Header Ads
Breaking News

ನಾಡ ಹಬ್ಬ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ; ಈ ಬಾರಿ ಸಾಂಪ್ರದಾಯಿಕ ಮೆರವಣಿಗೆ

ಉಡುಪಿಯ ನಾಡ ಹಬ್ಬ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಡುಪಿಯ ಕೃಷ್ಣನ ನಗರಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು ಅದಮಾರು ಮಠದ ಪರ್ಯಾಯಕ್ಕೆ ಸಿದ್ದತೆ ಪೂರ್ಣಗೊಂಡಿದೆ.

ಉಡುಪಿಯ ನಾಡ ಹಬ್ಬ ಪರ್ಯಾಯ ಮಹೋತ್ಸವಕ್ಕೆ ಕೃಷ್ಣನ ನಗರಿ ಸಜ್ಜುಗೊಂಡಿದೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಬರುವ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಪರ್ಯಾಯ ಮಹೋತ್ಸವ ಎಂದರೆ ಇಡೀ ಉಡುಪಿಯ ಜನತೆ ನಿದ್ದೆ ಮಾಡದೇ ಜಾಗರಣೆಯಲ್ಲಿರುತ್ತಾರೆ. ಎಲ್ಲರ ಕಾತರ, ಸಂಭ್ರಮದ ಘಳಿಗೆ ಆರಂಭವಾಗಿದೆ. 800ವರ್ಷಗಳ ಹಿಂದೆ ಮದ್ವಚಾರ್ಯಯರು ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಸ್ಥಾಪಿಸಿ ನಂತರ ಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ ಯತಿಗಳನ್ನು ನೇಮಿಸಿದರು. ಮಾತ್ರವಲ್ಲದೇ ಎರಡು ತಿಂಗಳಿಗೊಮ್ಮೆ ಒಂದೊಂದು ಮಠಕ್ಕೆ ಪೂಜೆ ಮಾಡುವ ಅಧಿಕಾರ ಹಸ್ತಾಂತರವಾಗುತ್ತಿತ್ತು. ವಾದಿರಾಜರ ಕಾಲದಲ್ಲಿ ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಈ ಪದ್ದತಿಯನ್ನು ಬದಲಾವಣೆ ಮಾಡಿ ಎರಡು ವರ್ಷಕೊಮ್ಮೆ ಬದಲಾಯಿಸಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆಯಂತೆ ಒಂದೊಂದು ಮಠದ ಯತಿಗಳು ಕೃಷ್ಣನ ಪೂಜಾ ಕೈಂಕರ್ಯದ ಜವಾಭ್ಧಾರಿಯನ್ನು ಹೊರುತ್ತಾರೆ. ಈ ಬಾರಿ ಅದಮಾರು ಮಠದ ಪರ್ಯಾಯ. ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಪೀಠಾರೋಹಣಗೈಯಲಿದ್ದು ಎಲ್ಲವೂ ಸಿದ್ದತೆ ಪೂರ್ಣಗೊಂಡಿದೆ.

