Header Ads
Breaking News

ಪಾಳುಬಿದ್ದು ಭೂತ ಬಂಗಲೆಯಂತಾದ ವಸತಿ ನಿಲಯ : ನಿರ್ವಹಣೆ ಇಲ್ಲದೆ ಕುಸಿಯುವ ಸ್ಥಿತಿಗೆ ತಲುಪಿದ ಮನೆಯ ಗೋಡೆ

ಬಂಟ್ವಾಳ: ಹಲವಾರು ವರ್ಷಗಳಿಂದ ವಾಸ್ತವ್ಯವೇ ಇಲ್ಲದೆ ಪಾಳುಬಿದ್ದು ಭೂತ ಬಂಗಲೆಯಂತಾಗಿರುವ ವಸತಿ ನಿಲಯ… ಮನೆಗೆ ಸಂಪರ್ಕವೇ ಇಲ್ಲದಂತೆ ಸುತ್ತಲೂ ಬೆಳೆದಿರುವ ಗಿಡಗಂಟಿಗಳು.. ನಿರ್ವಹಣೆ ಇಲ್ಲದೆ ಕುಸಿಯುವ ಸ್ಥಿತಿಗೆ ತಲುಪಿದ ಮನೆಯ ಗೋಡೆಯಲ್ಲಿ ಕಾಣಸಿಗುವ ಪೋಲಿ ಸಾಹಿತ್ಯ..ಇದು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೀರು ಸರಬರಾಜು ಮಾಡುವ ಪಂಪ್‍ಹೌಸ್‍ನ ಸಿಬ್ಬಂದಿಗಳಿಗೆ ಸಜೀಪಮುನ್ನೂರು ಗ್ರಾಮದ ಬೊಕ್ಕಸ ಎಂಬಲ್ಲಿ ನಿರ್ಮಾಣಗೊಂಡ ವಸತಿ ನಿಲಯದಲ್ಲಿ ಎದುರುಗೊಳ್ಳುವ ದೃಶ್ಯಗಳು.

ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೀರು ಸರಬರಾಜು ಮಾಡುವ ಪಂಪ್‍ಹೌಸ್ ಸಜೀಪಮುನ್ನೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿರುವ ಮಡಿವಾಳಪಡ್ಪು ಎಂಬಲ್ಲಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಅನುಕೂಲಕ್ಕಾಗಿ ಅಲ್ಲಿಂದ ಸುಮಾರು ಅರ್ಧ ಕಿ.ಮೀ.ದೂರದಲ್ಲಿರುವ ಬೊಕ್ಕಸ ಎಂಬಲ್ಲಿನ ಎತ್ತರದ ಪ್ರದೇಶದಲ್ಲಿ 4 ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಆದರೆ ಆರಂಭದ ಕೆಲವು ದಿನಗಳು ಮಾತ್ರ ಇಲ್ಲಿ ವಾಸ್ಯವ್ಯ ಹೂಡಿದ್ದ ಸಿಬ್ಬಂದಿಗಳು ಮತ್ತೆ ಇತ್ತ ಬಂದಿಲ್ಲ. ಇದೀಗ ಈ ವಸತಿ ನಿಲಯ ನಿರ್ಮಾಣಗೊಂಡು 30 ವರ್ಷ ಕಳೆದಿದ್ದು ನಿರ್ವಹಣೆ ಇಲ್ಲದೆ ಇರುವುದರಿಂದ ನಾಲ್ಕು ಮನೆಗಳು ಪಾಳು ಬಿದ್ದಿದೆ.

ಈ ಮನೆಗಳ ಆವರಣದ ಸುತ್ತಲೂ ಆಳೆತ್ತರದ ಗಿಡಗಂಟಿಗಳು ಬೆಳೆದು ಹೊರಭಾಗಕ್ಕೆ ಛಾವಣಿ ಮಾತ್ರ ಕಾಣುತ್ತಿದೆ. ಪ್ರವೇಶ ಮೆಟ್ಟಿಲಿನ ಬಳಿಯಿಂದಲೇ ಪೊದೆಗಳು, ಮರಗಳು ಬೆಳೆದು ಮನೆಗೆ ಹೋಗಲು ದಾರಿ ಇಲ್ಲದಂತಾಗಿದೆ. ಹೆಬ್ಬಾವು, ಕನ್ನಡಿ ಹಾವು, ಉಡ ಮೊದಲಾದ ವಿಷ ಜಂತುಗಳ ಆವಾಸ ಸ್ಥಾನವಾಗಿದ್ದು ಮನೆ ಪರಿಸದರಲ್ಲಿ ಈ ಜಂತುಗಳು ಓಡಾಡಿಕೊಂಡಿರುತ್ತವೆ. ಮಡಿವಾಳ ಪಡ್ಪು, ಬೊಕ್ಕಸ, ಮೊದಲಾದ ಪ್ರದೇಶಗಳಿಗೆ ಇಲ್ಲಿಂದಲೇ ಹೋಗಬೇಕಾಗಿರುವುದರಿಂದ ಈ ನಿರ್ಜನ ಪ್ರದೇಶ ಭಯದ ವಾತವರಣ ನಿರ್ಮಿಸಿದೆ.

ಮನೆಯಲ್ಲಿ ವಾಸ್ತವ್ಯ ಇಲ್ಲದೇ ಇರುವುದರಿಂದ ಪಡ್ಡೆಗಳಿಗೆ ಸ್ವರ್ಗದಂತಿದೆ. ನಿರ್ಜನ ಪ್ರದೇಶದಲ್ಲಿರುವಿದರಿಂದ ಪಡ್ಡೆಗಳಿಗೆ ಅನೈತಿಕ ಚಟುವಟಿಕೆಗಳಿಗೆ ಈ ಮನೆಗಳು ಅಡ್ಡೆಯಾಗಿದ್ದು ಗ್ರಾಮಸ್ಥರಿಗೆ ಮುಜುಗರ ತರುವಂತಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಕಳ್ಳರ ಪಾಲಾಗಿದೆ. ಆದ್ದರಿಂದ ಈ ಮನೆಗಳನ್ನು ನೆಲಸಮಗೊಳಿಸ ಬೇಕು ಅಥವಾ ಮನೆಯನ್ನು ದುರಸ್ತಿ ಪಡಿಸಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಬೇಕು. ಸರಕಾರದ ಹಣ ಈ ರೀತಿ ಪೋಲಾಗುವುದು ಸರಿಯಲ್ಲ, ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

Leave a Reply

Your email address will not be published. Required fields are marked *