Header Ads
Breaking News

ಭವತಿ ಭಿಕ್ಷಾಂದೇಹಿ ಧಾರ್ಮಿಕ ಕ್ಷೇತ್ರಗಳಲ್ಲಿ ಭಿಕ್ಷೆ ಬೇಡುವ ಅಜ್ಜಿ : ಭಿಕ್ಷೆ ಬೇಡಿದ ಹಣ ದೇವಾಲಯಕ್ಕೆ ದಾನ

 ಭವತಿ ಭಿಕ್ಷಾಂದೇಹಿ ಎಂದು ಧಾರ್ಮಿಕ ಕ್ಷೇತ್ರಗಳಲ್ಲಿ ಭಿಕ್ಷೆ ಬೇಡಿದ ಹಣವನ್ನು ಅಜ್ಜಿಯೊಬ್ಬರು ದೇವಾಲಯಗಳಿಗೆ ದಾನ ಮಾಡುತ್ತಾರೆ. ಅನ್ನದಾನವೇ ಶ್ರೇಷ್ಠದಾನ ಎಂದು ನಂಬಿರುವ ಈಕೆ ಭಿಕ್ಷೆಬೇಡಿ ದಾನ ಕೊಟ್ಟ ಹಣವಾದರೂ ಎಷ್ಟು ಗೊತ್ತಾ? ಇಷ್ಟೋರಿ ನೋಡಿ…

ಅಯ್ಯಪ್ಪ ವ್ರತಧಾರಿಯಾದ ಈ ವೃದ್ಧೆಯನ್ನು ಕರಾವಳಿಯ ಬಹುತೇಕ ದೇವಾಲಯಗಳಲ್ಲಿ ಜನ ಕಾಣುತ್ತಾರೆ. ಭಿಕ್ಷಾಂದೇಹಿ ಎಂದು ಜನರ ಮುಂದೆ ಕೈಚಾಚುವ ಈಕೆಗೆ ಅಷ್ಟೋ ಇಷ್ಟೋ ಹಣ ಕೊಡುತ್ತಾರೆ. ಯಾರೋ ಭಿಕ್ಷುಕಿ ಎಂದು ಮರೆತುಬಿಡುತ್ತಾರೆ. ಆದರೆ ಯಾವ ಧನಿಕನಿಗೂ ಇಲ್ಲದ ಹೃದಯ ಶ್ರೀಮಂತಿಕೆ ಈ ವೃದ್ದೆಗೆ ಇದೆ ಅನ್ನೋದು ಈಗ ಸಾಬೀತಾಗಿದೆ. ನೂರಲ್ಲ.. ಸಾವಿರವಲ್ಲ.. ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಈಕೆ ಸಾಲಿಗ್ರಾಮದ ಗುರುನರಸಿಂಹ ದೇವರ ಸನ್ನಿಧಾನಕ್ಕೆ ದಾನ ನೀಡಿದ್ದಾರೆ ದೇವಸ್ಥಾನದ ಅನ್ನಸಂತರ್ಪಣೆ ಗೆ ಈ ಹಣವನ್ನು ಬಳಸಿಕೊಳ್ಳುವಂತೆ ಕೋರಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯತೆ ಕಂಡು ಪರಿಸರದ ಜನರು ಬೆಕ್ಕಸ ಬೆರಗಾಗಿದ್ದಾರೆ.

ಅಶ್ವತ್ಥಮ್ಮ, ಭಿಕ್ಷೆ ಕೇಳುವ ಮಹಿಳೆ

ಅಯ್ಯಪ್ಪ ಭಕ್ತೆಯಾದ ಈ ವೃತಧಾರಿ ವೃದ್ಧೆಯ ಹೆಸರು ಅಶ್ವತಮ್ಮ. ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಈಕೆ ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಟೋಲ್ಗೇಟ್ ನಲ್ಲಿ ಜನರಿಂದ ಹಣವನ್ನು ಸಂಗ್ರಹಿಸುತ್ತಾರೆ. ಮಾಮೂಲಾಗಿ ಭಿಕ್ಷುಕರಿಗೆ ನೀಡುವಂತೆ ಈಕೆಗೂ ಎಲ್ಲರೂ ಹಣ ನೀಡುತ್ತಾರೆ.ಹೀಗೆ ಸಂಗ್ರಹವಾದ ಹಣದಲ್ಲಿ ಈಕೆ ಸುಮಾರು ಐದು ಲಕ್ಷಕ್ಕೂ ಅಧಿಕ ಹಣವನ್ನು ದಾನವಾಗಿ ವಿವಿಧ ದೇವಾಲಯಗಳಿಗೆ ಕೊಟ್ಟಿದ್ದಾರೆ.ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5ಲಕ್ಷ ರೂ. ದೇಣಿಗೆಯೊಂದಿಗೆ ಈ ದಾನ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ನಡೆಸಲಾಗಿದೆ. ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳವಾದ ಪಂದಳ ಕ್ಷೇತ್ರದಲ್ಲಿ 30ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ 1.5ಲಕ್ಷ ರೂ.ಗಳನ್ನು ಕಾಣಿಕೆ ಸಮರ್ಪಿಸಿದ್ದಾರೆ. ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನು ಏಕೆ ದಾನ ಮಾಡುತ್ತಾ ಬಂದಿದ್ದಾರೆ.

ರಮೇಶ್ ಮೆಂಡನ್, ಸ್ಥಳೀಯ

ಈಕೆಯ ಪತಿ ಹಾಗೂ ಪುತ್ರ ತೀರಿಕೊಂಡನಂತರ ಈಕೆ ಈ ಹಣ ಸಂಗ್ರಹ ಕೆಲಸ ಆರಂಭಿಸಿದ್ದಾರೆ. ಈಕೆಗೆ ಆರು ಮಂದಿ ಮೊಮ್ಮಕ್ಕಳೂ ಇದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *