Header Ads
Header Ads
Breaking News

ಬೈಂದೂರು : ಜನರ ನಿದ್ದೆಗೆಡಿಸಿರುವ ಅಪಾಯಕಾರಿ ಸೇತುವೆ

ಈ ಊರಲ್ಲಿ ಎಲ್ಲವೂ ಇದೆ. ಆದರೇ ಯಾವುದೂ ವ್ಯವಸ್ಥಿತವಾಗಿಲ್ಲ. ಊರ ಹೆಸರು ಹೊಸಬಾಳು..ಆದರೆ ಇರೋದು ಮಾತ್ರ ಹಳೇ ಸಮಸ್ಯೆಗಳ ಗೋಳು..! ಸದ್ಯ ಇಲ್ಲಿನ ಜನರ ನಿದ್ದೆಗೆಡಿಸಿರೋದು ಮಾತ್ರ ಈ ಊರಲ್ಲಿರುವ ಅಪಾಯಕಾರಿ ಸೇತುವೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ.

ಬೈಂದೂರು ತಾಲೂಕಿನಿಂದ 32 ಕಿಮೀ ಸಾಗಿದರೇ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಸಿಗುವ ಗ್ರಾಮವೇ ಯಡಮೊಗೆ. ತೀರಾ ಕುಗ್ರಾಮ ಒಂದೆಡೆಯಾದರೇ ಇನ್ನೊಂದೆಡೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಜಂಬೆಹಾಡಿಯ ನಾಗ-ಬ್ರಹ್ಮ-ಯಕ್ಷಿ ದೈವಸ್ಥಾನದ ಸಮೀಪ ಕುಬ್ಜಾ ನದಿಗೆ ಸುಮಾರು 500 ಮೀಟರ್ ಉದ್ದದ ಹೊಸಬಾಳು ಸೇತುವೆಯನ್ನು ಕಳೆದ 50 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣವಾಗಿದ್ದೇನೋ ನಿಜ. ಆದರೇ ಆ ಬಳಿಕ ಸಂಬಂದಪಟ್ಟವರಿಂದ ಇದರ ನಿರ್ವಹಣಾ ಕಾರ್ಯ ನಡೆದಿಲ್ಲ. ಸದ್ಯ ಸೇತುವೆಯ ಪಿಲ್ಲರ್‍ಗೆ ಅಳವಡಿಸಿದ ಶಿಲೆಗಲ್ಲುಗಳು ಕಿತ್ತು ಹೋಗಿವೆ. ಸ್ಲ್ಯಾಬ್ ಕೂಡ ಶಿಥಿಲಗೊಂಡಿದೆ. ಸೇತುವೆ ಕೆಳಭಾಗವಂತೂ ಯಾವ ಆದಾರದಲ್ಲಿ ನಿಂತಿದೆಯೋ ಭವಗಂತನಿಗೆ ಗೊತ್ತು. ಸ್ಲ್ಯಾಬ್ ಮೇಲ್ಭಾಗದಲ್ಲಿ ದೊಡ್ಡದೊಂದು ಹೊಂಡ ಸೃಷ್ಟಿಯಾಗಿದ್ದು ಕೊಂಚ ಯಾಮಾರಿದ್ರೂ ತುಂಬಿ ಹರಿಯುವ ಕುಬ್ಜೆಯ ಪಾಲಾಗೋದು ಗ್ಯಾರೆಂಟಿ. ಈ ರಸ್ತೆಯಲ್ಲಿಯೇ ಇಲ್ಲಿನ ಜನರ ನಿತ್ಯ ಪಯಣ. ಕಳೆದ ಮೂರು ವರ್ಷದಿಂದ ಸೇತುವೆ ಬೀಳುವ ಸ್ಥಿತಿಗೆ ತಲುಪಿದ್ದು ಮೊದಮೊದಲು ಅದರಲ್ಲಿಯೇ ನಿತ್ಯ ನೂರಾರು ವಾಹನಗಳು ಸಂಚರಿಸಬೇಕಾದ ಅನಿವಾರ್ಯತೆಯಿತ್ತು. ಯಾವತ್ತು ಸೇತುವೆ ಪ್ರವೇಶದಲ್ಲಿ ದೊಡ್ಡ ಹೊಂಡ ಬಿತ್ತೋ ಅಲ್ಲೇ ಪಕ್ಕದಲ್ಲಿ ಮೂರು ವರ್ಷದಿಂದ ಗ್ರಾಮಸ್ಥರೇ ಮೂರ್ನಾಲ್ಕು ಲಕ್ಷ ಖರ್ಚು ಮಾಡಿ ಐದು ಪೈಪ್ ಅಳವಡಿಸಿ ಕೃತಕ ರಸ್ತೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮಳೆಗೆ ಆ ರಸ್ತೆಯೂ ಕೊಚ್ಚಿ ಹೋಗಿದ್ದರಿಂದ ಜನರ ಪಾಡು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ.

