Header Ads
Breaking News

ಪುತ್ತೂರಿನಲ್ಲಿ ಮೆಸ್ಕಾಂ ಆವಾಂತರ: ರಸ್ತೆಯ ಇಕ್ಕೆಲಗಳಲ್ಲಿ ಹೊಂಡಗಳನ್ನು ತೆಗೆದಿಟ್ಟು ಅಪಾಯಕ್ಕೆ ಆಹ್ವಾನ

ಪುತ್ತೂರು; ಉಪ್ಪಿನಂಗಡಿ ರಸ್ತೆಯಿಂದ ಹಾರಾಡಿ ಮೂಲಕವಾಗಿ ಬನ್ನೂರು ಕಡೆಗೆ ಹೋಗುವ ರಸ್ತೆ ಬದಿಯಲ್ಲೇ ಮೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬಗಳನ್ನು ಅಳವಡಿಸಿ ರಸ್ತೆಯ ಇಕ್ಕೆಲಗಳಲ್ಲಿ ಹೊಂಡಗಳನ್ನು ತೆಗೆದಿಟ್ಟು ಅಪಾಯದ ಸಮಸ್ಯೆ ಸೃಷ್ಠಿಸಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

ಮೆಸ್ಕಾಂ ಇಲಾಖೆಯ ವತಿಯಿಂದ ಈ ಭಾಗದಲ್ಲಿ ಅಂಡರ್‍ಗ್ರೌಂಡ್ ಪಾಸಿಂಗ್ ವಿದ್ಯುತ್ ಸರಬರಾಜು ವ್ಯವಸ್ಥೆಯ ಮೂಲಕ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿ ನಡೆಯುತ್ತಿದ್ದು, ಬನ್ನೂರಿನ ಮೆಸ್ಕಾಂ ಬಳಿಯ ರಸ್ತೆಯ ಎರಡೂ ಕಡೆಗಳಲ್ಲಿ ಹೊಂಡಗಳನ್ನು ತೆಗೆದಿಡಲಾಗಿದ್ದು, ಬೃಹತ್ ಕೇಬಲ್‍ಗಳು ರಸ್ತೆ ಬದಿಯಲ್ಲೇ ಹರಡಿಕೊಂಡಿವೆ. ವಾಹನ ಚಾಲಕರಿಗೆ ಮತ್ತು ಜನತೆಗೆ ಅಪಾಯಕ್ಕೆ ಆಹ್ವಾನ ನೀಡುವ ಸನ್ನಿವೇಶ ನಿರ್ಮಾಣವಾಗಿದೆ.

ರಸ್ತೆ ಮಾರ್ಜಿನ್ ಬಿಟ್ಟು ಮೆಸ್ಕಾಂ ಆವರಣದೊಳಗೆ ಈ ವ್ಯವಸ್ಥೆ ಮಾಡಲು ಸ್ಥಳಾವಕಾಶವಿದ್ದರೂ, ಆವರಣ ಗೋಡೆಯ ಹೊರಗಡೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಕೇಬಲ್ ಅಳವಡಿಸಲು ರಸ್ತೆ ಭಾಗದಲ್ಲೇ ಹೊಂಡಗಳನ್ನು ತೆಗೆಯಲಾಗಿದೆ. ಅಧಿಕಾರಿಗಳು ಸೃಷ್ಠಿಸಿದ ಈ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಭಯದ ವಾತಾವರಣದಲ್ಲಿ ಹಾದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುವುದು ಸಾರ್ವಜನಿಕರ ಆರೋಪ.

ಪುತ್ತೂರು ನಗರದಲ್ಲಿ 4 ಕಿಮೀಯಷ್ಟು ಅಂಡರ್ ಪಾಸಿಂಗ್ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಹೆಚ್ಚಿನ ಕಡೆಗಳಲ್ಲಿ ಕೇಬಲ್ ಅಳವಡಿಸಿ ಹೊಂಡಗಳನ್ನು ಮುಚ್ಚಲಾಗಿದೆ. ಕೇಬಲ್‍ಗಳನ್ನು ಜೋಡಿಸಬೇಕಾದ ಜಂಕ್ಷನ್‍ಗಳಲ್ಲಿ ಮಾತ್ರ ಬಾಕಿ ಇದೆ. ಬನ್ನೂರಿನ ರಸ್ತೆ ಬದಿಯಲ್ಲಿ ತೆಗೆದ ಹೊಂಡಗಳಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗಿರುವುದು ಇಲಾಖೆಯ ಗಮನಕ್ಕೆ ಬಂದಿಲ್ಲ. ನಮ್ಮ ಗಮನಕ್ಕೆ ತಂದರೆ ಹೊಂಡಗಳನ್ನು ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಮೆಸ್ಕಾಂ ಅಧಿಕಾರಿ ರಾಮಚಂದ್ರ ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *