ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಪೊನ್ನುರಾಜ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಘನತ್ಯಾಜ್ಯವನ್ನು ಬಯೋ ಸಿಎನ್ಜಿ ಮುಖಾಂತರ ವಿಲೇವಾರಿ ಮಾಡುವ ಕುರಿತು ತಾಂತ್ರಿಕ ಸಲಹೆಗಾರರು, ಅಧಿಕಾರಿಗಳು ಹಾಗೂ ಮನಪಾ ಸದಸ್ಯರೊಂದಿಗೆ ಚರ್ಚಿಸಲಾಯಿತು. ಆರ್ಇಟಿಎಪಿ ಸಂಸ್ಥೆಗೆ ಮನಪಾ ವ್ಯಾಪ್ತಿಯ ಬಯೋ ಸಿಎನ್ಜಿ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ವಿವರವಾದ ಮಾಹಿತಿ ಸಲ್ಲಿಸಲು ಸೂಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ಜಿಲ್ಲಾ ಪಂಚಾಯತ್ ಸಿಇಒ ಸೆಲ್ವಮಣಿ, ಪಾಲಿಕೆ ಆಯುಕ್ತ ಅಕ್ಷಯ್, ಮನಪಾ ಆಡಳಿತ ಪಕ್ಷದ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮ, ಅಧಿಕಾರಿಗಳು ಉಪಸ್ಥಿತರಿದ್ದರು.