ಅದಮಾರು ಮಠದ ಪೀಠಾರೋಹಣದ ಕ್ಷಣ ಗಣನೆ ಆರಂಭವಾಗಿದ್ದು ಕಾಪು ದಂಡ ತೀರ್ಥದಲ್ಲಿ 1.20ಕ್ಕೆ ಪವಿತ್ರ ಸ್ನಾನ ಮುಗಿಸಿದ ಬಳಿಕ ಈಶಪ್ರೀಯ ತೀರ್ಥ ಶ್ರೀಪಾದರು ಒಂದು ಐವತಕ್ಕೆ ಜೋಡುಕಟ್ಟೆಗೆ ಆಗಮಿಸಿ ಮಂಟಪದ ಪಟ್ಟದ ದೇವರಿಗೆ ಪೂಜೆ ನಡೆಸಲಿದ್ದಾರೆ. ನಂತರ ಭವ್ಯ ಮೆರವಣಿಗೆ ಆರಂಭಗೊಳ್ಳಲಿದೆ. ಈ ಬಾರಿ ಮೆರವಣಿಗೆಯಲ್ಲಿ ಶ್ರೀಗಳ ಕೋರಿಕೆಯಂತೆ ಬದಲಾವಣೆಯಾಗಿದೆ. ಮೊದಲಿಗೆ ಬಿರುದಾವಳಿ, ಜಾನಪದ ತಂಡಗಳ ಕಾಲ್ನಡಿಗೆಯ ಮೆರವಣಿಗೆ ಬಳಿಕ ಪರ್ಯಾಯ ಶ್ರೀಗಳು ಸಾಂಪ್ರದಾಯಿಕ ಮೇನೆಯಲ್ಲಿ (ಮಾನವ ಪಲ್ಲಕಿ)ಸಾಗಲಿದ್ದು ನಂತರ ಅಷ್ಟ ಮಠಾದೀಶರು ಸಾಗಿ ಬರಲಿದ್ದಾರೆ. ನಂತರ ವಿವಿಧ ಟ್ಯಾಬ್ಲೋಗಳು ಸಾಗಿ ಬರಲಿದೆ. ಈ ಬಾರಿ ಸರಕಾರಿ ಇಲಾಖೆಗಳಿಂದ ನಾಲ್ಕು ಟ್ಯಾಬ್ಲೋಗಳು, ಶ್ರೀ ಕೃಷ್ಣ ಸೇವಾ ಬಳಗದ ಉಸ್ತುವಾರಿಯಲ್ಲಿ 14 ಟ್ಯಾಬ್ಲೋಗಳು, 18 ಕಲಾ ತಂಡಗಳು ಹಾಗೂ ಸರಕಾರ ಮಟ್ಟದಲ್ಲಿ ಹದಿನೈದು ಕಲಾ ಪ್ರಕಾರಗಳು ಈ ಪರ್ಯಾಯದ ಮೆರವಣಿಗೆಯಲ್ಲಿ ಮೆರುಗು ತರಲಿವೆ. ಕೃಷ್ಣ ಮಠದ ರಥಬೀದಿಗೆ ಸುಮಾರು 4.30ಕ್ಕೆ ಮೆರವಣಿಗೆ ತಲುಪಲಿದ್ದು ಶ್ರೀಗಳು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ, ಅನಂತೇಶ್ವರ, ಚಂದ್ರಮೌಳೀಶ್ವರ ದರ್ಶನ ಪಡೆದು ಬೆಳಗ್ಗೆ ಐದು ಮೂವತ್ತಕ್ಕೆ ಶ್ರೀ ಕೃಷ್ಣ ಮಠ ಪ್ರವೇಶ ಮಾಡಲಿದ್ದಾರೆ. ಅದಮಾರು ಕಿರಿಯ ಶ್ರೀಗಳು ಐದು ಐವತ್ತೇಳಕ್ಕೆ ಪಲಿಮಾರು ಶ್ರೀಗಳಿಂದ ಅಕ್ಷಯ ಪಾತ್ರೆಸ್ವೀಕಾರ ಹಾಗೂ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 10 ಗಂಟೆಗೆ ಮಹಾ ಪೂಜೆ ನೆರವೇರಿಸಲಿದ್ದು ಈ ಬಾರಿಯ ಪರ್ಯಾಯ ದರ್ಬಾರ್ ಸಭೆಯನ್ನು ಮದ್ಯಾಹ್ನ 2.30ಕ್ಕೆ ನಡೆಸಲು ನಿರ್ಧರಿಸಲಾಗಿದ್ದು ರಾಜಾಂಗಣದಲ್ಲಿ ಈ ದರ್ಬಾರ್ ಸಭೆ ನಡೆಯಲಿದೆ. ಈ ದರ್ಬಾರ್ ಸಭೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮಣ್ ಸೇರಿದಂತೆ ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

ಒಟ್ಟಾರೆಯಾಗಿ ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ನಾಡ ಹಬ್ಬ ಪರ್ಯಾಯ ಮಹೋತ್ಸವಕ್ಕೆ ಜನತೆಯಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ಹೊಸ ಯೋಜನೆಯೊಂದಿಗೆ ಅದಮಾರು ಶ್ರೀಗಳು ಪರ್ಯಾಯದ ಪೀಠಾರೋಹಣ ಮಾಡುತ್ತಿದದರೆ. ಪ್ಲಾಸ್ಟಿಕ್ ಮುಕ್ತವಾದ ಪರ್ಯಾಯೋತ್ಸವ ನಡೆಸಲು ಈಗಾಗಲೇ ಯೋಜನೆ ಹಾಕಿರುವ ಶ್ರೀಗಳ ಆಶಯದಂತೆ ಇಡೀ ಕೃಷ್ಣ ನ ನಗರಿ ಪ್ಲಾಸ್ಟಿಕ್ ಮುಕ್ತ ಶ್ರೂಂಗಾರದಿಂದ ಕಂಗೊಳಿಸುತ್ತಿದೆ. ಈಗಾಗಲೇ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನೂ ಸಹ ಪೂರ್ಣಗೊಳಿಸಲಾಗಿದ್ದು ಈ ಅಪೂರ್ವ ಸನ್ನಿವೆಶಕ್ಕೆ ಜನರು ಕಾತರದಿಂದ ಕಾಯುತ್ತಿದ್ದಾರೆ.

Related posts

Leave a Reply

Your email address will not be published. Required fields are marked *