಂತಿತ್ತುಈ ದಿಗ್ವಿಜಯಯಾತ್ರೆ.

ಪ್ರಶಾಂತ್ ಎಸ್ ಕೆಳಗೂರ್, 

ಪ್ರಥಮ ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

 

 

 

 

Related posts

Leave a Reply