Header Ads
Breaking News

ನಿಪ್ಪಾಣಿಯಲ್ಲಿ ಬಾಕಿಯಾದ ಮಂದಿಗೆ ಕರುಣೆ ತೋರಿದ ಸಿಎಂ

ಏಳು ತಿಂಗಳ ಗರ್ಭಿಣಿಯ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸ್ಸು ಕರಗಿದೆ. ಸೇವಾಸಿಂಧು ಆ್ಯಪ್ ಮೂಲಕ ನೋಂದಾಯಿಸದೆ ಮಹಾರಾಷ್ಟ್ರದಿಂದ ಹೊರಟು ಕಳೆದ ಮೂರು ದಿನಗಳಿಂದ ಕರ್ನಾಟಕದ ಗಡಿ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದವವರ ಪೈಕಿ ಮಕ್ಕಳು, ಮಹಿಳೆಯರು ವೃದ್ಧರನ್ನ ರಾಜ್ಯದೊಳಗೆ ಬಿಡಲಾಗಿದೆ.

ಅಧಿಕೃತ ಪಾಸ್ ಇಲ್ಲದೆ ಮಹಾರಾಷ್ಟ್ರ ಸರ್ಕಾರದ ಪಾಸ್ ಪಡೆದು ಮೂವತ್ತು ಮಂದಿ ಕರಾವಳಿ ಕರ್ನಾಟಕಕ್ಕೆ ಹೊರಟಿದ್ದರು. ನಿಪ್ಪಾಣಿಯಲ್ಲಿ 54 ಮಂದಿಯನ್ನು ಪೊಲೀಸ್ ರು ತಡೆದು ನಿಲ್ಲಿಸಿದ್ದರು. ವಾಪಸ್ ಮಹಾರಾಷ್ಟ್ರಕ್ಕೂ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಮೂರು ದಿನ ಬಸ್ಸಿನಲ್ಲೇ ಎಲ್ಲರೂ ಗಡಿಯಲ್ಲಿರುವ ಪೆಟ್ರೋಲ್ ಪಂಪ್‍ನಲ್ಲಿ ಕಾಲ ಕಳೆದಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಕಳೆದ ಎರಡು ದಿನಗಳಿಂದ ಕರಾವಳಿಗರನ್ನು ತವರಿಗೆ ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದರು.ಇದೀಗ, ಮುಖ್ಯಮಂತ್ರಿ ಯವರಿಗೆ ಖುದ್ದು ಮನವಿ ಮಾಡಿದ ಹಿನ್ನೆಲೆಯಲ್ಲಿ, ಬೆಳಗಾವಿಯ ನಿಪ್ಪಾಣಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾಯುತ್ತಾ ನಿಂತಿರುವ ಗರ್ಭಿಣಿ ಮಹಿಳೆಯರು, ಮಕ್ಕಳ ಸಹಿತ ಕರಾವಳಿ ಜಿಲ್ಲೆಯ ಜನರಿಗೆ ರಾಜ್ಯಕ್ಕೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. ಮೇ 31ರವರೆಗೆ ಕರ್ನಾಟಕದ ಬಾಗಿಲು ಹೊರ ರಾಜ್ಯದವರಿಗೆ ಬಂದ್ ಆಗಿರುವುದರಿಂದ ಒಳಗೆ ಬಿಡಲು ಸರ್ಕಾರ ಸಿದ್ಧವಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳಿಗೆ ಗರ್ಭಿಣಿ ಮಹಿಳೆ ಮತ್ತು ಜೊತೆಗಿರುವ ಮಹಿಳೆಯರನ್ನು ಜಿಲ್ಲೆಯೊಳಗೆ ಬಿಟ್ಟು ಕೊಳ್ಳುವಂತೆ ಮನವಿ ಮಾಡಿದ್ದರು. ಎಲ್ಲ ಕಡೆಯಿಂದ ಒತ್ತಡ, ಮನವಿ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಡಿಯಲ್ಲಿ ಸಿಲುಕಿದ್ದ ಗರ್ಭಿಣಿ, ಮಕ್ಕಳು ವೃದ್ಧರು ಮಹಿಳೆಯರು ಮಕ್ಕಳನ್ನು ಒಳಗೆ ಬಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ.

Related posts

Leave a Reply

Your email address will not be published. Required fields are marked *