Header Ads
Breaking News

ಬೈಂದೂರು ತಾ.ಪಂ. ಸಾಮಾನ್ಯ ಸಭೆ : ಕರ್ತವ್ಯಕ್ಕೆ ವೈದ್ಯರ ಗೈರು ಆರೋಪ

ಕುಂದಾಪುರ: ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ಶಸ್ತøಚಿಕಿತ್ಸಕ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿರುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಸ್ವತಃ ನಾನೇ ಆಸ್ಪತ್ರೆಗೆ ಹೋದಾಗಲೂ ವೈದ್ಯರು ಇರಲಿಲ್ಲ. ಈ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿದ್ದು, ತಕ್ಷಣವೇ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಜಗದೀಶ್ ದೇವಾಡಿಗ ಹೇಳಿದರು.

ಕುಂದಾಪುರ ತಾ.ಪಂ ಸಭಾಂಗಣದಲ್ಲಿ ನಡೆದ ಬೈಂದೂರು ತಾ.ಪಂ ನ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಗ್ಗೆ ಮಾತನಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಶಸ್ತøಚಿಕಿತ್ಸಕರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಸರ್ಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಬಾರದೆ ಬೇರೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪಗಳೂ ಇವೆ. ಈ ಬಗ್ಗೆ ಹಾಜರಾತಿ ಪುಸ್ತಕವನ್ನು ಪರಿಶೀಳನೆ ನಡೆಸಬೇಕು. ಅಲ್ಲದೇ ಎರಡು ತಿಂಗಳ ಸಿಸಿ ಟಿವಿ ಫೂಟೇಜ್ ಅನ್ನು ತೆಗೆಸಿ ಪರಿಶೀಲನೆ ನಡೆಸಿ ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಕೂಡಲೇ ಅವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಜಗದೀಶ್ ದೇವಾಡಿಗ ಮಾತನಾಡಿ, ಬೈಂದೂರು ತಾ.ಪಂ ಪ್ರತ್ಯೇಕವಾದರೂ ಮೊದಲ ಸಾಮಾನ್ಯ ಸಭೆ ಕುಂದಾಪುರದಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿ. ಇನ್ನೆರಡು ಮೂರು ತಿಂಗಳು ಮಾತ್ರ ನಮ್ಮ ಅವಧಿ. ಹೀಗಾಗಿ ಮುಂದಿನ ಸಾಮಾನ್ಯ ಸಭೆಯನ್ನು ಬೈಂದೂರಿನಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು. ಕಚೇರಿ ಹಾಗೂ ಸಭಾಭವನದ ಕೊರತೆ ಇರುವುದು ನಮ್ಮ ಗಮನದಲ್ಲಿದೆ. ಆದರೆ ನಿಮ್ಮದೇ ಪಕ್ಷ ಹಾಗೂ ಶಾಸಕರು ಅಧಿಕಾರದಲ್ಲಿರುವುದರಿಂದ ಈ ಬಗ್ಗೆ ಕ್ರಮ ವಹಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು.

ಈಗಾಗಲೇ ಪಟ್ಟಣ ಪಂಚಾಯಿತಿ ಕಟ್ಟದ ಕೋಣೆಯೊಳಗೆ ಬೈಂದೂರು ತಾ.ಪಂ ಕಾರ್ಯನಿರ್ವಹಿಸುತ್ತಿದ್ದು, ತಾ.ಪಂ ಕಾರ್ಯವನ್ನು ಸ್ಥಗಿತ ಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಅಥವಾ ಬಾಡಿಗೆ ಹಣ ನೀಡಿ ಮುಂದುವರಿಯುವಂತೆ ಸೂಚನೆ ನೀಡಿದ್ದಾರೆ. ಸರಕಾರಿ ಕಟ್ಟಡದಲ್ಲಿ ಬಾಡಿಗೆ ನೀಡಿ ನಮ್ಮ ಕಚೇರಿ ಕಾರ್ಯನಿರ್ವಹಿಸುವುದಾದರೇ ಖಾಸಗಿ ಕಟ್ಟಡದಲ್ಲಿಯೂ ಕಾರ್ಯ ನಿರ್ವಹಿಸಬಹುದು. ಈ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕಿರುವುದರಿಂದ ಈ ಬಗ್ಗೆ ಕೂಡಲೇ ಸರಕಾರದ ಗಮನ ಸೆಳೆಯಲಾಗುವುದು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಟರಾಜ್ ಶೆಟ್ಟಿ ಹೇಳಿದರು.

ಅಂಗನವಾಡಿ ಕಟ್ಟಡ ಹಾಗೂ ಜಾಗವನ್ನು ಸಮೀಪದ ಖಾಸಗಿ ವ್ಯಕ್ತಿಯೋರ್ವರಿಗೆ 94/ಸಿ ಅಡಿಯಲ್ಲಿ ಮಂಜೂರು ಮಾಡಲಾಗಿದೆ. ಸುಮಾರು 26 ವರ್ಷಗಳಿಂದ ಅಂಗನವಾಡಿ ಕಾರ್ಯಚರಿಸುತ್ತಿರುವ ಬಗ್ಗೆ ದಾಖಲೆ ಇದೆ. ಪ್ರಸ್ತುತ 40 ಮಕ್ಕಳು ಅಂಗನವಾಡಿ ಶಿಕ್ಷಣ ಪಡೆಯುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯ ನಡೆಗೆ ಅಂಗನವಾಡಿ ಖಾಸಗಿ ವ್ಯಕ್ತಿಯ ಪಾಲಾಗುತ್ತಿರುವುದು ದುರದೃಷ್ಟಕರ. ಇದರ ವಿರುದ್ದ ತಹಶೀಲ್ದಾರ್ ಅವರು ಸ್ಥಳಕ್ಕೆ ತೆರಳಿ ಪರೀಶಿಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪುಷ್ಪರಾಜ್ ಶೆಟ್ಟಿ ಸೂಚಿಸಿದರು.

ಈ ಸಂದರ್ಭ ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಬೈಂದೂರು ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಭಾರತಿ, ಕುಂದಾಪುರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *