Header Ads
Breaking News

ನೀರಿಲ್ಲದೆ ಕಂಗೆಟ್ಟಿದ್ದ ಮನೆ ಯಜಮಾನನಿಗೆ ದೈವ ದೇವರ ಪವಾಡದಿಂದ ಒಲಿಯಿತು ಅದೃಷ್ಟ!

ಅದು ಕೃಷಿಯನ್ನೇ ನಂಬಿದ ಗ್ರಾಮೀಣ ಪ್ರದೇಶದ ಕ್ರೈಸ್ತ ಕುಟುಂಬ, ಐದು ಕೊಳವೆ ಬಾವಿಯನ್ನು ಕೊರೆದು ನೀರಲ್ಲದೆ ಕಂಗೆಟ್ಟ ಮನೆ ಯಜಮಾನ, ಪವಾಡವೆಂಬಂತೆ ಐದು ಕೊಳವೆ ಬಾವಿಯಲ್ಲಿಯೂ ತುಂಬಿದ ನೀರು..! ಅದೇಗೆ ಅಂತೀರ ಈ ಸ್ಟೋರಿ ನೋಡಿ.

 ಒಂದು ಕಡೆಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ತೆಂಗು ಕಂಗಿನ ತೋಟ, ಮತ್ತೊಂದು ಕಡೆಯಲ್ಲಿ ನಾಲ್ಕು ಕೊಳವೆ ಬಾವಿ ಕೊರೆದರೂ ನೀರು ಸಿಗದೆ ಹತಾಶರಾದ ಜಮೀನು ಮಾಲಕ, ದೈವ ದೇವರುಗಳ ಪ್ರಾರ್ಥನೆಯಿಂದ ಕೆಲವೇ ವಾರದಲ್ಲಿ ಕೊಳವೆ ಬಾವಿ ತುಂಬಾ ನೀರು. ಹೌದು ಇದು ಕಿನ್ನಿಗೋಳಿ ಸಮೀಪದ ಕಲ್ಲಮುಂಡ್ಕೂರು ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗುಂಡೆಲ್‌ನ ಕ್ರೈಸ್ತ ಕುಟುಂಬವೊಂದರಲ್ಲಿ ವೈಜ್ಞಾನಿಕತೆಗೆ ಸವಾಲಾಗಿ ನಡೆದ ಪವಾಡ. ಕಿನ್ನಿಗೋಳಿ ಸಮೀಪದ ಕಲ್ಲಮುಂಡ್ಕೂರು ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗುಂಡೆಲ್ ಗ್ರಾಮದಲ್ಲಿ ವಾಸವಾಗಿರುವ ವಿಕ್ಟರ್ ಡಿಸಿಲ್ವ ಕಳೆದ ಹಲವಾರು ವರ್ಷದಿಂದ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ, ತಮ್ಮ 7ಎಕ್ಕರೆ ಜಮೀನಿನಲ್ಲಿ ತೆಂಗು, ಕಂಗು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆಸುತ್ತ ಬಂದಿದ್ದಾರೆ.ಬೆಳೆಗೆ ನೀರುಣಿಸಲು ಬಾವಿಯೊಂದನ್ನು ತೋಡಿದ್ದು ಅದರಲ್ಲಿ ಬೇಕಾದಷ್ಟು ನೀರು ಸಿಗುತ್ತಿತ್ತು, ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾದರಿಂದ ಏಪ್ರಿಲ್ ತಿಂಗಳಿನಲ್ಲೇ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. ಮಳೆ ಬಾರದಿದ್ದರೆ ನೀರು ಸಮಸ್ಯೆ ಉದ್ಭವವಾಗಿ ತಮ್ಮ ಬೆಳೆಗೆ ನೀರುಣಿಸಲು ಸಾಧ್ಯವಾಗದೆ ಕೊಳವೆ ಬಾವಿಯನ್ನು ಕೊರೆದಿದ್ರು. ಸುಮಾರು 600 ಅಡಿ ಕೊರೆದರೂ ನೀರು ಸಿಗಲಿಲ್ಲ, ಬೇಸತ್ತು ಮತ್ತೊಂದು ಕೊಳವೆ ಬಾವಿಯನ್ನು ಕೊರೆದರು .ಅದು 700 ಅಡಿ ಅಳಕ್ಕೆ ಹೋದರೂ ಒಂದು ತೊಟ್ಟು ನೀರಿಲ್ಲ, ಇಷ್ಟಕ್ಕೆ ಸುಮ್ಮನಾಗದ ವಿಕ್ಟರ್ ಡಿಸಿಲ್ವ ಒಂದರ ನಂತರ ಒಂದರಂತೆ ಮತ್ತೆ ಎರಡು ಕೊಳವೆಬಾವಿಯನ್ನು ತೋಡಿದರೂ ನೀರು ಸಿಗಲಿಲ್ಲ.

