
ಮಂಗಳೂರು: ಮಂಗಳೂರು ಹೊರವಲಯದ ಬೈಕಂಪಾಡಿಯ ಸ್ಪ್ರಿಂಗ್ ಉತ್ಪಾದನಾ ಘಟಕವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕೋಟ್ಯಾಂತರ ರೂ.ನಷ್ಟ ಸಂಭವಿಸಿದೆ.
ಈ ಘಟಕವು ದ.ಕ ಜಿಲ್ಲೆಯಲ್ಲಿ ಇರುವ ಏಕೈಕ ಅತ್ಯಾಧುನಿಕ ಸ್ಪ್ರಿಂಗ್ ಉತ್ಪಾದನಾ ಘಟಕವಾಗಿದ್ದು, ಅತ್ಯಾಧುನಿಕ ರೊಬೊಟಿಕ್ ಘಟಕದಲ್ಲಿ ಈ ಅವಘಡ ಸಂಭವಿಸಿದೆ.
ಸಂಜೆ 7 ಗಂಟೆಗೆ ವಿದ್ಯುತ್ ಕಡಿತವಾಗಿ ಬೆಂಕಿ ಹತ್ತಿಕೊಂಡಿತು. ಸ್ಥಳೀಯ ಎಂಸಿಎಫ್, ಕದ್ರಿ ಅಗ್ನಿ ಶಾಮಕ ವಾಹನ ಹಾಗೂ ಸಿಬಂದಿಗಳು ಒಂದೂವರೆ ಗಂಟೆ ಬೆಂಕಿ ನಂದಿಸಲು ಶ್ರಮಿಸಿದರು. ಘಟಕದಲ್ಲಿ ಸುಮಾರು ೯೦ ಸಾವಿರ ಲೀಟರ್ ಫರ್ನೆಸ್ ಆಯಿಲ್ ಸಂಗ್ರಹವಿದ್ದು, ಅಗ್ನಿ ಜ್ವಾಲೆ ಹೆಚ್ಚಲು ಕಾರಣವಾಯಿತು. ಘಟನೆಯ ವೇಳೆ ರಾತ್ರಿ ಪಾಳಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲವರು ವಿರಾಮ ಸಮಯದಲ್ಲಿ ಚಹಾ ಸೇವಿಸಲು ತೆರಳಿದ್ದರು ಹೀಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ.
ಸ್ಥಳಕ್ಕೆ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು. ಪಣಂಬೂರು ವಲಯ ಎಸಿಪಿ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಪಣಂಬೂರು ಎಸ್ಐ ಉಮೇಶ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿತ್ತು.