Header Ads
Header Ads
Header Ads
Header Ads
Header Ads
Header Ads
Breaking News

ಪರಿಸರ ಪರ ನಿಲುವು ಮತ್ತು ಸಾಮಾಜಿಕ ಕಾಳಜಿಯೊಂದಿಗಿನ ಒಳಿತಿನ ಆಲೋಚನೆ ನೈಜ ನಾಗರಿಕ ಪ್ರಜ್ಞೆಯನ್ನು ಸಂಕೇತಿಸುತ್ತವೆ: ಡಾ.ಪಿ.ಎಸ್.ಹರ್ಷ

ಉಜಿರೆ, ಸೆ.19: ಪರಿಸರ ಪರ ನಿಲುವು ಮತ್ತು ಸಾಮಾಜಿಕ ಕಾಳಜಿಯೊಂದಿಗಿನ ಒಳಿತಿನ ಆಲೋಚನೆ ನೈಜ ನಾಗರಿಕ ಪ್ರಜ್ಞೆಯನ್ನು ಸಂಕೇತಿಸುತ್ತವೆ ಎಂದು ಮಂಗಳೂರು ನಗರ ಪೋಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗ ಗುರುವಾರ ಆಯೋಜಿಸಿದ್ದ ನಾಗರಿಕ ಪ್ರಜ್ಞೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣ ‘ಸಂಭ್ರಮ-2019’ ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಪ್ರಜ್ಞೆಯನ್ನು ಬಾಹ್ಯ ಪ್ರಭಾವದಿಂದ ಬೆಳೆಸಲು ಸಾಧ್ಯವಿಲ್ಲ. ಆಂತರಿಕ ಸ್ಪೂರ್ತಿ ಮಾತ್ರ ಉತ್ತಮ ನಾಗರಿಕರನ್ನಾಗಿ ನಮ್ಮನ್ನು ರೂಪಿಸುತ್ತದೆ. ಖಾಸಗಿ ವಾತಾವರಣದಲ್ಲಿಯೂ ಅಚ್ಚುಕಟ್ಟಾಗಿ ಬಾಳಲು ಕಲಿತರೆ ಮಾತ್ರ ಸಾಮಾಜಿಕವಾಗಿ ಉತ್ತಮ ನಾಗರಿಕರೆನಿಸಿಕೊಳ್ಳಲು ಸಾಧ್ಯ ಎಂದರು. ಆಧುನಿಕ ಕಾಲದಲ್ಲಿ ಹೆಚ್ಚುತ್ತಿರುವ ಗ್ರಾಹಕ ಸಂಸ್ಕøತಿಯಿಂದ ಪ್ರಕೃತಿಯಿಂದ ವಿಮುಖರಾಗುತ್ತಿದ್ದೇವೆ. ಮನೆಯ ಅಂಗಳವನ್ನೇ ಕಾಂಕ್ರೀಟೀಕರಣಗೊಳಿಸುವ ಮನೋಭಾವ ಬೆಳೆಯುತ್ತಿದೆ. ಮನುಷ್ಯ ಪ್ರಕೃತಿಯ ಗ್ರಾಹಕನಲ್ಲ. ಪರಿಸರವು ಬದುಕಿನ ಅವಿಭಾಜ್ಯ ಅಂಗ ಎಂಬುದು ನಮ್ಮ ಅರಿವಿಗೆ ಬರಬೇಕು. ಸ್ವಾಭಾವಿಕ ಸಂಪನ್ಮೂಲ ಬಳಕೆಯಲ್ಲಿ ಮಿತವ್ಯಯ ಮಾಡಬೇಕು. ಭವಿಷ್ಯದ ಪಾಲಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದು ಇಂದಿನ ತುರ್ತು ಎಂದರು.

ಅವರು ಬೆಳ್ತಂಗಡಿಯ ದಟ್ಟಕಾಡಿನಲ್ಲಿ ಚಾರಣ ಹೋಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಈಗಲೂ ಸೂರ್ಯನ ಬೆಳಕು ನೆಲ ತಲುಪದ ತಾಣಗಳು ಬೆಳ್ತಂಗಡಿಯಲ್ಲಿವೆ. ಧರ್ಮ, ಭಾಷೆ, ಭೌಗೋಳಿಕ ವಿಭಿನ್ನತೆಗಳು ನಮ್ಮನ್ನು ಒಗ್ಗೂಡಿಸಬೇಕು. ಎಲ್ಲ ವೈವಿಧ್ಯಗಳ ನಡುವೆ ಒಂದು ಸಂವಿಧಾನವನ್ನು ನಂಬುವುದು ನಮ್ಮ ಜೀವನದ ಆಪ್ತ ಭಾಗವಾಗಬೇಕು. ಆ ನೆಲೆಯಲ್ಲಿಯೇ ದೇಶದೊಳಗಿನ ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ತಂತ್ರಜ್ಞಾನ ಎಷ್ಟೇ ಬೆಳೆದರೂ ಅನನ್ಯ ಹಾಡು ಹೇಳಲು ನಮಗೆ ಸಂಗೀತಗಾರರು ಅನಿವಾರ್ಯ. ಸ್ಥಳೀಯ ಭಾಷೆ, ಸಂಸ್ಕøತಿಗಳಿರುವ ಭಿನ್ನ ಪ್ರಾದೇಶಿಕ ಮೌಲ್ಯಗಳನ್ನು ಪರಿಗಣಿಸಿ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.ಅತಿಥಿಯಾಗಿ ಆಗಮಿಸಿದ್ದ ಎಸ್.ಡಿ.ಎಂ ಪ್ರಕೃತಿ ಮತ್ತು ಯೋಗ ಚಿಕತ್ಸೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ಮಾತನಾಡಿದರು. ನಮ್ಮಂತೆಯೇ ಇತರರೂ ಎಂಬ ಮನೋಭಾವ ರೂಡಿಸಿಕೊಂಡರೆ ಉತ್ತಮ ನಾಗರಿಕ ಪ್ರಜ್ಞೆ ಬೆಳೆಯಲು ಸಾಧ್ಯ. ನಾಗರಿಕ ಪ್ರಜ್ಞೆ ನಮ್ಮ ಜೀವನದರ್ಶನವಾಗಬೇಕು. ಸಾಮಾಜಿಕ ಪ್ರತಿಷ್ಠೆಯ ಭ್ರಮೆಯಿಂದ ಹೊರಬರಬೇಕು ಎಂದು ಕರೆಕೊಟ್ಟರು.

ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಜೀವನದಲ್ಲಿ ನೈತಿಕ ತಳಹದಿಯಲ್ಲಿ ಮುನ್ನಡೆದರೆ ವ್ಯಕ್ತಿತ್ವ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ಉತ್ತಮ ವ್ಯಕ್ತಿತ್ವ ನಮ್ಮನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುತ್ತದೆ ಎಂದರು.
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದ ಡೀನ್ ಡಾ.ಬಿ.ಗಣಪಯ್ಯ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ರವಿಶಂಕರ.ಕೆ, ವಿದ್ಯಾರ್ಥಿ ಪ್ರತಿನಿಧಿಗಳಾದ ನೀಲಕಂಠ.ಎಸ್.ಬಿ, ಎಸ್. ಮೇಧಾ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥ ಪ್ರೊ.ರವಿಶಂಕರ.ಕೆ ಪ್ರಾಸ್ತಾವಿಕ ಮಾತನಾಡಿದರು. ಸ್ವಾತಿ.ಬಿ ಸ್ವಾಗತಿಸಿದರು. ಸ್ವಾತಿ ಸಂಗಡಿಗರು ಪ್ರಾರ್ಥಿಸಿದರು. ಚಿತ್ರಾ ವಂದಿಸಿದರು. ಚಿನ್ಮಯ್ ಮತ್ತು ಸುಪ್ರೀತಾ ನಿರೂಪಿಸಿದರು.

Related posts

Leave a Reply

Your email address will not be published. Required fields are marked *