ಅದುವರೆಗೆ 4 ಬೋರ್‌ವೆಲ್‌ಗಳನ್ನು ತೋಡಿ ಸುಮಾರು 5 ಲಕ್ಷದಷ್ಟು ಖರ್ಚು ಮಾಡಿದ ಡಿಸಿಲ್ವ ಅವರು ಮಾನಸಿಕವಾಗಿ ಕುಗ್ಗಿದ್ದರು, ಕೃಷಿಯನ್ನೇ ನಂಬಿ ಬದುಕಿದ ಇವರು ತಾವು ಕಷ್ಟ ಪಟ್ಟು ಬೆಳೆಸಿದ ತೋಟ ನೀರಿಲ್ಲದೆ ಒಣಗಲಿದೆ, ಮುಂದೇನು ಎಂದು ದಾರಿ ತೋಚದೆ ಇರುವಾಗ ಬೋರ್ ವೆಲ್ ಮಾಲಕ ಪ್ರಕಾಶ್ ಅವರು ಬೆಳ್ತಂಗಡಿ ಮೂಲದ ಜಗದೀಶ್ ಶಾಂತಿ ಎಂಬುವವರ ಮೊಬೈಲ್ ನಂಬರ್ ಕೊಟ್ಟು ಸಮಸ್ಯೆಗೆ ಪರಿಹಾರ ಹುಡುಕುವಂತೆ ಹೇಳಿದರು, ಅದರಂತೆ ಡಿಸಿಲ್ವ ಅವರು ಜಗದೀಶ್ ಶಾಂತಿಯವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಸ್ಥಳಕ್ಕೆ ಆಗಮಿಸಿದ ಜಗದೀಶ್ ಶಾಂತಿಯವರು ಡಿಸಿಲ್ವ ಅವರ ಜಮೀನು ಪರಿಶೀಲಿಸಿ, ಜಮೀನಿನಲ್ಲಿ ನಾಗನ ದೋಷವಿದೆ ಮಾತ್ರವಲ್ಲದೆ ಜುಮಾದಿ ದೈವದ ದೋಷವಿದೆ, ಕೊಡಮಣಿತ್ತಾಯ ದೈವದ ಸವಾರಿ ಇದೆ.

ನಾಗನಿಗೆ ಬೇಕಾದ ಪೂಜೆ ಜುಮಾದಿ ದೈವಕ್ಕೆ ಹರಕೆ, ಕೊಡಮಣಿತ್ತಾಯ ದೈವಕ್ಕೆ ಹಾಲು ನೀಡಲು ಬೆಳ್ಳಿಯ ಲೋಟ ಕೊಡಿ, ಧರ್ಮಸ್ಥಳ ಮತ್ತು ಸುಬ್ರಮಣ್ಯದಲ್ಲಿ ಪ್ರಾರ್ಥನೆ ಮಾಡಿ ಮಾತ್ರವಲ್ಲದೆ ಕಾರ್ಕಳ ಮಂಗಳೂರು ಮತ್ತು ತಮ್ಮ ಗ್ರಾಮದ ವ್ಯಾಪ್ತಿಯ ಚರ್ಚ್ ಗಳಲ್ಲಿ ಪೂಜೆ ಸಲ್ಲಿಸಿ ಈ ರೀತಿ ಮಾಡಿದರೆ ನಿಮಗೆ ಬೇಕಾದಷ್ಟು ನೀರು ಸಿಗುತ್ತದೆ ಎಂದರು. ಡಿಸಿಲ್ವ ನನ್ನ ಸಮಸ್ಯೆಗೆ ಪರಿಹಾರ ದೊರಕುದಾದರೆ ಯಾವ ಕೆಲಸಕ್ಕೂ ತಯಾರಿದ್ದೇನೆ ಎಂದರು. ಅದರಂತೆ ಒಂದು ಸ್ಥಳವನ್ನು ಗುರುತಿಸಿ ಈ ಜಾಗದಲ್ಲಿ ಕೊಳವೆ ಬಾವಿ ಕೊರೆಯಿರಿ ಮೊದಲ 35 ಅಡಿ ಅಳದಲ್ಲಿ ಕೆಂಪು ನೀರು ಸಿಗುತ್ತದೆ, ಮುಂದುವರಿದು 100 ಅಡಿ ಅಳ ಹೋಗುವಾಗ ಮತ್ತೊಮ್ಮೆ ನೀರು ಸಿಗುತ್ತದೆ, ಮತ್ತೂ ಮುಂದುವರಿದು 200 ಅಡಿ ತೋಡಿ ಇದರಲ್ಲಿ ಬೇಕಾದಷ್ಟು ನೀರು ಸಿಗುವುದು ಎಂದರು, ಜಗದೀಶ್ ಶಾಂತಿಯವರು ಹೇಳಿದ ರೀತಿಯಲ್ಲಿ ಕೊಳವೆ ಬಾವಿ ತೋಡಲಾರಂಬಿಸಿದರು ಶಾಂತಿ ಭಟ್ರು ಹೇಳಿದಂತೆ ಮೊದಲ 35 ಅಡಿ ಅಳದಲ್ಲಿ ಕೆಂಪು ನೀರು 100 ಅಡಿ ಅಳದಲ್ಲಿ ನೀರು 200 ಅಡಿ ಅಳಕ್ಕೆ ಕೊರೆಯುವಾಗ ಬೇಕಾದಷ್ಟು ನೂರು ಸಿಕ್ಕಿತ್ತು. ಜಗದೀಶ್ ಶಾಂತಿ ಸ್ಥಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಈ ಹಿಂದೆ ಕೊರೆದ ನಾಲ್ಕು ಕೊಳವೆ ಬಾವಿಯನ್ನು ಕಲ್ಲು ಸರಿಸಿ ನೋಡಲು ಹೇಳಿದರು ವಿಚಿತ್ರವೆಂಬಂತೆ ಆರುನೂರು ಅಡಿ ಕೊರೆದರೂ ನೀರೇ ಇರದ ನಾಲ್ಕು ಕೊಳವೆ ಬಾವಿಯಲ್ಲಿಯೂ ಕೇವಲ 15 ಅಡಿಯಲ್ಲಿ ನೀರು ಕಂಡಿತು, ಡಿಸಿಲ್ವರವರ ಜಮೀನಿನಲ್ಲಿ ಕಂಡು ಕೇಳರಿಯದ ಪವಾಡ ನಡೆಯಿತು.

ಮರುದಿನ ಈ ಕೊಳವೆ ಬಾವಿಗೆ ಪಂಪು ಅಳವಡಿಸಲುಹೋದಾಗ ಸಮೀಪದ ಕಲ್ಲೊಂದರ ಮೇಲೆ ಸರ್ಪವೊಂದು ಮಲಗಿತ್ತು ಇದನ್ನು ಕಂಡು ಭಯಗೊಂಡ ಡಿಸಿಲ್ವರವರು ಮತ್ತೆ ಜಗದೀಶ್ ಶಾಂತಿ ಯವರಿಗೆ ಕರೆ ಮಾಡಿದರು. ಭಯಪಡುವ ಅಗತ್ಯವಿಲ್ಲ ನಾಗದೇವರೇ ಅಲ್ಲಿ ಬಂದಿದ್ದಾರೆ, ತಾವು ಪ್ರಾರ್ಥಿಸಿದಂತೆ ಪೂಜೆ ನಡೆಯಬೇಕಾಗಿದೆ ನಂತರ ಅಲ್ಲಿಂದ ಅದು ಹೋಗಲಿದೆ ಎಂದು ಪೂಜೆಗೆ ದಿನ ನಿಗದಿಪಡಿಸಿದರು, ಅದರಂತೆ ಮೇ ಮೊದಲ ವಾರದಲ್ಲಿ ನಾಗನಿಗೆ ಅಶ್ಲೇಶ ಬಲಿ ಮತ್ತಿತರ ಪೂಜೆಯನ್ನು ಜಗದೀಶ್ ಶಾಂತಿಯವರು ನೆರವೇರಿಸಿದರು, ಇನ್ನು ಮುಂದಕ್ಕೆ ಈ ಎಲ್ಲಾ ಕೊಳವೆ ಬಾವಿಯಲ್ಲಿ ನೀರು ಇರಲಿದೆ ನೀರಿನ ಸಮಸ್ಯೆ ಇದ್ದವರಿಗೆ ನೀರು ಕೊಡಿ ನಿಮಗೆ ನೀರಿನ ಸಮಸ್ಯೆ ಬರುವುದಿಲ್ಲ ಎಂದರು.

 ಸದ್ಯಕ್ಕೆ ವಿಕ್ಟರ್ ಡಿಸಿಲ್ವ ಅವರು ನೆರೆಯ ತೋಟದವರಿಗೆ ನೀರಿನ ಸಮಸ್ಯೆ ಇದ್ದು, ತನ್ನ ಒಂದು ಕೊಳವೆಬಾವಿಯ ನೀರನ್ನು ಅವರಿಗೆ ನೀಡಿದ್ದಾರೆ, ಆ ಕೊಳವೆ ಬಾವಿಗೆ ಪಂಪು ಅಳವಡಿಸಿ ನೆರೆಯ ತೋಟಕ್ಕೆ ನೀರು ಹರಿದು ನೆರೆಯವರ ಸಮಸ್ಯೆ ಬಗೆಹರಿದಿದೆ, ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಅದಕ್ಕೂ ಉಚಿತವಾಗಿ ನೀರು ಕೊಡಲು ತಯಾರಿದ್ದಾರೆ ಈ ಬಗ್ಗೆ ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ. ಡಿಸಿಲ್ವ ಅವರ ಜಮೀನು ಭೂಸುಧಾರಣೆ ಕಾನೂನಿನಂತೆ ಬಂದ ಜಮೀನಾಗಿದ್ದು, ಶಿವರಾಮ ಹೆಗ್ಡೆಯವರು ಇದರ ಹಿಂದಿನ ಮಾಲಕರಾಗಿದ್ದರು, ಡಿಸಿಲ್ವ ಅವರ ಹಿರಿಯರಿಗೆ ಜಮೀನು ಸಿಗುವಾಗ, ಇದರ ಮೂಲ ಮಾಲಕರು ಶಿವರಾಮ ಹೆಗ್ಡೆ, ದೈವ ದೇವರ ಪೂಜೆ ಕಷ್ಟವಾಗಬಹುದೆಂದು ಇಲ್ಲಿದ್ದ ದೈವ ದೇವರುಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದು ಅದು ಜಮೀನಿಗೆ ಸಂಬಂಧಿಸಿದ ಶಕ್ತಿಯಾದರಿಂದ ಡಿಸಿಲ್ವ ಅವರಿಗೆ ಈ ತೊಂದರೆ ಬಂದಿತ್ತು ಎಂಬುದು ನಂಬಿಕೆ. ಏನೇ ಆಗಲಿ ಆಧುನಿಕ ಕಾಲದಲ್ಲಿಯೂ ದೈವ ದೇವರ ಪವಾಡ ನಡೆಯುತ್ತಿರುವುದು ಅದ್ಭುತವೇ ಸರಿ.

Related posts

Leave a Reply

Your email address will not be published. Required fields are marked *