ಸ್ವಾಂತಂತ್ರ್ಯ ಬಂದು ಹಲವು ದಶಕ ಕಳೆದ್ರು ಕೂಡ ಯಡಮೊಗೆ ಗ್ರಾಮ ಇನ್ನೂ ಯಾವ ಅಭಿವೃದ್ಧಿಯನ್ನೂ ಕಂಡಿಲ್ಲ. ಹೊಸಂಗಡಿಯಿಂದ ಯಡಮೊಗೆಗೆ ಸಂಪರ್ಕ ಕಲ್ಪಿಸುವ ರಸ್ತೆ ಈವರೆಗೂ ತೇಪೆ ಭಾಗ್ಯವನ್ನೇ ಕಂಡಿಲ್ಲ. ಯಾವುದೋ ವರ್ಷದಲ್ಲಿ ನಡೆದ ಕಾಮಗಾರಿ ಬಳಿಕ ಅದನ್ನು ನಿರ್ವಹಣೆ ಮಾಡದ ಕಾರಣ ಸೇತುವೆ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ. ಇನ್ನು ರಸ್ತೆಗಳು ಹೊಂಡ-ಗುಂಡಿಯಿಂದ ಕೂಡಿ ಮಳೆಗಾದಲ್ಲಿ ಕೆಸರು ಮಡ್ಡಿ ಬೇಸಿಗೆಯಲ್ಲಿ ಧೂಳುಮಯವಾಗಿರುತ್ತೆ. ಶಿಥಿಲಗೊಂಡ ಸೇತುವೆ ಬದಲು ನಿರ್ಮಿಸಿದ ಮೋರಿ ಕೊಚ್ಚಿ ಹೋಗಿದ್ದು, ನಿತ್ಯ ಪ್ರಯಾಣಿಕರು, ಕೂಲಿ ಕಾರ್ಮಿಕರು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತಾಗಿದೆ. ಶಾಲಾ ಮಕ್ಕಳ ಸ್ಥಿತಿಯಂತೂ ದೇವರಿಗೆ ಪ್ರೀತಿ. ಮಕ್ಕಳು ನಡೆದು ಸುಸ್ತಾಗಿ ಮನೆಗೆ ಬರುತ್ತಿದ್ದು, ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರಂತೆ. ಊರಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ ಕಂಬಳಿ ಜೋಲಿಯೇ ಗತಿ. ರಸ್ತೆ ಹೇಗಿದೆ ಎಂದರೆ ಆಟೋರಿಕ್ಷ ಚಾಲಕರು ಬಾಡಿಗೆಗೆ ಬರಲು ಒಪೆÇ್ಪೀದಿಲ್ಲ. ಖಾಸಗಿ ಬಸ್ಸಿನವರು ಬೇಸಿಗೆಯಲ್ಲಿ ಮಾತ್ರ ಹೊಸಬಾಳಿಗೆ ಬರುತ್ತಿದ್ದು, ಮಳೆಗಾದಲ್ಲಿ ಕಲೆಕ್ಷನ್ ಇಲ್ಲ ಅಂತ ಬರೋದಿಲ್ಲ. ರಾಜ್ಯ ಸಾರಿಗೆ ಬಸ್ಸು ಬರುತ್ತಿದ್ದು, ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿರುವುದರಿಂದ ಬಸ್ ಹತ್ತುವುದೇ ಕಷ್ಟ. ಕುಂದಾಪುರದಿಂದ ಕಮಲಶಿಲೆ, ಯಡಮೊಗೆ, ಹೊಸಬಾಳು, ಹೊಸಂಗಡಿ, ಸಿದ್ದಾಪುರ ಮೂಲಕ ಪೇಟೆ ಸೇರಲು ಸಾಧ್ಯವಾಗುತ್ತಿತ್ತು. ಇರುವ ಮೋರಿ ಕೂಡಾ ಕುಬ್ಜಾ ನದಿಯಲ್ಲಿ ಕೊಚ್ಚಿ ಹೋಗಿದ್ದರಿಂದ ನಾಲ್ಕು ಕೀಮೀ ಬದಲು 12 ಕೀಮೀ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಥಿಲಗೊಂಡ ಸೇತುವೆ ಬಗ್ಗೆ ಕಳೆದ ಮೂರು ವರ್ಷಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಶಾಸಕರ ಗಮನ ಸೆಳೆದರೂ ಜನರ ಬೇಡಿಕೆ ಮಾತ್ರ ಇದುವರೆಗೂ ಈಡೇರಿಲ್ಲ. ಒಟ್ಟಿನಲ್ಲಿ ಓಟು ಕೇಳಲು ಬಂದಾಗ ಹಲವು ಆಶ್ವಾಸನೆಗಳನ್ನು ಕೊಟ್ಟು ಜನರಿಂದ ಓಟು ಗಿಟ್ಟಿಸುವ ಜನಪ್ರತಿನಿಧಿಗಳು ಬಳಿಕ ಇತ್ತ ತಲೆಯನ್ನು ಹಾಕಲ್ಲ ಎಂಬ ಆರೋಪ ಕೇಳಿಬಂದಿದ್ದು ಇನ್ನಾದರೂ ಶಾಸಕರು ಹಾಗೂ ಸಂಬಂದಪಟ್ಟವರು ಇತ್ತ ಗಮನ ಹರಿಸುವರೇ ಕಾದು ನೋಡಬೇಕಿದೆ.

Related posts

Leave a Reply

Your email address will not be published. Required fields are marked *