Header Ads
Breaking News

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 36ನೇ ವಾರ್ಷಿಕೋತ್ಸವ : ಬಂಗ್ಲೆ ಮೈದಾನದಲ್ಲಿ ಉಚಿತ ಸಾಮೂಹಿಕ ವಿವಾಹ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 36ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 12ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 10ಜೋಡಿ ವಧು-ವರರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರಿಗೆ ‘ಸ್ವಸ್ತಿ ಸಿರಿ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ಸಾಧಕರಿಗೆ ‘ಸ್ವಸ್ತಿಕ್ ಸಂಭ್ರಮ’ಪುರಸ್ಕಾರ ಪ್ರದಾನ ಮಾಡಲಾಯಿತು. ಶಶಿಕಿರಣ್ ಬೊಮ್ಮಸಂದ್ರ ಬೆಂಗಳೂರು( ಉದ್ಯಮ), ಸತೀಶ್ ಶೆಟ್ಟಿ ಮತ್ತು ಜಗದೀಶ ಶೆಟ್ಟಿ(ಕಂಬಳ),ಎ.ಕೆ.ಸುಂದರ ಸಾಲ್ಯಾನ್ ಬೆಂಗಳೂರು(ಸಮಾಜಸೇವೆ) ಮೋಹನದಾಸ್ ಕೊಟ್ಟಾರಿ (ಸಾಂಸ್ಕೃತಿಕ) ಅವರಿಗೆ ಸ್ವಸ್ತಿ ಸಿರಿ ಪ್ರಶಸ್ತಿ, ಲಿಯೋ ಬಾಸಿಲ್ ಫೆರ್ನಾಂಡಿಸ್ (ಉದ್ಯಮ),ಕು.ಬ್ರಾಹ್ಮಿ ಮಯ್ಯ(ಸಾಂಸ್ಕತಿಕ), ಕು.ಆರಾಧನಾಭಟ್ ನಿಡ್ಡೋಡಿ(ಕಲಾ), ಸ್ವರ್ಣ ಸಂಜೀವಿನಿ ಮಡವು ಪಾಂಡವರಕಲ್ಲು (ಅತ್ಯುತ್ತಮ ಯುವ ಸಂಘಟನೆ), ಮಾನವಿ, ಆಕಾಶ್ ಎಸ್ ( ಕ್ರೀಡೆ), ಗಣೇಶ್ ಕೆ.ಎಸ್, ಚಿಂತನ್ , ಪ್ರಜ್ಞಾ ಅತ್ತಾಜೆ, ಸುಹಾಸ್ ಅತ್ತಾಜೆ ಅವರಿಗೆ ಸ್ವಸ್ತಿಕ್ ಸಂಭ್ರಮವನ್ನು ಪ್ರದಾನ ಮಾಡಿ ಪುರಸ್ಕರಿಸಲಾಯಿತು.

ವಿವಾಹ ಕಾರ್ಯಕ್ರಮಕ್ಕೆ ಮುನ್ನ ಬಸವನಗುಡಿಯ ಶ್ರೀಬಸವೇಶ್ವರ ದೇವಸ್ಥಾನದ ವಠಾರದಿಂದ ನೂತನ ವಧು-ವರರನ್ನು ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ವೈಭವದ ದಿಬ್ಬಣ ಮೆರವಣಿಗೆಯಲ್ಲಿ ವಿವಾಹ ಮಂಟಪಕ್ಕೆ ಕರೆತರಲಾಯಿತು. ಹಲವಾರು ಗಣ್ಯರ ಸಮ್ಮುಖದಲ್ಲಿ ಪುಂಜಾಲಕಟ್ಟೆ ಠಾಣೆಯ ಎಸ್ ಐ.ಸೌಮ್ಯ ಅವರು ಮೆರವಣಿಗೆಯನ್ನು ಉದ್ಘಾಟಿಸಿದರು. ಬಳಿಕ 11.30ರ ಶುಭಮುಹೂರ್ತದಲ್ಲಿ ಪುಂಜಾಲಕಟ್ಟೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಾದ ವೇ.ಮೂ.ಶ್ರೀಕೃಷ್ಣ ಭಟ್ ಗುರುವಾಯನಕೆರೆ ಮತ್ತು ಅರ್ಚಕ ತಂಡ ನೂತನ ವಧುವರರಿಗೆ ಗೃಹಸ್ಥಾಶ್ರಮದ ದೀಕ್ಷೇಯನ್ನು ನೀಡಿದರು. ಕ್ಲಬ್‍ನ ಸ್ಥಾಪಕಾಧ್ಯಕ್ಷ ಜಿಪಂ ಸದಸ್ಯ ತುಂಗಪ್ಪ ಬಂಗೇರ ಪ್ರಸ್ತಾವಿಸಿ, ಇದುವರೆಗೆ ನಡೆದ ಸಾಮೂಹಿಕ ವಿವಾಹಗಳಲ್ಲಿ ಒಟ್ಟು 486 ವಿವಾಹಗಳನ್ನು ನೆರವೇರಿಸಲಾಗಿದೆ. ಸಾಮೂಹಿಕ ವಿವಾಹಕ್ಕೆ ಒತ್ತು ನೀಡುವ ಕೆಲಸ ಸರಕಾರದಿಂದಾಗಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿ ಅವರು ವಿವಾಹ ಸಮಾರಂಭವನ್ನು ಉದ್ಘಾಟಿಸಿ ನೂತನ ವಧು, ವರರಿಗೆ ಶುಭಹಾರೈಸಿ ಮಾತನಾಡಿ, ಸಾಮೂಹಿಕ ವಿವಾಹದಂತ ಈ ಪುಣ್ಯಕಾರ್ಯಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ, ಸಪ್ತಪದಿಯಡಿ ಸರಕಾರವು ಸಾಮೂಹಿಕ ವಿವಾಹದ ಸಂಕಲ್ಪವನ್ನು ಮಾಡಿರುವ ಹಿನ್ನಲೆಯಲ್ಲಿ, ಇದಕ್ಕೂ ಎಲ್ಲರು ಸಹಕರಿಸುವಂತೆ ಕೋರಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಕಾರ ಭಾಷಣಕ್ಕೆ ಸೀಮಿತವಾಗದೇ ಅನುಕರಣೆಗೆ ಬರಬೇಕು, ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಂಘಟನೆ, ಯುವ, ಬಾಲಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲು ಯೋಚಿಸಿದೆ ಎಂದರು. ಅತಿಥಿಯಾಗಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಶ್ರೀ.ಕ್ಷೇ.ಧ.ಗ್ರಾ.ಯೋ.ಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಉದ್ಯಮಿ ಹರೀಂದ್ರ ಪೈ, ಬಂಟ್ವಾಳ ಎಆರ್ ಟಿಒ ಚರಣ್.ಕೆ., ವಾಮದಪದವು ಪ್ರ.ದ.ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಪಿಲಾತಬೆಟ್ಟು ಸೇ.ಸ.ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಶುಭಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಾಮದಪದವು ಸ.ಪ್ರ.ದ.ಕಾಲೇಜ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಯಕ್ಷಗಾನ, ತುಳುನಾಟಕ ನಡೆಯಿತು.

Related posts

Leave a Reply

Your email address will not be published. Required fields are marked *