Header Ads
Header Ads
Breaking News

ಪವರ್ ಟಿಲ್ಲರ್ ಕಾಲು ನುಂಗಿತು, ಆಟೋ ರಿಕ್ಷಾ ಬದುಕು ಕೊಟ್ಟಿತು!ಸ್ವಾಭಿಮಾನದ ಬದುಕು ಕಟ್ಟಿಕೊಂಡ ಹೊಳೆ ಜೆಡ್ಡುವಿನ ಸಂತೋಷ್ ನಾಯ್ಕ್

ಕಾಲಿಲ್ಲದಿದ್ದರೇನಂತೆ ಸಲೀಸಾಗಿ ಓಡುತ್ತದೆ ಆಟೋ ರಿಕ್ಷಾ. ಯಾವ ಗದ್ದೆಯೇ ಇರಲಿ ಟಿಲ್ಲರ್ ಉಳುಮೆ ನಿಲ್ಲೋದಿಲ್ಲ. ಉತ್ಸಾಹ, ಗುರಿ ಮುಟ್ಟುವ ಛಲ, ಸ್ವಾಭಿಮಾನ ಎಲ್ಲವೂ ಇದ್ದರೆ ವಿಕಲತೆಯೂ ತಲೆಬಾಗುತ್ತದೆ. ಒಂಟಿ ಕಾಲಿನಲ್ಲೇ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸಂತೋಷ್ ನಾಯ್ಕ್ ಅವರ ಜೀವನೋತ್ಸಾಹದ ಕಥೆ ನೋಡಬನ್ನಿ. ಮೂರು ವರ್ಷಗಳ ಹಿಂದೆ ನಡೆದ ದುರಂತವೊಂದರಲ್ಲಿ ಕಾಲು ಕಳೆದುಕೊಂಡು ಹೆಂಡತಿ, ಮಕ್ಕಳಿಗೆ ಭಾರವಾಗಬೇಕಿದ್ದ ವ್ಯಕ್ತಿ ಕೊಂಚವೂ ಧೃತಿಗೆಡದೆ ಒಂಟಿ ಕಾಲಿನಲ್ಲೇ ಆಟೋ ಓಡಿಸಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಮನೆಯ ಆಧಾರಸ್ತಂಭವಾಗಿದ್ದಾರೆ. ನಾವು ಈಗ ಹೇಳುತ್ತಿರುವ ಸ್ಟೋರಿ 2015 ಜುಲೈ 7ರಂದು ಗದ್ದೆ ಉಳುಮೆ ಮಾಡುವಾಗ ಟಿಲ್ಲರ್ ಕತ್ತಿ ಸಿಲುಕಿ ಎಡ ಕಾಲು ಕಳೆದುಕೊಂಡ ಶಿರೂರು ಮುದ್ದುಮನೆ ಹೊಳೆಜೆಡ್ಡುವಿನ ನಿವಾಸಿ ಸಂತೋಷ್ ನಾಯ್ಕ್ ಜೀವನೋತ್ಸಾಹದ ಕತೆ. ಮೂರು ವರ್ಷಗಳ ಹಿಂದೆ ಸ್ನೇಹಿತನ ಮನೆಯ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವಾಗ ಕುಳಿತುಕೊಂಡಿದ್ದ ಟಿಲ್ಲರ್ ಸೀಟ್ ತುಂಡಾಗಿ ಸಂತೋಷ್ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಎಡಕಾಲಿಗೆ ಟಿಲ್ಲರ್‌ನ ಕತ್ತಿ ಸಿಲುಕಿ ಕಾಲು ತುಂಡಾಗಿ ಗದ್ದೆಗೆ ಬಿದ್ದಿತ್ತು. ಮುಂಗಾಲಿಗೆ ಟಿಲ್ಲರ್ ಕತ್ತಿ ಸಿಲುಕಿಕೊಂಡಿದ್ದರಿಂದ ಕೂಡಲೇ ಅವರನ್ನು ಟಿಲ್ಲರ್‌ನ ಕತ್ತಿ ಸಮೇತ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಕತ್ತಿಯನ್ನು ಬೇರ್ಪಡಿಸಲು ಸಮಯಾವಕಾಶ ಬೇಕಾಗಿದ್ದರಿಂದ ತುಂಡಾದ ಕಾಲನ್ನು ಜೋಡಿಸಲಸಾಧ್ಯವಾಯಿತು. ಸಂತೋಷ್ ಇದೀಗ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ.