Header Ads
Breaking News

ನೇತ್ರಾವತಿ ನದಿ ಕಿನಾರೆಯನ್ನು ಅವಶ್ಯಕತೆಗಳಿಗೆ ಬಳಸಿಕೊಳ್ಳುವ ಸರ್ಕಾರ : ಬಂಟ್ವಾಳದ ಮಡಿವಾಳಪಡ್ಪು ನಿವಾಸಿಗಳ ಆಕ್ರೋಶ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಡಿವಾಳಪಡ್ಪು ಸರಕಾರ ವಿವಿಧ ನೀರಾವರಿ ಯೋಜನೆ ಹಾಗೂ ಬೃಹತ್ ಕಂಪೆನಿಗಳಿಗೆ ನದಿಯಿಂದ ನೀರು ಮೇಲೆತ್ತುವ ಪಂಪ್ ಹೌಸ್‍ಗಳನ್ನು ಹೊಂದಿರುವ ಸ್ಥಳ. ನೇತ್ರಾವತಿ ನದಿ ಕಿನಾರೆಯಲ್ಲಿರುವ ಈ ಪ್ರದೇಶವನ್ನು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳುವ ಸರಕಾರ ಹಾಗೂ ಕಂಪೆನಿಗಳು ಇಲ್ಲಿನ ರಸ್ತೆ ಮತ್ತಿತರ ಮೂಲಭೂತ ಸೌಲಭ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ ವಹಿಸಿದೆ ಎಂದು ಮಡಿವಾಳಪಡ್ಪು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿವಾಳ ಪಡ್ಪುವಿನಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿವಿಗೆ ನೀರು ಸರಬರಾಜು ಮಾಡುವ ಪಂಪ್ ಹೌಸ್, ಇನ್ಪೋಸಿಸ್ ಸಂಸ್ಥೆಗೆ ನೀರು ಪೂರೈಕೆ ಮಾಡುವ ಪಂಪ್ ಹೌಸ್, ಸಣ್ಣ ನೀರಾವರಿ ಇಲಾಖೆಯಡಿ ಸಜೀಪಮೂಡ ಗ್ರಾಮದ ಏತನೀರಾವರಿ ಯೋಜನೆಗೆ ನೀರೊದಿಗಿಸವ ಪಂಪ್‍ಹೌಸ್ ಹಾಗೂ ಸ್ಥಳೀಯ ಕೃಷಿಕರಿಗೆ ನೀರು ನೀಡುವ ಒಟ್ಟು 4 ಪಂಪ್ ಹೌಸ್‍ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಪಂಪ್‍ಹೌಸ್ ನಿರ್ಮಾಣಕ್ಕಾಗಿ ಬಿಟ್ಟು ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಈ ಭಾಗದ ರಸ್ತೆಯನ್ನು ಅಭಿವೃದ್ದಿ ಪಡಿಸಿ, ಮೂಲಭೂತ ಸೌಲಭ್ಯಕ್ಕೆ ಸಹಕಾರ ನೀಡುವುದಾಗಿ ಸರಕಾರ ಹಾಗೂ ಕಂಪೆನಿ ಆ ಸಂದರ್ಭ ಭರವಸೆಯನ್ನೂ ನೀಡಿತ್ತು. ಆದರೆ ಇದೀಗ ಇದ್ದ ಡಾಮಾರು ರಸ್ತೆಯೂ ಹಾಳಾಗಿ ಹಲವು ವರ್ಷಗಳು ಕಳೆದರೂ ಶಾಶ್ವತ ರಸ್ತೆ ನಿರ್ಮಾಣಕ್ಕೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ.

ಮಡಿವಾಳ ಪಡ್ಪುವಿನಿಂದ ಪಂಪ್‍ಹೌಸ್, ಕೂಸನಕಟ್ಟೆಗೆ ಈ ಹಿಂದೆ ಉತ್ತಮವಾದ ಡಾಮಾರು ರಸ್ತೆಯಿತ್ತು. ಇಲ್ಲಿ ಪಂಪ್‍ಹೌಸ್ ನಿರ್ಮಾಣಗೊಳ್ಳಲು ಆರಂಭವಾದ ಬಳಿಕ ಸರಕು ಹೊತ್ತು ತರುವ ಘನವಾಹನಗಳ ಸಂಚಾರದಿಂದಾಗಿ ಡಾಮರು ಕಿತ್ತು ಹೋಗಿದ್ದು ಇಲ್ಲಿ ರಸ್ತೆ ಇತ್ತೋ ಎನ್ನುವ ಕುರುಹು ಇಲ್ಲದಷ್ಟು ಕುರೂಪಗೊಂಡಿದೆ. ರಸ್ತೆಗೆ ಹಾಕಿದ್ದ ಜಲ್ಲಿ ಕಲ್ಲುಗಳು ಎಲ್ಲೆಂದರಲ್ಲಿ ಚದುರಿ ಹೋಗಿದೆ. ಪಂಪ್ ಹೌಸ್ ನಿರ್ಮಾಣದ ಬಳಿಕ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಿಸಿ ಕೊಡುವುದಾಗಿ ಹೇಳಿದ್ದ ಕಂಪೆನಿಗಳು ಬಳಿಕ ಮೌನವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈಗಲೂ ಪಂಪ್‍ಹೌಸ್‍ಗೆ ಭೇಟಿ ನೀಡುತ್ತಾರೆ ಆದರೆ ರಸ್ತೆ ನಿರ್ಮಾಣದ ಬಗ್ಗೆ ಚಕಾರವೆತ್ತುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಜೀಪಮುನ್ನೂರು ಗ್ರಾಮಕ್ಕೆ ನಾಲ್ಕೈತ್ತಾಯ ದೈವ ಬಂದ ಐತಿಹಾಸಿಕ ಮಹತ್ವ ಇರುವ ಮಡಿವಾಳ ಪಡ್ಪು ಕೂಸನಕಟ್ಟೆಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನೇಮೋತ್ಸವ ನಡೆಯುತ್ತಿದ್ದು ಮುಂದಿನ ವರ್ಷವೂ ಇಲ್ಲಿ ನೇಮ ನಡೆಯಲಿದೆ. ಇಲ್ಲಿನ ಕಟ್ಟೆಯನ್ನು ಅಭಿವೃದ್ದಿ ಪಡಿಸಿ ಧಾರ್ಮಿಕ ಶ್ರದ್ದಾಕೆಂದ್ರವಾಗಿ ಅಭಿವೃದ್ದಿ ಪಡಿಸುವ ಇರಾದೆ ಸ್ಥಳೀಯ ನಿವಾಸಿಗಳದ್ದಾಗಿದ್ದರೂ ಇಲ್ಲಿಗೆ ವಾಹನ ಬರಲು ಸರಿಯಾದ ರಸ್ತೆಯಿಲ್ಲದೇ ಇರುವುದು ಅಡ್ಡಿಯಾಗಿದೆ. ಆದ್ದರಿಂದ ಮುಂದಿನ ನೇಮೋತ್ಸವಕ್ಕಿಂತ ಮುಂಚಿತವಾಗಿ ಇಲ್ಲಿ ಪಂಪ್ ಹೌಸ್ ಹೊಂದಿರುವ ಸಂಸ್ಥೆಗಳು ಜಂಟಿಯಾಗಿ ಸರ್ವಋತು ಬಳಕೆಯ ರಸ್ತೆ ನಿರ್ಮಿಸಿಕೊಡ ಬೇಕು, ತಪ್ಪಿದ್ದಲ್ಲಿ ಪಂಪ್‍ಹೌಸ್‍ಗೆ ಬೀಗ ಜಡಿಯುವುದಾಗಿ ಮಡಿವಾಳ ಪಡ್ಪು ನಿವಾಸಿಗಳು ಎಚ್ಚರಿಸಿದ್ದಾರೆ. ಬೀದಿ ದೀಪಗಳು ಉರಿಯದೇ ಸಂಜೆಯ ವೇಳೆ ಇಲ್ಲಿ ನಡೆದಾಡುವುದೇ ಕಷ್ಟಕರ. ರಸ್ತೆ ಮಧ್ಯವೇ ನೀರಿನ ಪೈಪ್‍ಲೈನ್ ಅಳವಡಿಸಿದ್ದು ಪೈಪ್ ಲೀಕೇಜ್ ಆಗಿ ರಸ್ತೆಯಿಂದ ನೀರು ಜಿನುಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಸಂಬಂಧಪಟ್ಟವರು ಬಗೆಹರಿಸಬೇಕು ಎಂದು ಮಾಧ್ಯಮದ ಮುಂದೆ ಒತ್ತಾಯಿಸಿದ್ದಾರೆ.

ಅಡಿಕೆ ಹಾಗೂ ತೆಂಗು ತೋಟಗಳಿಂದ ಸಮೃದ್ಧವಾಗಿದ್ದ ಈ ಪ್ರದೇಶ ನಿರ್ವಹಣೆಯ ಕೊರತೆಯಿಂದ ಕಳೆಗಂಟಿಗಳ ಸಾಮ್ರಾಜ್ಯವಾಗಿದೆ. ಪಂಪ್‍ಹೌಸ್‍ಗಳಿಗೆ ಪ್ರತ್ಯೇಕ ವಿದ್ಯುತ್ ಪರಿರ್ವತಕಗಳಿದ್ದು ಅದರ ರಕ್ಷಣಾ ಬೇಲಿಗಳ ಸುತ್ತ ಬಳ್ಳಿಗಳು ಬೆಳೆದು ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಇನ್ಫೋಸಿಸ್ ಸಂಸ್ಥೆಗೆ ಒಂದು ಎಕರೆಯಷ್ಟು ಜಮೀನು ಇದ್ದು ಅದರ ತುಂಬಾ ಪೊದೆಗಳು ತುಂಬಿಕೊಂಡಿದೆ. ಹಾವು ಮೊದಲಾದ ವಿಷಕಾರಿ ಜಂತುಗಳ ಆವಾಸ ಸ್ಥಾನವಾಗಿದ್ದು ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಕಳೆಗಂಟಿಗಳನ್ನು ತೆಗೆದು ಪರಿಸರ ಸ್ವಚ್ಛವಾಗಿಟ್ಟಿಕೊಂಡು ನಿರ್ವಹಣೆ ನೋಡಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *