Header Ads
Header Ads
Header Ads
Breaking News

ಬಂಟ್ವಾಳ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

ಬಂಟ್ವಾಳ: ತಾಲೂಕಿನ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಬೇಸಿಗೆಯಲ್ಲೂ ನಿರಂತರ ನೀರು ಪೂರೈಸುವ ಉದ್ದೇಶವನ್ನಿಟ್ಟುಕೊಂಡು ಜೀವನದಿ ನೇತ್ರಾವತಿಯ ನೀರಿನ ಮೂಲವನ್ನು ಆಶ್ರಯವಾಗಿಟ್ಟುಕೊಂಡು ಅನುಷ್ಠಾನಗೊಳ್ಳುತ್ತಿರುವ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ. ಯೋಜನೆಯ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಈ ತಿಂಗಳ ಅಂತ್ಯಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸರಪಾಡಿ ಗ್ರಾ.ಪಂಚಾಯಿತಿ ವ್ಯಾಪ್ತಿಯ ತೆಕ್ಕಿಕಾಡು ಎಂಬಲ್ಲಿ ಅಂದಾಜು 34.42 ಕೋ. ರೂ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಇದರಿಂದ ಸರಪಾಡಿ ಹಾಗೂ ಅದರ ಸುತ್ತಮುತ್ತಲಿನ 97 ಜನವಸತಿ ಪ್ರದೇಶದ ಜನರಿಗೆ ಶುದ್ಧನೀರು ಸರಬರಾಜಗಾಲಿದೆ. ಈ ಭಾಗದ 48,100 ಜನರಿಗೆ ಈ ಯೋಜನೆ ವರದಾನವಾಗಲಿದೆ. ಸರಪಾಡಿ ಗ್ರಾ.ಪಂ. ನೇತ್ರಾವತಿ ನದಿಯ ತಟದಲ್ಲೇ ಇದ್ದರೂ ಕೂಡ ಬೇಸಿಗೆಯಲ್ಲಿ ಪ್ರತೀ ವರ್ಷ ನೀರಿನ ಸಮಸ್ಯೆ ಕಾಡುತ್ತದೆ. ಕಳೆದ ವರ್ಷವಂತೂ ಈ ಭಾಗದ ಜನರು ಕುಡಿಯುವ ನೀರಿಗಾಗಿ ಸಾಕಷ್ಟು ಪರದಾಡಿದ್ದರು. ಆದರೆ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಬಳಿಕ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸರಪಾಡಿ ಗ್ರಾಮದ ತೆಕ್ಕಿಕಾಡುವಿನಲ್ಲಿ ಶುದ್ಧೀಕರಣ ಘಟಕವಿದ್ದು, ಏರಿಯೇಟರ್, ಫ್ಲಾಶ್ ಮಿಕ್ಷರ್, ಕ್ಲಾರಿಫ್ಲೂಕೊಲೇಟರ್, ರ್‍ಯಾಪಿಡ್ ಸ್ಯಾಂಡ್ ಫಿಲ್ಟರ್(ಲ್ಯಾಬ್, ಕ್ಲೊರಿನ್,ಆಲಂ ಡೋಸಿಂಗ್, ಸ್ಟೊರೇಜ್ ರೂಮ್), ಫ್ಯೂರ್ ವಾಟರ್ ಸಂಪ್, ಪಂಪ್ ಹೌಸ್ ಮತ್ತು ವಾಶ್ ವಾಟರ್ ಟ್ಯಾಂಕ್‌ನ್ನು ಒಳಗೊಂಡಿದೆ. ಪೆರ್ಲ-ಬೀಯಪಾದೆಯಲ್ಲಿ ನದಿಯಲ್ಲಿ ಇಂಟಕ್‌ವೆಲ್ ಹಾಗೂ ಅದರ ಪಕ್ಕ ಜ್ಯಾಕ್ ವೆಲ್ ನಿರ್ಮಿಸಲಾಗಿದ್ದು, ನೇತ್ರಾವತಿಯಿಂದ ಹೀರಲ್ಪಟ್ಟ ನೀರು ಪೈಪ್ ಲೈನ್ ಮೂಲಕ ಶುದ್ಧೀಕರಣ ಘಟಕಕ್ಕೆ ಸಾಗಿ ವಿವಿ‘ಧ ಹಂತಗಳಲ್ಲಿ ಶುದ್ಧಗೊಂಡು ಮುಖ್ಯ ಓವರ್ ಹೆಡ್ ಟ್ಯಾಂಕ್ ಮೂಲಕ ಜನರಿಗೆ ಪೂರೈಕೆಯಾಗಲಿದೆ.
ಯೋಜನೆ ಅನುಷ್ಠಾನದಿಂದ ಕೊಳವೆ ಬಾವಿಯ ಬಳಕೆ ಕಡಿಮೆಯಾಗಲಿದ್ದು, ಅಂತರ್ಜಲವೂ ವೃದ್ಧಿಯಾಗುತ್ತದೆ. ಆದರೆ ಕುಡಿಯುವ ನೀರನ್ನು ಕೃಷಿಕಾರ್ಯ ಸಹಿತ ಇತರ ಕಾರ್ಯಗಳಿಗೆ ಬಳಸದೇ ಯೋಜನೆಯ ಯಶಸ್ವಿಗೆ ಸಮುದಾಯದ ಸಹಭಾಗಿತ್ವ ಅಗತ್ಯವಿದೆ. ಸರಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿಕರೇ ಹೆಚ್ಚಿದ್ದು ಕೃಷಿ ಚಟುವಟಿಕೆಗಳಿಗೆ ಕೊಳವೆ ಬಾವಿಯನ್ನು ಅವಲಂಬಿಸಿದ್ದಾರೆ. ಕುಡಿಯುವ ನೀರಿಗೆ ಖಾಸಗಿ ಬಾವಿಗಳಿದ್ದರೂ ಹೆಚ್ಚಿನ ಗ್ರಾಮಸ್ಥರು ಸರಕಾರಿ ಸಾರ್ವಜನಿಕ ಕುಡಿಯುವ ನೀರನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಕೊರತೆಯಾಗುವುದರಿಂದ ನೀರಿನ ಸಮಸ್ಯೆ ಉಂಟಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಜನರಿಗೆ ನಿರಂತರವಾಗಿ ಕುಡಿಯುವ ನೀರನ್ನು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಐದು ಯೋಜನೆಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದೆ. ಮಾಜಿ ಅರಣ್ಯ ಸಚಿವ ಬಂಟ್ವಾಳದವರೇ ಆದ ಬಿ.ರಮನಾಥ ರೈಯವರ ಕನಸಿನ ಯೋಜನೆಯಾಗಿದ್ದು, ವಿಶೇಷ ಮುತುವರ್ಜೀಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇಲ್ಲಿಗೆ ಮಂಜೂರಾಗಿದ್ದು ಅದೂ ಯಶಸ್ವಿಯಾಗಿ ಅನುಷ್ಠಾನಗೊಳ್ಳುವಲ್ಲಿ ಅವರ ಪರಿಶ್ರಮ ಹಿರಿದಾದುದು ಹಾಗೂ ಉಲ್ಲೇಖನೀಯ. ಈಗಾಗಲೇ ಸಂಗಬೆಟ್ಟು ಹಾಗೂ ಕರೋಪಾಡಿ ಯೋಜನೆಗಳು ಅನುಷ್ಠಾನಗೊಂಡಿದ್ದು ಸರಪಾಡಿ ಯೋಜನೆ ಸಿದ್ದಗೊಳ್ಳುತ್ತಿದೆ. ಮಾಜಿ ಸಚಿವರ ಹಾದಿಯಲ್ಲಿಯೇ ಈ ಯೋಜನೆ ಅನುಷ್ಠಾನಗೊಳ್ಳಲು ಶಾಸಕ ರಾಜೇಶ್ ನಾಕ್ ಅವರು ಪರಿಶ್ರಮಿಸುತ್ತಿದ್ದು ಹೆಚ್ಚುವರಿ ಅನುದಾನ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

Related posts

Leave a Reply

Your email address will not be published. Required fields are marked *