ಸಂತೋಷ್ 19 ವರ್ಷಗಳ ಕಾಲ ಖಾಸಗಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸಿದ್ದು, ಬೆಳಗ್ಗಿನ ಜಾವ ಬೇಗ ಎದ್ದು ಗದ್ದೆ ಉಳುಮೆ ಮಾಡಿ ಬಳಿಕ ಡ್ರೈವಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಕಾಲು ತುಂಡಾದ ಬಳಿಕ ಆಸ್ಪತ್ರೆ ಪಾಲಾಗಿದ್ದ ಅವರು ಕೇವಲ ಹದಿನೈದು ದಿನಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸಾಗಿದ್ದರು. ಶ್ರಮಜೀವಿಯಾಗಿದ್ದ ಸಂತೋಷ್ ಕಾಲು ಕಳೆದುಕೊಂಡು ಬದುಕೇ ಮುಗಿದುಬಿಟ್ಟಿತು ಅಂದುಕೊಳ್ಳಲಿಲ್ಲ. ಬದಲಾಗಿ ಎರಡೇ ತಿಂಗಳಲ್ಲಿ ಮತ್ತೆ ಪುಟಿದೆದ್ದು ಸಾಲ ಮಾಡಿ ಸ್ಥಳೀಯರ ಸಹಕಾರದಿಂದ ಆಟೋ ಖರೀದಿಸಿ ಬಾಡಿಗೆ ಮಾಡಲು ಆರಂಭಿಸಿದರು.ಕಾಲು ತುಂಡಾದ ಕಾರಣ ಬಸ್ ಡ್ರೈವಿಂಗ್ ಕೆಲಸ ಕಳೆದುಕೊಂಡ ಸಂತೋಷ್‌ಗೆ ಇದೀಗ ಆಟೋ ರಿಕ್ಷಾವೇ ಜೀವನಾಧಾರ. ಪತ್ನಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದರೆ, ಮಗಳು ತೀರ್ಥಹಳ್ಳಿಯ ಹಾಸ್ಟೇಲ್‌ನಲ್ಲಿ ಉಳಿದು ಶಿಕ್ಷಣ ಪಡೆಯುತ್ತಿದ್ದಾಳೆ. ತುಂಬಾ ಕಷ್ಟದಲ್ಲಿಯೂ ಇನ್ನೊಬ್ಬರಲ್ಲಿ ಕೈಚಾಚದೆ ಆಟೋ ರಿಕ್ಷಾದಲ್ಲೇ ದುಡಿದು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸಂತೋಷ್ ಇತರರಿಗೆ ಮಾದರಿಯಾಗಿದ್ದಾರೆ.ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಸಂತೋಷ್, ಟಿಲ್ಲರ್ ದುರಂತ ಸಂಭವಿಸುವ ಮೊದಲು ಬಸ್ ಹಾಗೂ ಟಿಲ್ಲರ್ ದುಡಿಮೆಯಿಂದಲೇ17ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದರು. ಕಾಲು ತುಂಡಾದ ವೇಳೆಯಲ್ಲಿ ಮನೆಯ ಗ್ರಹಪ್ರವೇಶವೊಂದೆ ಬಾಕಿ ಇದ್ದಿತ್ತು. ಬಳಿಕ ಸ್ಥಳೀಯರು ಹಾಗೂ ಹಿತೈಷಿಗಳ ನೆರವಿನಿಂದ ಗ್ರಹಪ್ರವೇಶ ಮಾಡಿದ್ದು, ಇದೀಗ ತಾನು ನಿರ್ಮಿಸಿದ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೃಷಿಗಾಗಿ ಗದ್ದೆ ಉಳುಮೆ ಮಾಡುವ ವೇಳೆಯಲ್ಲಿ ಕಾಲು ತುಂಡಾಗಿದ್ದು, ಅಂದು ಈ ದುರಂತ ಇಡೀ ರಾಜ್ಯಾದಾದ್ಯಂತ ಸುದ್ದಿ ಮಾಡಿತ್ತು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಂತೋಷ್‌ಗೆ ಮಾನವೀಯ ನೆಲೆಯಲ್ಲಾದರೂ ಪರಿಹಾರ ಕೊಡಿಸುವ ಗೋಜಿಗೆ ಹೋಗಿಲ್ಲ. ತಿಂಗಳಿಗೆ ಮಾಶಾಸನವೊಂದು ಬರುತ್ತಿದೆ ಬಿಟ್ಟರೆ ಸರ್ಕಾರದಿಂದ ಬೇರೆ ಯಾವ ಪರಿಹಾರವೂ ಇದುವರೆಗೂ ಸಿಕ್ಕಿಲ್ಲ. ತಿಂಗಳಿಗೆ ಬರುತ್ತಿರುವ ಮಾಶಾಸನ ಬಾರದೇ ಮೂರು ತಿಂಗಳು ಕಳೆದಿದೆ ಎಂದು  ನೋವನ್ನು  ತಮ್ಮಜೊತೆ ಹಂಚಿಕೊಂಡಿದ್ದಾರೆ.ಎರಡು ಕಾಲುಗಳು ಇದ್ದಾಗಲೂ ಎರೆಡೆರಡು ಕೆಲಸ ಮಾಡಿ ಶ್ರಮವಹಿಸಿ ದುಡಿಯುತ್ತಿದ್ದ ಸಂತೋಷ್ ಒಂದು ಕಾಲು ಕಳೆದುಕೊಂಡರೂ ಎರಡೆರಡು ಕೆಲಸ ನಿಭಾಯಿಸುತ್ತಿದ್ದಾರೆ. ಆಟೋ ಬಾಡಿಗೆ ಮಾಡುವುದರ ಜೊತೆಗೆ ಕಾಲು ಕಳೆದುಕೊಂಡ ಟಿಲ್ಲರ್‌ನಲ್ಲೇ ಒಂಟಿ ಕಾಲಿನಲ್ಲಿ ಗದ್ದೆ ಉಳುಮೆ ಮಾಡುತ್ತಿರುವುದು ವಿಶೇಷ. ಆಟೋ ನಿಲ್ದಾಣದಲ್ಲಿ ರಿಕ್ಷಾ ನಿಲ್ಲಿಸದೇ ಮನೆಯಲ್ಲೇ ಫೋನ್ ಬಾಡಿಗೆ ಮಾತ್ರ ಮಾಡುವ ಸಂತೋಷ್, ತುರ್ತು ಸಂದರ್ಭಗಳಲ್ಲಿ ರಾತ್ರಿ ಯಾರೇ ಫೋನ್ ಮಾಡಿ ಕರೆದರೂ ಬಾಡಿಗೆಗೆ ತೆರಳುತ್ತಾರೆ ಹೀಗಾಗಿಯೇ ಅವರನ್ನು ಆಪತ್ಭಾಂದವ ಎಂದೇ ಕರೆಯುತ್ತಾರೆ.ಕಾಲು ತುಂಡಾದರೂ ಕಿಂಚಿತ್ತು ಧೃತಿಗೆಡಲಿಲ್ಲ, ಕೊರಗಲೂ ಇಲ್ಲ. ಬೇಡಿ ತಿನ್ನಲಿಲ್ಲ, ದುಡಿದು ತಿನ್ನಬೇಕೆಂಬ ಆಸೆ ಇದೆ. ಆಟೋ ಖರೀದಿಸಲು ಸ್ಥಳೀಯರು ಮತ್ತು ಬಸ್ ಚಾಲಕ, ನಿರ್ವಾಹಕ ಸ್ನೇಹಿತರು53,000 ರೂ. ಸಹಾಯ ಮಾಡಿದರು. ಉಳಿದ ಹಣ ಸೊಸೈಟಿಯಲ್ಲಿ ಸಾಲ ಪಡೆದುಕೊಂಡು ಹೊಸ ಆಟೋ ತೆಗೆದುಕೊಂಡಿದ್ದೇನೆ. ಸಾಲ ತೀರಿದ ಬಳಿಕ ಆಟೋ ರಿಪೇರಿ ಮಾಡಿಸುತ್ತೇನೆ. ಆಗಿನ ಎಸ್ಪಿಯಾಗಿದ್ದ ಅಣ್ಣಾಮಲೈ ತುಂಬಾ ಸಹಾಯ ಮಾಡಿದ್ದರು. ನನ್ನ ಆಟೋ ಪೊಲೀಸರು ತಡೆಯದ ಹಾಗೆ ಪತ್ರವೊಂದನ್ನು ಕೊಟ್ಟಿದ್ದರು. ಅವರ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಸರ್ಕಾರದಿಂದ ಯಾವ ಪರಿಹಾವೂ ಸಿಕ್ಕಿಲ್ಲ. ಸರ್ಕಾರ ನನಗೊಂದು ಅಂಗಡಿ ಮಾಡಿಕೊಟ್ಟರೆ ಅದರಲ್ಲೇ ಬದುಕು ಸಾಗಿಸುತ್ತೇನೆ ಎನ್ನುತ್ತಾರೆ ಸಂತೋಷ್. ಇನ್ನಾದರೂ ಜನಪ್ರತಿನಿಧಿಗಳು ಮಾನವೀಯ ನೆಲೆಯಲ್ಲಾದರೂ ಸಂತೋಷ್ ನೆರವಿಗೆ ಮುಂದಾಗಲಿ ಎನ್ನುವುದೇ ನಮ್ಮ ಆಶಯ

 

Related posts

Leave a Reply