Header Ads
Breaking News

ಪೆರ್ನೆಯ ಬಿಳಿಯೂರು ಗ್ರಾಮದಲ್ಲೊಂದು ಅಚ್ಚರಿಯ ಬೆಳವಣಿಗೆ!

ಆ ಊರಿನ ಜನರಲ್ಲಿ ಇತ್ತೀಚಿನ ವರ್ಷಗಳಲ್ಲಿ ನೆಮ್ಮದಿ ಬದುಕೆಂಬುದೇ ನಷ್ಟವಾಗಿ ಹೋಗಿತ್ತು. ಅಲ್ಲಲ್ಲಿ ಅಪಮೃತ್ಯುಗಳು, ಅತ್ಯಂತ ನಂಬಿಕೆಯ ನಾಗಗಳ ಸಾವುಗಳು ಅಲ್ಲಿನ ಜನರನ್ನು ನಿದ್ದೆಗೆಡಿಸಿತ್ತು. ನಾಗಗಳ ಸಾವನ್ನು ಬೆನ್ನತ್ತಿ ಹೋದ ಆ ಊರಿನ ಜನರಿಗೆ ವಿಸ್ಮಯವೇ ಕಾದಿತ್ತು. ಊರಿನಲ್ಲಿ ನಡೆಯುತ್ತಿರುವ ಇಂಥಹ ಗಂಡಾಂತರಗಳಿಗೆ 300 ವರ್ಷಗಳಿಂದ ಪಾಳು ಬಿದ್ದ ಆ ದೈವಸ್ಥಾನವೇ ಕಾರಣ ಎಂದು ತಿಳಿದಾಗಿ ಊರಿನ ಜನರಿಗೆ ಬರ ಸಿಡಿಲೇ ಬಡಿದಿತ್ತು. ಬನ್ನಿ ಹಾಗಾದರೆ ಯಾವುದಾ ಊರು, ಏನಿದು ದೈವದ ಸೇಡು ಅನ್ನೋದನ್ನು ಹೇಳ್ತೀವಿ ಈ ಸ್ಟೋರಿ ನೋಡಿ.

ತುಳುನಾಡಿನಲ್ಲಿ ದೇವರಿಗಿಂತಲೂ ದೈವಗಳಿಗೇ ಹೆಚ್ಚು ಮಹತ್ವ. ದೈವಗಳ ಜೊತೆಗೆ ಇಲ್ಲಿ ಮಣ್ಣು ನಾಗನಿಗೆ ಸೇರಿದ್ದು ಎನ್ನುವ ನಂಬಿಕೆಯೂ ಇದೆ. ಈ ಕಾರಣಕ್ಕಾಗಿಯೇ ಇಲ್ಲಿನ ಜನ ದೇವರಿಗಿಂತಲೂ ದೈವಗಳ ಬಗ್ಗೆ ಅಪಾರ ಭಕ್ತಿ, ನಂಬಿಕೆ ಹಾಗೂ ಭಯವನ್ನೂ ಹೊಂದಿದ್ದಾರೆ. ಇದೇ ಕಾರಣಕ್ಕಾಗಿಯೇ ಇಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ದೈವ ಸ್ಥಾನಗಳಿವೆ. ವರ್ಷಕ್ಕೊಮ್ಮೆ ಇಲ್ಲಿ ಈ ದೈವಗಳಿಗೆ ಕೋಲ, ತಂಬಿಲ ನಡೆಸೋದು ಇಲ್ಲಿನ ಜನರ ವಾಡಿಕೆಯೂ ಆಗಿದೆ. ನಂಬಿದವರಿಗೆ ಇಂಬು ಕೊಡುವೆ ಎನ್ನುವ ಇಲ್ಲಿನ ದೈವಗಳ ನುಡಿಯನ್ನು ನಂಬಿಕೊಂಡಿರುವ ಇಲ್ಲಿನ ಜನ ಚಾಚೂ ತಪ್ಪದೇ ತಮ್ಮ ಕುಟುಂಬ ದೈವಗಳ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ತುಳುನಾಡಿನಲ್ಲಿ 400 ಕ್ಕೂ ಮಿಕ್ಕಿದ ದೈವಗಳ ಆರಾಧನೆ ನಡೆಯುತ್ತಿರುವುದೇ ಇಲ್ಲಿನ ಜನರ ದೈವಗಳ ಮೇಲಿನ ಭಯ-ಭಕ್ತಿಗೆ ನಿದರ್ಶನವೂ ಆಗಿದೆ. ಇಂಥ ಭಯ-ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಗಳನ್ನು ಕಾರಣಾಂತರಗಳಿಂದ ಮರೆತು ಬಿಟ್ಟ ಆ ಊರಿನ ಜನರ ಕಥೆಯೇ ಇದು.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾದ ಜನರ ಅಪಮೃತ್ಯುಗಳು, ತುಳುನಾಡಿನ ನಂಬಿಕೆಯ ಮೂಲಧಾರವಾದ ನಾಗಗಳ ಸಾವು ಇಲ್ಲಿನ ಜನರನ್ನು ವಿಚಲಿತರನ್ನಾಗಿ ಮಾಡಿತ್ತು. ಪೆರ್ನೆಯಲ್ಲಿ 2012 ರಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನಡೆದ ದುರ್ಘಟನೆಯಲ್ಲಿ ಈ ಗ್ರಾಮಕ್ಕೆ ಸೇರಿದ 11 ಜನ ಸಾವನ್ನಪ್ಪಿದ್ದರು. ಅಲ್ಲದೆ ಬಾವಿಗೆ ಬಿದ್ದು ಸಾವು, ಆತ್ಮಹತ್ಯೆ, ಅಫಘಾತದಂತಹ ಹಲವು ಘಟನೆಗಳು ಇಲ್ಲಿ ನಿರಂತರವಾಗಿ ನಡೆಯಲಾರಂಭಿಸಿತ್ತು. ಈ ನಡುವೆ ಕಳೆದ ಆರು ತಿಂಗಳ ಒಳಗೆ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ 14 ನಾಗರ ಹಾವುಗಳು ಆಕಸ್ಮಿಕವಾಗಿ ಸಾವಿಗೀಡಾಗಿರುವುದು ಇಲ್ಲಿನ ಜನರ ನಿದ್ದೆಗೆಡಿಸಿತ್ತು. ತುಳುನಾಡಿನ ಭೂಮಿಯ ಒಡೆಯನಂತೆ ಆರಾಧಿಸಲ್ಪಡುತ್ತಿರುವ ನಾಗಗಳ ಸಾವಿನಿಂದ ಊರಿಗೆ ಗಂಡಾಂತರ ಬರಲಿದೆ ಎನ್ನುವುದನ್ನು ಮನಗಂಡ ಈ ಊರಿನ ಕೆಲವು ಮಂದಿ ಸೇರಿ ನಾಗಗಳ ಸಾವಿನ ಕಾರಣವನ್ನು ಹುಡುಕಿಕೊಂಡು ಹೊರಟರು.ನಾಗ, ದೈವ, ದೇವರುಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಅತ್ಯಂತ ನಿಖರವಾಗಿ ಹೇಳಬಲ್ಲ ಅಷ್ಟಮಂಗಲ ಪ್ರಶ್ನೆಯನ್ನು ಕೇಳಿ ನಾಗಗಳ ಸಾವಿನ ರಹಸ್ಯ ತಿಳಿಯಲು ಹೊರಟ ಈ ಊರಿನ ಜನರಿಗೆ ಅಚ್ಚರಿಯ ಹಾಗೂ ವಿಸ್ಮಯಕಾರಿಯಾಗ ಕೆಲವು ಅಂಶಗಳು ಬೆಳಕಿಗೆ ಬಂದಿದೆ. ಅಷ್ಟಮಂಗಲ ಪ್ರಶ್ನೆಗಾಗಿ ಖ್ಯಾತ ಜೋತಿಷ್ಯಿಗಳಾದ ಕೆ.ವಿ.ಗಣೇಶ್ ಭಟ್ ಮುಳಿಯ ಅವರನ್ನು ಸಂಪರ್ಕಿಸಿ ಪ್ರಶ್ನೆಗೆ ಗ್ರಾಮಸ್ಥರು ದಿನವನ್ನೂ ನಿಗದಿಪಡಿಸುತ್ತಾರೆ. ಗ್ರಾಮದಲ್ಲಿ ಅದ್ದೂರಿಯಾಗಿ ಉತ್ಸವಾದಿಗಳು ನಡೆಯುತ್ತಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ. ಇದಕ್ಕೆ ಸಂಬಂಧಪಟ್ಟ ಭಂಡಾರದ ಮನೆಯೂ ನೆಲಸಮವಾಗಿದೆ. ಆ ಮನೆಯಲ್ಲಿದ್ದ ದೈವದ ಮೂರ್ತಿಘಳೂ ಕೂಡಾ ಮಣ್ಣಿನಡಿಗೆ ಸೇರಿವೆ. ಈ ದೈವಸ್ಥಾನದ ಪುನರುತ್ಥಾನವೇ , ಗ್ರಾಮದ ಪುನರುತ್ಥಾನಕ್ಕೆ ಕಾರಣವಾಗಬಹುದು ಎನ್ನುವ ವಿಚಾರವನ್ನೂ ಅಷ್ಟಮಂಗಲ ಪ್ರಶ್ನೆಯ ಮೂಲಕ ಗ್ರಾಮಸ್ಥರು ಕಂಡುಕೊಂಡಿದ್ದರು. ಭಂಡಾರದ ಮನೆಯಲ್ಲಿ ಸಿಕ್ಕಿದ ದೈವಗಳು ಪೆರ್ನೆ ಹಾಗೂ ಬಿಳಿಯೂರು ಗ್ರಾಮಕ್ಕೆ ಸಂಬಂಧಪಟ್ಟಿದ್ದು ಎನ್ನುವುದು ಇದೀಗ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ. ಇದೀಗ ಈ ದೈವಗಳ ಆರಾಧನೆಗೆ ಈ ಊರಿನ ಜನ ನಿರ್ಧರಿಸಿದ್ದಾರೆ. ತನ್ನನ್ನು ಮರೆತ ಜನರಿಗೆ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಿದ ದೈವದ ಸೇಡು ಇದೀಗ ಆ ಊರಿನ ಜನರಲ್ಲಿ ದೈವ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

Related posts

Leave a Reply

Your email address will not be published. Required fields are marked *