
ವಿಟ್ಲ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಣಿ ಕಳ್ಳತನಗಳನ್ನು ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ವಿಶೇಷ ತಂಡ ಯಶಸ್ವಿಯಾಗಿದೆ.
ಎಸ್ ಐ ಅವಿನಾಶ ನೇತೃತ್ವದ ತಂಡ ಬಂಟ್ವಾಳ ಸುರಭಿ ಬಾರ್ ಕಳ್ಳತನದ ಆರೋಪಿಗಳಾದ ಮಂಗಳೂರು ಅರ್ಕುಳ ಗ್ರಾಮ ದ ವಲಚಿಳು ಪದವು ನಿವಾಸಿ ಅಮ್ಮೀ ಯಾನೆ ಅಮರುದ್ದಿನ್ ,ಮಂಗಳೂರು ಕನ್ನೋರು ಗ್ರಾಮದಕುಳ್ನಾಡ್ ಶಾಲೆಯ ಹತ್ತಿರ ನಿವಾಸಿ ಮಹಮದ್ ಯೂನಸ್ಮತ್ತು ಮಂಗಳೂರು ಅಡ್ಯಾರ್ ಗ್ರಾಮ ಕಣ್ಣೂರು ಸಾಲಾಪಿ ಮಸೀದಿ ಹತ್ತಿರ ನಿವಾಸಿಹಫೀಸ್ ಯಾನೆ ಅಪ್ಪಿ ಇವರುಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಬಂಧಿತರ ಕೈಯಿಂದ ಒಟ್ಟು 480000 ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಅವೆಂಜಾರ್ ಬೈಕ್ ,ಒಂದು ಮೊಬೈಲ್, ಒಂದು ಡಿ.ವಿ.ಆರ್.ಸೆಟ್ ಬಾಕ್ಸ್ ಮತ್ತು ಅಂದಾಜು 35000 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ
ವಿಟ್ಲ ಎಸ್ ಐ ವಿನೋದ್ ರೆಡ್ಡಿ ನೇತೃತ್ವದ ತಂಡದಿಂದ ಸಜಿಪಮೂಡ ಗ್ರಾಮದ ಪೆರ್ವಾ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ (27), ಮಂಗಳೂರು ಬೆಂಗ್ರೇ ನಿವಾಸಿ ಮಹಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ ಯಾನೆ ಸರೂ ಯಾನೆ ಸಫ್ವಾನ್ (19) ಬಂಧಿತ ಆರೋಪಿಗಳಾಗಿದ್ದಾರೆ. ಇವರುಗಳಿಂದ 14 ಜೀವಂತ ಗುಂಡು, 2 ಬೈಕ್, 3 ಡಿವಿಆರ್, ಮಾನಿಟರ್, ಬ್ರಾಂಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್ ಪತ್ತೆ ಹಚ್ಚುವ ಮೂಲಕ ಒಂಬತ್ತು ಕಳವು ಪ್ರಕರಣಗಳನ್ನು ಬೇಧಿಸಿದ್ದಾರೆ.
ಎಲ್ಲ ಆರೋಪಿಗಳಲ್ಲಿ ಮಂಗಳೂರು ಗ್ರಾಮಾಂತರ, ಬಂಟ್ವಾಳ ಗ್ರಾಮಾಂತರ ಭಾಗದ ತಲಾ ಒಂದು ಡಿವಿಆರ್, ವಿಟ್ಲದ ಜೀವಂತ ಗುಂಡು, ಡಿವಿಆರ್, ಮಾನಿಟರ್, ಬ್ರಾಂಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್, ಮಂಗಳೂರು ಗ್ರಾಮಾಂತರ, ಮಂಜೇಶ್ವರದ ತಲಾ ಒಂದು ಬೈಕ್ ತನಿಖೆಯಿಂದ ಪತ್ತೆಯಾಗಿದೆ.
ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ಟೌನ್ ಎಸ್ ಐ ಅವಿನಾಶ್, ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ, ಸಿಬ್ಬಂದಿಗಳಾದ ಜಯಕುಮಾರ, ಪ್ರಸನ್ನ, ಜಯರಾಮ, ಲೋಕೇಶ, ಪ್ರತಾಪ, ವಿನಾಯಕ, ಹೇಮರಾಜ, ಪ್ರವೀಣ್, ಕುಮಾರ್, ವಿವೇಕ್, ಗೋಣಿ ಬಸಪ್ಪ, ಕಂಪ್ಯೂಟರ್ ವಿಭಾಗದ ದಿವಾಕರ, ಸಂಪತ್ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.