ಮಂಗಳೂರಿನ ಬೊಕ್ಕಪಟ್ಣದಲ್ಲಿರುವ ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದಲ್ಲಿ ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವಗಳ ವಾರ್ಷಿಕ ಚೌತಿಪರ್ಬ ಹಾಗೂ ನೇಮೋತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಧಾರ್ಮಿಕ ಕಾರ್ಯಕ್ರಮಗಳು ‘ಮತ್ಸ್ಯವೇದ ರತ್ನ’ ದೇರೆಬೈಲು ಬ್ರಹ್ಮ ಶ್ರೀ ವಿಠಲದಾಸ್ ತಂತ್ರಿ ವರ್ಯರ ನೇತೃತ್ವದಲ್ಲಿ ನಡೆಯುತ್ತಿದೆ. ಜನವರಿ 29ರ ಸಂಜೆ ಧ್ವಜಾಸ್ತಂಭರೋಹಣ ಧಾರ್ಮಿಕ ವಿಧಾನಗಳೊಂದಿಗೆ ನೆರವೇರಿತು. ನಂತರ ದೈವಗಳ ಭಂಡಾರ ಆಗಮನ, ಚೌತಿ ಪರ್ಬ, ಬ್ರಹ್ಮರ ಜೋಗದ ಬಲಿ ಸೇವೆ ದೈವದರ್ಶನ ನಡೆಯಿತು.
ಈ ಸಂದರ್ಭ ಮಾತನಾಡಿದ ಸರ್ವಶ್ರೀಗಳಾದ ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಆರ್.ಪಿ. ಬೋಳೂರ್ ಅವರು, ಪ್ರತೀ ವರ್ಷ ಜನವರಿ 29 ಮತ್ತು 30ರಂದು ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವಗಳ ವಾರ್ಷಿಕ ಚೌತಿಪರ್ಬ ಹಾಗೂ ನೇಮೋತ್ಸವವನ್ನು ಆಯೋಜಿಸಿಕೊಂಡು ಬಂದಿದ್ದೇವೆ. ಬೋಳೂರು, ಬೊಕ್ಕಪಟ್ಣ, ಕುದ್ರೋಳಿ ಹಾಗೂ ಬೆಂಗ್ರೆ ನೀರೇಶ್ವಾಲ್ಯ ಮೊಗವೀರ ಗ್ರಾಮ ಸೇರಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ನಮ್ಮ ಪೂರ್ವಿಕರು ಆಚಾರ ವಿಚಾರದಲ್ಲಿ ಬಹಳ ಭಯ ಭಕ್ತಿಯಿಂದ ಈ ದೈವಸ್ಥಾನವನ್ನು ಸ್ಥಾಪನೆ ಮಾಡಿದ್ದಾರೆ ಎಂದ ಅವರು ದೈವಸ್ಥಾನದ ಇತಿಹಾಸವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕುದ್ರೋಳಿ 3ನೇ ಗ್ರಾಮದ ಅಧ್ಯಕ್ಷರಾದ ಲೊಕೇಶ್ ಸುವರ್ಣ, ಬೊಕ್ಕಪಟ್ಣ ಗ್ರಾಮದ ಉಪಾಧ್ಯಕ್ಷರಾದ ಬಿ. ಗೋಪಾಲಕೃಷ್ಣ ಕುಂದರ್, ಬೊಕ್ಕಪಟ್ಣ ಗ್ರಾಮದ ಸ್ಥಳ ಕರ್ತವರು ತುಕರಾಮ ಕೋಟ್ಯಾನ್, ಬೆಂಗ್ರೆ ನೀರೇಶ್ವಾಲ್ಯ ಗ್ರಾಮದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸಾಲ್ಯಾನ್, ಬೋಳೂರು ಗ್ರಾಮದ ಜೊತೆ ಕಾರ್ಯದರ್ಶಿ ಪ್ರವೀಣ್ ಮೆಂಡನ್, ಕುದ್ರೋಳಿ 2ನೇ ಗ್ರಾಮದ ಕೋಶಾಧಿಕಾರಿ ಯಾಧವ ಸುವರ್ಣ ಮತ್ತು ಆಡಳಿತ ಸಮಿತಿಯ ಸದಸ್ಯರುಗಳು, ಗುರಿಕಾರರು ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು