Header Ads
Breaking News

ಪಡುಬಿದ್ರಿ- ಎರ್ಮಾಳು ಗಡಿಭಾಗ ಕಿರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪಡುಬಿದ್ರಿ- ಎರ್ಮಾಳು ಗಡಿಭಾಗ ಕಿರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಛಿದ್ರಗೊಂಡಿದ್ದು, ಇದನ್ನು ದುರಸ್ಥಿ ಪಡಿಸುವಂತೆ ಆಗ್ರಹಿಸಿ ಗ್ರಾಮೀಣ ಕಾಂಗ್ರೆಸ್, ಮಾಜಿ ಸಚಿವ ವಿನಯ ಕುಮಾರ್ ನೇತ್ರತ್ವದಲ್ಲಿ ಸುಮಾರು 30 ನಿಮಿಷಗಳ ಕಾಲ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಹಿತ ಈ ಹೆದ್ದಾರಿ ಸಮಸ್ಯೆಯಿಂದ ನೋವುಣ್ಣುತ್ತಿರುವ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಂಸದೆ ಶೋಭ ಕರಂದ್ಲಾಜೆ, ಶಾಸಕ ಲಾಲಾಜಿ ಆರ್. ಮೆಂಡನ್, ಹೆದ್ದಾರಿ ಇಲಾಖೆ ಸಹಿತ ಗುತ್ತಿಗೆ ಕಂಪನಿ ನವಯುಗ್ ವಿರುದ್ಧ ಘೋಷಣೆಯನ್ನು ಕೂಗಿದರು. ಆರಂಭದಲ್ಲಿ ಪಡುಬಿದ್ರಿ ಮುಖ್ಯಪೇಟೆ ಬಳಿ ಸೇರಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಾಥದ ಮೂಲಕ ಸೇತುವೆ ಬಳಿಗೆ ಬಂದು ಯಾವುದೇ ಮುನ್ಸೂಚನೆ ಇಲ್ಲದಂತೆ ಹೆದ್ದಾರಿಯ ಮೇಲೆ ಕೂತು ಸಂಪೂರ್ಣ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ಸಂಪೂರ್ಣ ಮುಚ್ವಿದ್ದರಿಂದ ವಾಹನಗಳ ಸಾಲು ಮೈಲುದ್ಧ ಬೆಳೆದಿದ್ದರೂ ಪ್ರಯಾಣಿಕರು ಯಾವುದೇ ತಕರಾರಿಗೆ ಅವಕಾಶ ನೀಡದೆ ಬಂದ್‍ಗೆ ಸಹಕರಿಸಿದಂತೆ ಕಂಡುಬಂತು. ಒಂದು ಹಂತದಲ್ಲಿ ಪ್ರತಿಭಟನಾಗಾರರನ್ನು ಚದುರಿಸಲು ಯತ್ನಿಸಿದ ಪೊಲೀಸರ ವಿರುದ್ಧ ಸೊರಕೆ ಗರಂ ಆದ ಘಟನೆಯೂ ನಡೆಯಿತು. ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಳೆದ ಹತ್ತು ವರ್ಷಗಳಿಂದ ಆಮೆಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರಿಗಳು ನಿರಂತರ ಧೂಳಿನಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುವಂತ್ತಾಗಿದೆ. ಇದರ ಜವಾಬ್ದಾರಿ ವಹಿಸ ಬೇಕಾಗಿದ್ದ ಸಂಸದೆ ಶೋಭ ಕರಂದ್ಲಾಜೆ ಸಹಿತ ಈ ಭಾಗದ ಶಾಸಕ ಲಾಲಾಜಿ ಮೆಂಡನ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರೆ.ಇವರ ಈ ವರ್ತನೆಯಿಂದಾಗಿ ಗುತ್ತಿಗೆ ಕಂಪನಿ ಯಾವುದೇ ಭಯ, ನಾಚಿಕೆ ಇಲ್ಲದೆ ತಮಗಿಷ್ಟ ಬಂದಂತೆ ವರ್ತಿಸುತ್ತಿದೆ. ಇಷ್ಟಾದರೂ ಇದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಟೋಲ್ ಹೆಸರಲ್ಲಿ ಹೆಜಮಾಡಿಯಲ್ಲಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭ ನವೀನ್ ಚಂದ್ರ ಜೆ. ಶೆಟ್ಟಿ, ಜೀತೇಂದ್ರ ಪುಟ್ರಾಡೋ, ನವೀನ್ ಶೆಟ್ಟಿ, ವೈ. ಸುಧೀರ್ ಕುಮಾರ್, ಸುಧೀರ್ ಹೆಜಮಾಡಿ, ಕರುಣಾಕರ್ ಪೂಜಾರಿ, ಹಸನ್ ಕಂಚಿನಡ್ಕ, ಗಣೇಶ್ ಕೋಟ್ಯಾನ್ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *