
ಪುತ್ತೂರು: ಪರಂಪರಾಗತವಾಗಿ ಶೈಕ್ಷಣಿಕ,ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿದ್ದ ಬುಡಕಟ್ಟು ಕೊರಗ ಸಮುದಾಯವು ಸ್ವ ಸಂಘಟನೆಯ ಮೂಲಕ ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನೆಡೆಗೆ ಸಾಗುವಂತಾಗಿದೆ ಎಂದು ಪುತ್ತೂರು ತಾಲೂಕು ಕೊರಗ ಸಂಘದ ಸ್ಥಾಪಕ ಅಧ್ಯಕ್ಷ ಯು. ತನಿಯ ಕೊರಗ ಒಳತ್ತಡ್ಕ ಅವರು ತಿಳಿಸಿದರು.
ಅವರು ಕೊರಗರ ಅಭಿವೃದ್ಧಿ ಸಂಘ ಪುತ್ತೂರು ಇದರ ವತಿಯಿಂದ ಪುತ್ತೂರಿನ ದರ್ಬೆ ಕೊರಗ ಸಮುದಾಯ ಭವನದಲ್ಲಿ ನಡೆದ `ಕೊರಗ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದರು. ಕೊರಗ ಅಭಿವೃದ್ಧಿ ಸಂಘದ ಸ್ಥಾಪನೆಯಿಂದಾಗಿ ಹರಿದು ಹಂಚಿ ಹೋಗಿದ್ದ ಕೊರಗ ಸಮುದಾಯವು ಸಂಘಟಿತವಾಗಿ ಬೆಳವಣಿಗೆ ಕಂಡಿದೆ. ಇದರಲ್ಲಿ ಹಿರಿಯ ಮುಖಂಡರ ತ್ಯಾಗವಿದೆ ಎಂದರು.
ಕೊರಗ ಮುಖಂಡ ಮತ್ತಡಿ ಕಾಯರ್ಪಲ್ಕೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಪತ್ರಕರ್ತ ಸಂಶುದ್ದೀನ್ ಸಂಪ್ಯ, ಕೊರಗ ಸಂಘದ ಪ್ರತಿನಿಧಿ ಸಂಜೀವ ಕೊರಗ ಬೆದ್ರ, ರಾಜ್ಯ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಮತಿ ಕಾಸರಗೋಡು ಮಾತನಾಡಿ ಶುಭ ಹಾರೈಸಿದರು.
ತಾಲೂಕು ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ್ ಪಿಜಕ್ಕಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಘದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಕೊರಗ, ಮುಖಂಡರಾದ ಐತ್ತ ಕೊರಗ, ಬಾಬು ಪಿಜಕ್ಕಳ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕೊಯ್ಲ, ಸಮಾಜ ಕಲ್ಯಾಣ ಇಲಾಖೆಯ ಅನ್ನಪೂರ್ಣ ಮತ್ತಿತರರು ಉಪಸ್ಥಿತರಿದ್ದರು.