Header Ads
Header Ads
Breaking News

ಫಾಸ್ಟ್ ಫುಡ್ ಅಂಗಡಿಯಲ್ಲಿ ದಾಂಧಲೆ: ಮಾಲೀಕನಿಗೆ ಮಾರಣಾಂತಿಕ ಹಲ್ಲೆ

ಉಳ್ಳಾಲ: ಫಾಸ್ಟ್ ಫುಡ್ ಮಾಲೀಕನಿಗೆ ರೌಡಿಶೀಟರ್ ಓರ್ವ ಬಿಸಿ ಎಣ್ಣೆ ಎರಚಿ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಉಳ್ಳಾಲ ದ ಪ್ಯಾರಿಸ್ ಹೊಟೇಲಿನ ಎದುರುಗಡೆ ನಿನ್ನೆ ತಡರಾತ್ರಿ ಸಂಭವಿಸಿದೆ.


ಉಳ್ಳಾಲ ನಿವಾಸಿ ಗಫೂರ್ (30) ದಾಳಿಗೆ ಒಳಗಾದ ಫಾಸ್ಟ್ ಫುಡ್ ಅಂಗಡಿ ಮಾಲೀಕರು. ಇವರ ಮೇಲೆ ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಆಗಿರುವ ನಮಿತ್ ದಾಳಿ ನಡೆಸಿದ್ದಾನೆ. ವಾರದ ಹಿಂದೆ ಅಂಗಡಿಯಲ್ಲಿ ತಿಂದು ಹಣ ಬಾಕಿಯಿರಿಸಿದ್ದ ನಮಿತ್‌ನನ್ನು ಗಫೂರ್ ಎರಡು ದಿನಗಳ ಹಿಂದೆ ಹಣ ಕೇಳಿದ್ದರು. ಈ ವೇಳೆ ನಮಿತ್ ಹಣ ಕೊಡುವುದಿಲ್ಲ ಎಂದು ಬೆದರಿಸಿ ಜೀವಬೆದರಿಕೆಯನ್ನು ಒಡ್ಡಿ ತೆರಳಿದ್ದ. ಇದರಿಂದ ಗಾಬರಿಗೊಂಡ ಗಫೂರ್ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಹಿಡಿಯುವ ಪ್ರಯತ್ನ ಮಾಡಿರಲಿಲ್ಲ. ಶನಿವಾರ ಮತ್ತೊಮ್ಮೆ ಅಂಗಡಿಯತ್ತ ಬಂದ ನಮಿತ್ ಗಫೂರ್ ಅವರಿಗೆ ಏಕಾಏಕಿ ಹಲ್ಲೆ ನಡೆಸಿದ್ದು, ಬಳಿಕ ಕಬಾಬ್ ಕಾಯಿಸಿಟ್ಟಿದ್ದ ಬಿಸಿ ಎಣ್ಣೆಯನ್ನೇ ಗಫೂರ್ ಮೇಲೆ ಎರಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಆಗ್ರಹಿಸಿ ಮತ್ತು ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಎದುರು ಜಮಾಯಿಸಿದರು. ಎಸಿಪಿ ರಾಮರಾವ್ ಬಂಧಿಸುವ ಭರವಸೆ ನೀಡಿದ ಬಳಿಕ ಸ್ಥಳದಿಂದ ತೆರಳಿದ್ದಾರೆ. ಗಂಭೀರ ಗಾಯವಾಗಿರುವ ಗಫೂರ್ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.