Header Ads
Breaking News

ನಾವೂರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅಷ್ಟಬಂಧ ಧಾರ್ಮಿಕ ಕಾರ್ಯಕ್ರಮ

ನಾವೂರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ 10.30 ರಿಂದ 11.10 ರವರೆಗಿನ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಾಯ ನಾವೂರೇಶ್ವರ ದೇವರು, ಶ್ರೀ ವಿಷ್ಣುಮೂರ್ತಿ ದೇವರು ಹಾಗೂ ಗಣಪತಿ ದೇವರ ಪ್ರತಿಷ್ಠೆ ಹಾಗೂ ಅಷ್ಟ ಬಂಧ ಕ್ರಿಯೆ ನಡೆಯಿತು.

ಶ್ರೀ ದೇವರಿಗೆ ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ನಾಗ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಆಶ್ಲೇಷ ಬಲಿ, ತಂಬಿಲ ಸೇವೆ ಜರುಗಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಪ್ರತಿಷ್ಠೆಯನ್ನು ಕಣ್ತುಂಬಿಕೊಂಡರು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಜೀವರು ಬೇರೆ ದೇವರು ಬೇರೆ. ಜೀವರು ದೇವರ ದಾಸರು. ದೇವರು ಬಿಂಬ ಆದರೆ ಜೀವರು ಅದರ ಪ್ರತಿಬಿಂಬ. ಬಿಂಬ ಗಟ್ಟಿಯಾದರೆ ಪ್ರತಿಬಿಂಬ ಗಟ್ಟಿಯಾಗುತ್ತಿದೆ. ನಾವು ಸುಂದರ ಕಾಣಬೇಕಾದರೆ ನಮ್ಮನ್ನು ಅಲಂಕಾರ ಮಾಡಬೇಕೆ ವಿನಃ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವನನ್ನಲ್ಲ ಎಂದು ತಿಳಿಸಿದರು.
ಇಲ್ಲಿ ಉತ್ತಮವಾದ ದೇವಸ್ಥಾನ ನಿರ್ಮಾಣವಾಗಿದೆ. ಪ್ರಾಚೀನ ದೇವಸ್ಥಾನ ಜೀರ್ಣೋದ್ಧಾರ ಮಾಡಿದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಬ್ರಹ್ಮಕಲಶ ಮಾಡಿದರೆ ಕೆಲಸ ಮುಗಿಯುವುದಿಲ್ಲ. ಗ್ರಾಮಸ್ಥರು ಪ್ರತಿದಿನ ದೇವಸ್ಥಾನಕ್ಕೆ ಬಂದು ಪೂಜಾ ಕಾರ್ಯಕ್ಕೆ ಕೊರತೆ ಆಗದಂತೆ ನೋಡಿಕೊಳ್ಖುವ ಸಂಕಲ್ಪ ತೊಡಬೇಕು, ಇದು ಶಾಶ್ವತವಾಗಿ ದೇವರಿಗೆ ಮಾಡುವ ಸೇವೆ. ಇದರಿಂದ ನಮ್ಮ ಕುಟುಂಬ ಪರಂಪರೆಗೆ ಶ್ರೇಯಸ್ಸು ಉಂಟಾಗುತ್ತದೆ ಎಂದರು.
ಕಟೀಲು ಕ್ಷೇತ್ರದ ಕಮಲದೇವಿ ಪ್ರಸಾದ ಅಸ್ರಣ್ಣರು ಧಾರ್ಮಿಕ ಉಪನ್ಯಾಸ ನೀಡಿ ವಿಕಾರಿ ಎನ್ನುವ ರೂಢಿಯ ಅರ್ಥಕ್ಕೆ ಅನ್ವರ್ಥವಾಗಿ ವಿಕಾರಿ ಸಂವತ್ಸರದಲ್ಲಿ ಉತ್ತಮ ಕಾರ್ಯಗಳು ಆಗಿದೆ. ಕಾಶ್ಮಿರ ಭಾರತದ ವಶವಾಗಿರುವುದು, ಅಯೋಧ್ಯೆಗೆ ನ್ಯಾಯಾಲಯ ತೀರ್ಪು ನೀಡಿದ್ದು ವಿಕಾರಿ ಸಂವತ್ಸರದಲ್ಲಿಯೇ ಎಂದರು. ನಾನು ಎನ್ನುವ ಅಹಂಕಾರ ದೂರವಾಗಿ ನಾವು ಎನ್ನುವ ಊರು ನಾವೂರಿನ ಹೆಸರಿನಲ್ಲಿಯೇ ಅಡಕವಾಗಿದ್ದು ಆಧ್ಯಾತ್ಮದ ಗೂಡಾರ್ಥವೂ ಇದರಲ್ಲಿದೆ. ದೇವರ ಸನ್ನಿಧಾನ ಇದ್ದರೆ ಮಾತ್ರ ಪ್ರಕೃತಿಯ ರಕ್ಷಣೆ ಸಾಧ್ಯ ಎಂದು ತಿಳಿಸಿದರು. ವಾಸ್ತು ತಜ್ಞ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಿದರು.
ಈ ಸಂದರ್ಭ ಜೀಣೋದ್ದಾರ ಸಮಿತಿ ಅಧ್ಯಕ್ಷ ಆನಂದ ತೀರ್ಥ, ಆಡಳಿತ ಮೋಕ್ತೇಸರ ರಾಮಚಂದ್ರ ಭಟ್ ಅಗ್ರಹಾರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಮುರಳೀಧರ ಭಟ್ ಹಳೇಗೇಟು, ಪ್ರಧಾನ ಅರ್ಚಕ ವೆಂಕಟದಾಸ್ ಭಟ್, ಪ್ರಧಾನ ಕಾರ್ಯದರ್ಶಿ ಸದಾನಂದ ಗೌಡ ಹಳೆಗೇಟು, ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿಯ ಸಂಚಾಲಕ ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರತಿಷ್ಠಾ ಬಲಿ, ಬ್ರಾಹ್ಮಣ ಹಸ್ತೋದಕ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು
ಇದೇ ಸಂದರ್ಬ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಬ್ರಹ್ಮಕಲಶೋತ್ಸವದ ಅನ್ನದಾನಕ್ಕೆಂದು ನೀಡಿರುವ 2 ಲಕ್ಷ ರುಪಾಯಿ ಮೊತ್ತದ ಚೆಕನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುರಳೀಧರ್ ಭಟ್ ಅವರ ಮೂಲಕ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಕ್ಷೇತ್ರಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಹಾಗೂ ಬೆಳ್ತಂಗಡಿ ಯೋಜನಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *