
ಬಂದರು ಸಮಸ್ಯೆ ನಿವಾರಣೆಗೆ ಶಾಶ್ವತವಾಗಿ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಸಂಘಟನೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ, ವ್ಯವಸ್ಥಿತ ಬಂದರು ನಿರ್ಮಾಣದ ಬಗ್ಗೆ ಗಮನ ಹರಿಸುತ್ತೇನೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಮಂಗಳೂರು ಬಂದರಿನಲ್ಲಿರುವ ಮತ್ಸ್ಯಗಂಧಿ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಎಫ್ಎಫ್ಪಿಒ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂದರಿನ ಸಣ್ಣ – ಸಣ್ಣ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು ತುರ್ತಾಗಿ ಗಮನ ಹರಿಸಲಾಗುತ್ತದೆ ಎಂದರು.
ಇದೇ ವೇಳೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ, ಮೀನುಗಾರಿಕೆ ಸಲಕರಣೆಗಳ ಕಿಟ್ ಸವಲತ್ತುಗಳ ವಿತರಣೆ, ಎಫ್ಆರ್ ಪಿ ದೋಣಿ, ಬಲೆ ಮತ್ತು ಇಂಜಿನ್ ವಿತರಣೆ, ಮೀನುಗಾರಿಕೆ ಸುರಕ್ಷತಾ ಸಾಧನಗಳ ಖರೀದಿಗೆ ಸಹಾಯಧನ, ಸೀಗಡಿಕೊಳ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಮತ್ತಿತರ ಫಲಾನುಭವಿಗಳಿಗೆ ಸಚಿವರು ಸೌಲಭ್ಯ ವಿತರಣೆ ಮಾಡಿದರು. ಕಾರ್ಯಕ್ರಮಕ್ಕೂ ಮೊದಲು ಬಂದರಿಗೆ ಭೇಟಿ ನೀಡಿದ ಎಸ್.ಅಂಗಾರ, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.