Header Ads
Breaking News

ಪರಸ್ಪರ ನೆರವಾಗುವ ಮನೋಭಾವ ಅಭಿವೃದ್ಧಿಗೆ ಪೂರಕ: ಡಾ.ಶಾಲಿನಿ ರಜನೀಶ್

ಸಾರ್ವಜನಿಕ ಆಡಳಿತಾತ್ಮಕ ಹೆಜ್ಜೆಗಳೊಂದಿಗೆ ಜನಸಮೂಹದ ವಿವಿಧ ವಲಯಗಳ ವ್ಯಕ್ತಿತ್ವಗಳು ಪರಸ್ಪರ ನೆರವಿಗೆ ಧಾವಿಸುವ ಮನೋಧರ್ಮದೊಂದಿಗೆ ಗುರುತಿಸಿಕೊಂಡಾಗ ದೇಶದ ಸರ್ವತೋಮುಖ ಅಭಿವೃದ್ಧಿಯ ಸಾಧ್ಯತೆಗಳು ಮತ್ತಷ್ಟು ವಿಸ್ತಾರಗೊಳ್ಳುತ್ತವೆ ಎಂದು ರಾಜ್ಯದ ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು. ಅವರು ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿತವಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಅಧ್ಯಯನನಿರತ ವಿದ್ಯಾರ್ಥಿಗಳು ಓದುವ ಕಾಲಕ್ಕೇ ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುವ ಮನೋಧರ್ಮದೊಂದಿಗೆ ಗುರುತಿಸಿಕೊಳ್ಳಬೇಕು. ತಿಳಿದುಕೊಂಡಿದ್ದನ್ನು ಇನ್ನೊಬ್ಬರಿಗೆ ಹಂಚುವುದಕ್ಕೆ ಮುಂದಾಗಬೇಕು. ಈ ಬಗೆಯ ಮನೋಭಾವ ಕಲಿಕೆಯ ಹಂತದಿಂದಲೇ ರೂಢಿಯಾದರೆ ಭವಿಷ್ಯದಲ್ಲಿ ಸಮಾಜದಲ್ಲಿ ನೊಂದವರ ಸಹಾಯಕ್ಕೆ ಧಾವಿಸುವ ಉತ್ಸಾಹ ಸಹಜವಾಗಿಯೇ ವ್ಯಕ್ತಿತ್ವದಲ್ಲಿ ಬೆರೆತುಹೋಗುತ್ತದೆ. ಇದು ಸಮಾಜದ ಸಮಗ್ರ ಪ್ರಗತಿಯ ಗತಿಯನ್ನು ಮತ್ತಷ್ಟು ತೀವ್ರಗೊಳಿಸುವಲ್ಲಿ ನೆರವಾಗುತ್ತದೆ ಎಂದು ಹೇಳಿದರು.

ದೇಶದ ಮುನ್ನಡೆಗೆ ಮಾನವ ಸಂಪನ್ಮೂಲ ಸಶಕ್ತವಾಗಿ ರೂಪುಗೊಳ್ಳಬೇಕು. ಶೈಕ್ಷಣಿಕ ಹಂತಗಳಲ್ಲಿರುವಾಗ ಸಂಪನ್ಮೂಲವಾಗಿ ರೂಪುಗೊಳ್ಳುವ ಸಾಧನೆಯ ಕನಸುಗಳೊಂದಿಗೆ ವಿದ್ಯಾರ್ಥಿಗಳು ಗುರುತಿಸಿಕೊಳ್ಳಬೇಕು. ಬೌದ್ಧಿಕವಾಗಿ ತಿಳಿದುಕೊಳ್ಳುವುದಷ್ಟೇ ಅಲ್ಲದೇ ಆ ತಿಳುವಳಿಕೆಯನ್ನು ಸಾಮಾಜಿಕ ಪ್ರಯೋಜನಕ್ಕಾಗಿ ವಿನಿಯೋಗಿಸುವುದರ ಕಡೆಗೂ ಆದ್ಯತೆ ನೀಡಬೇಕು. ಯುವಕರು ಸೇರಿದಂತೆ ಜನಸಮೂಹದ ವಿವಿಧ ವಲಯಗಳವರು ಈ ನಿಟ್ಟಿನಲ್ಲಿ ಆಲೋಚಿಸಿದರೆ ಸಾರ್ವಜನಿಕ ಆಡಳಿತಾತ್ಮಕ ಪ್ರಕ್ರಿಯೆಗೆ ಬಹುದೊಡ್ಡ ಬೆಂಬಲ ದೊರಕಿದಂತಾಗುತ್ತದೆ. ಆ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.

ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು 2030ರೊಳಗೆ ಎಲ್ಲಾ ದೇಶಗಳೂ ಸಮಾನ ಮಟ್ಟವನ್ನು ತಲುಪಿಕೊಳ್ಳಲು ಗುರಿ ನಿಗದಿಗೊಳಿಸಿದೆ. ಭೂಮಿಯನ್ನು ಎಲ್ಲ ಬಗೆಯ ಮನುಷ್ಯ ವಿಕೃತಿಗಳಿಂದ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಹೊತ್ತಿನಲ್ಲಿ ಈ ಗುರಿ ಮಹತ್ವಪೂರ್ಣವೆನ್ನಿಸುತ್ತದೆ. ಪರಿಸರ ಸಮತೋಲನ ಕಾಯ್ದುಕೊಂಡು ಸುಸ್ಥಿರ ಅಭಿವೃದ್ಧಿ ಸಾಧನೆಯ ಸಾರ್ವಜನಿಕ ಆಡಳಿತಾತ್ಮಕ ಪ್ರಯತ್ನಗಳಿಗೆ ಜನರ ಪರಸ್ಪರ ಸಹಕಾರ ಮನೋಭಾವ ಪೂರಕವಾಗುತ್ತದೆ. ಹಾಗಾಗಿ ಇಂಥ ಉದಾತ್ತ ಉದ್ದೇಶಗಳಿಗೆ ತಕ್ಕಂತೆ ಜನಸಮೂಹ ತಮ್ಮ ಸಹಭಾಗಿತ್ವದ ಮೂಲಕ ಕೊಡುಗೆಗಳನ್ನು ನೀಡಲು ಮುಂದಾಗಬೇಕು ಎಂದು ಹೇಳಿದರು.

ಮಹಿಳೆಯರಿಗೆ ಸಮಾನ ಅವಕಾಶಗಳು ವ್ಯಾಪಕವಾಗಿ ಲಭ್ಯವಾಗಬೇಕಿದೆ. ಬಡತನದ ಬೇಗೆಯೊಂದಿಗೆ ಬಳಲುವವರು ಹಲವರಿದ್ದಾರೆ. ಹಲವು ಕಾರಣಗಳಿಗಾಗಿ ನಿರ್ಲಕ್ಷಿತರಾಗಿ ಶೈಕ್ಷಣಿಕ ಸಾಮಥ್ರ್ಯ ರೂಢಿಸಿಕೊಳ್ಳುವಲ್ಲಿ ಸೋತವರು ಹತಾಶರಾಗುತ್ತಾರೆ. ಅಂಥವರ ನೆರವಿಗೆ ಧಾವಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಸೇರ್ಪಡೆಗೊಳಿಸಿ ಅವರೂ ಮಹತ್ವದ ಮಾನವ ಸಂಪನ್ಮೂಲ ಆಗುವುದಕ್ಕೆ ನೆರವಾಗಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿಯ ಹೆಜ್ಜೆಗಳು ಅರ್ಥಪೂರ್ಣಗೊಳ್ಳುತ್ತವೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಅಭಿವೃದ್ಧಿಯ ಸಮಗ್ರ ಆಯಾಮದ ಪರಿಕಲ್ಪನೆಯನ್ನು ಅರ್ಥೈಸಿಕೊಂಡಾಗ ಮಾತ್ರ ವ್ಯಕ್ತಿಗತ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು. ವ್ಯಕ್ತಿತ್ವ ಬೆಳವಣಿಗೆಯ ಜೊತೆಜೊತೆಗೆ ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡುವ ಸಾಮಥ್ರ್ಯ ರೂಢಿಸುವುದರ ಕಡೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.

ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ಅಧ್ಯಾಪಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಸೇರಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿ.ಎಚ್.ಡಿ ಪದವಿ ಪಡೆದ ಅಧ್ಯಾಪಕರನ್ನು ಸನ್ಮಾನಿಸಲಾಯಿತು. ಅಲ್ಲದೇ ಇತ್ತೀಚೆಗೆ ನಿವೃತ್ತರಾದ ಪ್ರಾಧ್ಯಾಪಕರನ್ನೂ ಗೌರವಿಸಲಾಯಿತು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವರಾದ ಡಾ.ಸಂಪತ್‍ಕುಮಾರ್ ಕಾಲೇಜಿನ ಸಾಧನೆಗಳ ಹೆಜ್ಜೆಗಳ ಸಮಗ್ರ ವಿವರಗಳನ್ನು ಪ್ರಸ್ತುತಪಡಿಸಿದರು.

Related posts

Leave a Reply

Your email address will not be published. Required fields are marked *