Header Ads
Breaking News

’ನಾಗರಿಕ ಪ್ರಜ್ಞೆ’ ಕುರಿತು ವಿಶೇಷ ಸಂಚಿಕೆ ಬಿಡುಗಡೆ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಬರಹಗಾರರು ರೂಪಿಸಿದ ’ನಾಗರಿಕ ಪ್ರಜ್ಞೆ’ ಶೀರ್ಷಿಕೆಯ ವಿಶೇಷ ಸಂಚಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು. ಸಮಾಜಕಾರ್ಯ ವಿಭಾಗ ನಾಗರಿಕ ಪ್ರಜ್ಞೆಯ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ’ಸಂಭ್ರಮ 2019’ ರ ವಿಶೇಷ ವರದಿ,ವಿಶ್ಲೇಷಣೆ ಮತ್ತು ಸಚಿತ್ರ ಬರಹಗಳನ್ನು ಈ ವಿಶೇಷ ಸಂಚಿಕೆ ಒಳಗೊಂಡಿದೆ.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ರವಿಶಂಕರ್ ಕೆ ಆರ್ ಅವರಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು ವಿಶೇಷ ಸಂಚಿಕೆಯು ವಿಭಾಗದ ವಿದ್ಯಾರ್ಥಿಗಳ ಬರವಣಿಗೆಯ ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎಂದರು. ಕಲಿಕೆಯ ಅವಧಿಯಲ್ಲಿ ಈ ತರಹದ ಪ್ರಯೋಗಗಳು ವೃತ್ತಿಪರತೆಗೆ ಅಡಿಪಾಯ ಹಾಕಿಕೊಡುತ್ತವೆ ಎಂದರು.

ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ರವಿಶಂಕರ ಕೆ ಆರ್ ಮಾತನಾಡಿದರು. ಸಮಾಜಕಾರ್ಯ ಮತ್ತು ಪತ್ರಿಕೋದ್ಯಮ ವಿಭಾಗಗಳೆರಡೂ ಮೌಲಿಕ ಪಠ್ಯ ಮತ್ತು ಪ್ರಾಯೋಗಿಕ ಅನ್ವಯಿಸುವಿಕೆಯನ್ನೇ ಅವಲಂಬಿಸಿವೆ. ಸಕಾರಾತ್ಮಕ ಚಿಂತನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ವಿಧಾನ ಈ ಸಂಚಿಕೆಯಿಂದ ನಿರೂಪಿತವಾಗಿದೆ ಎಂದರು. ಭವಿಷ್ಯದಲ್ಲಿ ಎರಡೂ ವಿಭಾಗಗಳು ಸಮನ್ವಯ ಸಾಧಿಸಿ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.

ವಿಚಾರ ಸಂಕಿರಣದಲ್ಲಿ ನಾಗರಿಕ ಪ್ರಜ್ಞೆಯನ್ನು ಕೇಂದ್ರೀಕರಿಸಿಕೊಂಡು ವಿವಿಧ ಗೋಷ್ಠಿಗಳಲ್ಲಿ ಚರ್ಚೆಗಳು ನಡೆದಿದ್ದವು. ವಿವಿಧ ಕಾಲೇಜುಗಳಿಂದ ಸಂಪನ್ಮೂಲ ವ್ಯಕ್ತಿಗಳು,ಸಂಶೋಧನಾ ವಿದ್ಯಾರ್ಥಿಗಳು ಆಗಮಿಸಿದ್ದರು. ಇವುಗಳ ಸಂಪೂರ್ಣ ವಿವರಗಳನ್ನು ಸಂಚಿಕೆ ಒಳಗೊಂಡಿದೆ.
ಇಂದಿನ ತುರ್ತು ಅಗತ್ಯವಾದ ನಾಗರಿಕ ಪ್ರಜ್ಞೆಯನ್ನು ಮೂಲ ಆಶಯವಾಗಿರಿಸಿಕೊಂಡು ವಿಶೇಷ ಸಂಚಿಕೆಯನ್ನು ರೂಪಿಸಿರುವುದು ವಿಶೇಷ. ಪ್ರೊ.ಭಾಸ್ಕರ ಹೆಗಡೆ ಸಂಪಾದಕತ್ವದಲ್ಲಿ ದ್ವಿತೀಯ ವರ್ಷದ ಎಂಸಿಜೆ ವಿದ್ಯಾರ್ಥಿಗಳಾದ ಮೋಕ್ಷಾ ರೈ, ತಾರುಣ್ಯಾ ಸನೀಲ್, ತ್ರಿಪುರಾ ರತ್ನಾಕರ, ಕಿರಣ್ ಎಂ, ಪ್ರಥ್ವಿರಾಜ್ ಭಂಡಾರಿ, ಪ್ರಜ್ವಲ್ ಎನ್.ಆರ್ ಮತ್ತು ಗುರುಗಣೇಶ ಭಟ್ ಅವರ ತಂಡ ಈ ಸಂಚಿಕೆಯನ್ನು ರೂಪಿಸಿದೆ.

Related posts

Leave a Reply

Your email address will not be published. Required fields are marked *