Header Ads
Header Ads
Breaking News

ಬೈಂದೂರು : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಆ ಊರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿಲ್ಲ

 ಆ ಊರಲ್ಲಿ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಪಡೆಯಬೇಕು ಪಾಸ್! ಸ್ವಂತ ಮನೆಯಲ್ಲಿ ಕಾರ್ಯಕ್ರಮ ಮಾಡೋದಕ್ಕೂ ಒಪ್ಪಿಗೆ ಕಡ್ಡಾಯ. ಇನ್ನು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲೂ ಬೇಕು ಪರ್ಮಿಶನ್. ಹೊರಗೆ ಹೋದವರು ರಾತ್ರಿ ಎಂಟರ ಒಳಗೆ ಬಾರದಿದ್ದರೆ ರಸ್ತೆ ಬದಿ ಕೂತು ಬೆಳಗು ಮಾಡುವ ಸ್ಥಿತಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಆ ಊರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿಲ್ಲ. ದಿಗ್ಬಂಧನದಲ್ಲಿದ್ದಾರೆ ಆ ಊರಿನ ದಲಿತರು! ಅಷ್ಟಕ್ಕೂ ಆ ಊರು ಯಾವುದು, ಅಲ್ಲಿನ ದಲಿತರ ಸ್ಥಿತಿಯಾದರೂ ಏನು ಅಂತೀರಾ. ಈ ಸ್ಟೋರಿ ನೋಡಿ..

ಇದ್ಯಾವುದೋ ಪಾಳೆಗಾರನ ಕಪಿಮುಷ್ಠಿಗೆ ಸಿಲುಕಿ ನಲುಗುತ್ತಿರುವ ಊರು. ಅತ್ಯಂತ ಸುಸಂಸ್ಕೃತ, ವಿದ್ಯಾವಂತ, ಬುದ್ದಿವಂತ ನಾಗರಿಕರ ಉಡುಪಿ ಜಿಲ್ಲೆಯಲ್ಲಿ ಹೀಗೂ ಜನರನ್ನು ನೋಡಿಕೊಳ್ಳಲಾಗುತ್ತೆ ಎನ್ನುವುದು ಪ್ರಪಂಚವೇ ತಲೆ ತಗ್ಗಿಸುವಂತೆ ಮಾಡಿದೆ.

ಹೌದು ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮುದೂರು ರಾಮ್‌ಪುರ ಎಸ್ಟೇಟ್ ಪ್ರವೇಶ ಬಳಿ ವಾಸಿವಿರುವ ನಿವಾಸಿಗಳು ಭೂಮಾಲೀಕರ ದೌಜರ್ನ್ಯಕ್ಕೆ ಸಿಕ್ಕಿ ನಲುಗುತ್ತಿದ್ದಾರೆ. ಕಬ್ಬಿನ್‌ಕೋಣು, ನುಗ್ಗೆಗದ್ದೆ, ಕೇರಿ ಜನರು ಸ್ವಾಂತತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಮನೆಯಿಂದ ಹೋಗುವುದಕ್ಕೂ, ಹಿಂದಕ್ಕೆ ಬರುವುದಕ್ಕೂ ಪರವಾನಿಗೆ ಬೇಕು. ಭಾನುವಾರ, ರಜಾ ದಿನಗಳಲ್ಲಿ ಮನೆಯೇ ಕಾರಾಗೃಹ! ಅಂಗನವಾಡಿಗೆ ಹೋಗುವ ಪುಟಾಣಿಗಳಿಂದ ಹಿಡಿದು ಶಾಲಾ ಮಕ್ಕಳವರಗೆ ಹಿರಿಯ ನಾಗರಿಕರಿಂದ ಮೊದಲ್ಗೊಂಡು ಯುವ ಸಮುದಾಯದವರೆಗೂ ಈ ಸಮಸ್ಯೆ ಕಾಡುತ್ತಿದೆ. ವಿಶ್ವಕ್ಕೆ ಮಾದರಿ ಪ್ರಜಾಪ್ರಭುತ್ವ ಕೊಟ್ಟ ದೇಶದಲ್ಲಿ ಇನ್ನೂ ಒಡೆಯ, ಪಾಳೆಗಾರಿಕೆ ಪದ್ದತಿಯಂತಾ ಅನಿಷ್ಟ ಇದೆ ಎನ್ನೋದಕ್ಕೆ ಈ ಊರಿನ ನಿವಾಸಗಳೇ ಸಾಕ್ಷಿ.

ಮುದೂರು ರಾಮ್‌ಪುರ ಎಸ್ಟೇಟ್ ಹಿಂದೆ ಅಯ್ಯಂಗಾರ್ ಭೂಮಿ ಆಗಿದ್ದು, ಮರಗಳ ನಡುವೆ ಏಲಕ್ಕಿ ಬೆಳೆ ಬೆಳೆಯಲಾಗುತ್ತಿತ್ತು. ಈ ಭೂಮಿ ಕುಟ್ಟಿ ಎಂಬವರು ಖರೀದಿಸಿದ್ದು, ಕುಟ್ಟಿ ಅವರಿಂದ ರಾಮಪುರ ಪ್ರವೇಟ್ ಲಿಮಿಟೆಡ್ ಹೆಸರಲ್ಲಿ ವಿಕ್ರಯಿಸಲಾಗಿದೆ. ಹಿಂದೆ ಎಸ್ಟೇಟ್ ಬಾಗಿಲಲ್ಲಿದ್ದ ನಾಗರಿಕರು ಬೇಕೆಂದಾಗ ಬರುವುದಕ್ಕೆ ಹೋಗುವದಕ್ಕೆ ಯಾವುದೇ ಅಡ್ಡಿಆತಂಕ ಇರಲಿಲ್ಲ. ಪ್ರಸಕ್ತ ಗೇಟ್ ಅಳವಡಿಸಿ ಬೀಗ ಹಾಕುವ ವ್ಯವಸ್ಥೆ ಮಾಡಲಾಗಿದೆ. ದಲಿತರೇ ಹೆಚ್ಚಿರುವ ಕೇರಿ ಕಬ್ಬಿನಕೋಣು ನಿವಾಸಿಗಳು ಮನೆಯಿಂದ ಹೊರಗೆ ಹೋಗಬೇಕಿದ್ದರೆ, ಎಸ್ಟೇಟ್ ಬಳಿ ಇರುವ ಕಚೇರಿಗೆ ಹೋಗಿ ಪಾಸ್ ಪಡೆದು ತೋರಿಸಿ ಹೋಗಬೇಕು. ಅದೂ ಸಮಯದ ಪರಿಮಿತಿಯಲ್ಲಿ. ಗೇಟ್ ಬಂದ ನಂತರ ಕಬ್ಬಿನಕೋಣು, ನುಗ್ಗೆಗದ್ದೆ ಕೇರಿ ಜನ ರಾತ್ರಿ ನಡೆಯುವ ಸಮಾರಂಭಗಳಿಗೆ ಹೋಗಲು ಆಗುತ್ತಿಲ್ಲ. ಒಮ್ಮೆ ಹೋದರೂ ಗೇಟ್ ಒಳಗೆ ಹೋಗಲು ತಡವಾಗುತ್ತದೆ ಎಂದು ಮುಖ ತೋರಿಸಿ ಬರಬೇಕು ಅಷ್ಟೇ.

ರಾಮ್‌ಪುರ ಎಸ್ಟೇಟ್ ಆರಂಭಕ್ಕೂ ಮುನ್ನಾ ಎಲ್ಲವೂ ಸಲೀಸಾಗಿತ್ತು. ಯಾವತ್ತು ಈ ಜಾಗ ವಿಕ್ರಯಿಸಿತೋ ಅಂದಿನಿಂದ ಕೇರಿ ನಿವಾಸಿಗಳಿಗೆ ಗ್ರಹಚಾರ ಒಕ್ಕರಿಸಿದೆ. ನುಗ್ಗೆಗದ್ದೆ, ಕಬ್ಬಿನ್‌ಕೋಣು, ಕೇರಿ ಪರಿಸರದಲ್ಲಿ ಹನ್ನೆರೆಡು ಮನೆಗಳಿದ್ದು, ಪರಿಶಿಷ್ಟ ಜಾತಿ ಕುಟುಂಬದವರೇ ಹೆಚ್ಚಿದ್ದಾರೆ. ಅಲ್ಪ ಸ್ವಲ್ಪ ಜಮೀನಿದೆ ಕೃಷಿ ಜೊತೆ ಹೊರಗಡೆ ದುಡಿದು ಜೀವನ ಸಾಗಿಸುತ್ತಿದ್ದಾರೆ. ಪರಿಸರದ ವಾಸಿಗಳ ಅಜ್ಜ, ಮುತ್ತಜ್ಜ ಪಿಜ್ಜಜ್ಜ ಬದುಕು ಬಾಳಿ ಮಣ್ಣಾದರು. ಯಾರೂ ಸಂಚಾರ ಸಮಸ್ಯೆ, ದಿಗ್ಬಂಧನಕ್ಕೆ ಸಿಕ್ಕಿರಲಿಲ್ಲ. ಮೂರನೇ ತಲೆಮಾರಿನ ಜನ ಮಾತ್ರ ಸಂಚಾಕ್ಕೂ ಪಾಸ್ ಪಡೆದು ಓಡಾಡಬೇಕು. ತಮಗೆ ಸ್ವತಂತ್ರ್ಯ ಸಿಗೋದು ಎಂದು ಪ್ರಶ್ನಿಸುತ್ತಿದ್ದಾರೆ ಇಲ್ಲಿನ ಜನರು.

ರಾಮ್‌ಪುರ ಎಸ್ಟೇಟ್ ವಿಶಾಲ ಭೂ ಭಾಗ ಹೊಂದಿದೆ. ಇನ್ನೂ ವಿಸ್ತರಿಸಿಕೊಳ್ಳುತ್ತಲೇ ಇದೆ. ವಿಸ್ತರಿಸುವ ಭರದಲ್ಲಿ ಶತಶತಮಾನ ಕಂಡ ಮರಗಳು ಧರೆಗುರುಳುತ್ತಿವೆ. ಎಲ್ಲೋ ಒಂದೆರೆಡು ಮರವಿದ್ದು, ಜಾಗದಲ್ಲಿ ಬಡವರು ಮನೆಕಟ್ಟಿ ಕೂತರೆ ರಕ್ಷಿತಾರಣ್ಯ ವೈಲ್ಡ್‌ಲೈಪ್, ಡೀಮ್ಡ್ ಫಾರೆಸ್ಟ್ ಎಂದು ಒಕ್ಕಲೆಬ್ಬಸುವ ಅರಣ್ಯ ಇಲಾಖೆ ಮರಗಳನ್ನು ಜೆಸಿಬಿಯಲ್ಲಿ ದೂಡಿ, ರಬ್ಬರ್ ಬೆಳೆದರೂ ತುಟಿ ಬಿಚ್ಚಿಲ್ಲ.

ಇನ್ನು ಕಬ್ಬಿನ್‌ಕೋಣು, ಕೇರಿ, ನುಗ್ಗೆಗದ್ದೆ ಬಳಸಿ ಗುಂಡಿನಹೊಳೆ, ಸಂಸ್ಸೆಹೊಳೆ ಹರಿಯುತ್ತಿತ್ತು. ಆದರೆ ಇದೀಗ ನದಿ ಹರಿಯುವುದನ್ನು ನಿಲ್ಲಿಸಲಾಗಿದೆ. ಖಾಸಗಿ ಎಸ್ಟೇಟ್ ಮಾಲೀಕರು ಹೊಳೆಗೆ ಎರೆಡೆರೆಡು ಡ್ಯಾಮ್ ನಿರ್ಮಿಸಿ ನೀರು ಹರಿಯದಂತೆ ಬಂದ್ ಮಾಡಿದ್ದಾರೆ. ಅಡಕೆ, ತೆಂಗು ತೋಟಕ್ಕೂ ನೀರಿಲ್ಲದೆ ಕೃಷಿ ಅವತಿಯತ್ತ ಹೊರಳುತ್ತಿದೆ. ಎಸ್ಟೇಟ್ ಮಾಲೀಕರು ಕಟ್ಟಿದ ಕಟ್ಟದಿಂದ ಇಡೀ ಗುಡ್ಡದಲ್ಲಿರುವ ರಬ್ಬರ್ ಇನ್ನಿತರ ಬೆಳೆಗೆ ಪೈಪ್ ಲೈನ್ ಮೂಲಕ ನೀರುಣಿಸಲಾಗುತ್ತಿದೆ. ಸ್ವಾಭಾವಿಕವಾಗಿ ಹರಿವ ಹೊಳೆ ನೀರು ತಿರುಗಿಸಿ ಸ್ವಂತಕ್ಕೆ ಬಳಸಿಕೊಳ್ಳಲು ಖಾಸಗಿ ವ್ಯಕ್ತಿಗಳಿಗೆ ಒಪ್ಪಿಗೆ ಕೊಟ್ಟಿದ್ದು ಯಾರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಕೇರಿ, ಕಬ್ಬಿನಕೋಣು, ನುಗ್ಗೆಗದ್ದೆ ನಾಗರಿಕರು ಶ್ರಮ ಜೀವಿಗಳು. ಕೃಷಿಯಲ್ಲಿ ಅಲ್ಪಸ್ವಲ್ಪ ಆದಾಯ ಬರುತ್ತದೆ. ಇರುವ ಜಮೀನು ಕ್ರಮಬದ್ದವಾಗಿದೆ. ಒಬ್ಬೊಬ್ಬರಿಗೆ ಅರ್ಧ ಎಕ್ರೆಯೋ ಒಂದು ಎಕ್ರೆಯೋ ಜಮೀನಿದ್ದು, ಕೃಷಿ ದುಡಿಮೆ ಜತೆ ಕೃಷಿ ಕೂಲಿಗೂ ಹೋಗುತ್ತಾರೆ. ಕಷ್ಟಪಟ್ಟು ದುಡಿದರೆ ಉಂಟು ಇಲ್ಲದಿದ್ದರೆ ಇಲ್ಲಾ ಎನ್ನುವ ಸ್ಥಿತಿ. ಕೇರೆಯಲ್ಲಿ ಇರುವ ಕುಟುಂಬದ ಮನೆ ನೋಡಿದರೆ ಇಲ್ಲಿನ ಸ್ಥಿತಿಗತಿ ಅರ್ಥವಾಗುತ್ತದೆ. ಗಂಡ ಹೆಂಡತಿ ಇಬ್ಬರು ಮಕ್ಕಳು ಜತೆ ವಾಸಮಾಡುತ್ತಿರುವ ಸ್ಥಳೀಯ ಕುಟುಂಬ ಇಲ್ಲಿನ ಬದುಕಿನ ಅನಾವರಣ ಮಾಡುತ್ತದೆ.

ಇನ್ನು ತಮ್ಮ ಸ್ವಂತ ಮನೆಯಲ್ಲೂ ರಾತ್ರಿ ಕಾರ್ಯಕ್ರಮ ಮಾಡಲು ಆಗುತ್ತಿಲ್ಲ. ಏಕೆಂದರೆ ರಾತ್ರಿ ಗೇಟ್ ಬಂದ್ ಮಾಡುವುದರಿಂದ ಒಳಗಿನವರು ಹೊರಕ್ಕಾಗಲೀ, ಹೊರಗಿನವರು ಒಳಕ್ಕೆ ಬರುವುದಕ್ಕೆ ಅವಕಾಶವೇ ಇಲ್ಲಾ..! ಈ ಬಗ್ಗೆ ಜನರ ಮನವಿಗೆ ಸ್ಪಂದಿಸಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಇದನ್ನೆಲ್ಲಾ ರದ್ದು ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಎಸ್ಟೇಟ್ ಮಾಲಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಎಸ್ಟೇಟ್ ಮಾಲಕರಿ ಅದಕ್ಕೂ ಕ್ಯಾರೇ ಅಂದಿಲ್ಲ. ಇವೆಲ್ಲವನ್ನು ಗಮನಿಸಿದರೆ ಮುದೂರು ಸ್ವಾತಂತ್ರ ಭಾರತದಲ್ಲಿದೆಯೋ ಪಾಳೆಗಾರರ ಆಡಳಿತದಲ್ಲಿದೆಯೋ ಎನ್ನುವಷ್ಟು ಗೊಂದಲ ಹುಟ್ಟುಹಾಕುವುದಂತು ಸತ್ಯ.

Related posts

Leave a Reply