Header Ads
Breaking News

ಮಂಗಳೂರಿನ ಐಟಿ ಕಚೇರಿ ಗೋವಾ ಕಚೇರಿಯೊಂದಿಗೆ ವಿಲೀನ

ಕೇಂದ್ರ ಸರಕಾರದ ಸೂಚನೆಯಂತೆ ಮಂಗಳೂರಿನ ಐಟಿ ಕಚೇರಿಯು ಗೋವಾ ಕಚೇರಿಯೊಂದಿಗೆ ವಿಲೀನಗೊಳ್ಳಲಿದೆ. ಒಂದುವೇಳೆ ಹೀಗಾದರೆ ಕರಾವಳಿಯ ತೆರಿಗೆದಾರರು ಗೋವಾಕ್ಕೆ ಅಲೆಯಬೇಕಾದ ಸ್ಥಿತಿ ಉದ್ಭವಿಸಲಿದೆ. ಪ್ರಸ್ತುತ ಕರಾವಳಿಯ ತೆರಿಗೆದಾರರು ಆಕ್ಷೇಪಿತ ತೆರಿಗೆ ಪರಿಷ್ಕರಣೆ ಮತ್ತು ಇತರ ತೆರಿಗೆ ಸಂಬಂಧಿ ಕೆಲಸಗಳಿಗಾಗಿ ಈ ಕಚೇರಿಯನ್ನು ಆಶ್ರಯಿಸಿದ್ದಾರೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಈ ಕಚೇರಿ ಒಳಗೊಂಡಿದೆ.

ಕರಾವಳಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ ಕೇಂದ್ರಗಳು, ಕೈಗಾರಿಕೆಗಳಿದ್ದು, ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿವೆ. ಬೆಂಗಳೂರಿನ ಅನಂತರ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣ ಈ ಜಿಲ್ಲೆಗಳು ಹೊಂದಿವೆ. ಜತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 4 ಲಕ್ಷ ಮಂದಿ ತೆರಿಗೆದಾರರು ವಾರ್ಷಿಕ 3,300 ಕೋ.ರೂ. ತೆರಿಗೆ ಪಾವತಿಸುತ್ತಿದ್ದಾರೆ. ರಾಜ್ಯದಲ್ಲಿ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ದ್ವಿತೀಯ ಸ್ಥಾನ ಮಂಗಳೂರಿಗಿದ್ದರೆ, ಹುಬ್ಬಳ್ಳಿ ತೃತೀಯ ಸ್ಥಾನದಲ್ಲಿದೆ.

ಈಗಾಗಲೇ ರೈಲ್ವೇ ವಲಯ ಸೇರಿದಂತೆ ಹಲವು ಬೇಡಿಕೆ ಗಳ ಈಡೇರಿಕೆಗಾಗಿ ಕರಾವಳಿಗರು ಸರಕಾರಗಳ ಎದುರು ಆಗ್ರಹಿಸುತ್ತಲೇ ಇದ್ದಾರೆ. ಅವು ಈಡೇರುವ ಮೊದಲೇ, ಮತ್ತೊಂದು ಮಹತ್ವದ ಕಚೇರಿಯನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕೇವಲ ಮೂರು ಪಿಸಿಐಟಿ ಕಚೇರಿಗಳಿವೆ. ಈ ಸಂಖ್ಯೆಯೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ವಾಸ್ತವ ಹೀಗಿರುವಾಗ ಇರುವ ಒಂದು ಪ್ರಮುಖ ಕಚೇರಿಯನ್ನೂ ಬೇರೆ ರಾಜ್ಯದ ಕೇಂದ್ರದೊಂದಿಗೆ ವಿಲೀನಗೊಸುವುದು ಸರಿಯಲ್ಲ. ಇದರ ವಿರುದ್ಧ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಮತ್ತು ಕಚೇರಿಯನ್ನು ಶತಾಯಗತಾಯ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಎ.ಸಿ ವಿನಯಕುಮಾರ್ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಈ ಮೂರು ಜಿಲ್ಲೆಗಳಿಗೆ ಆದಾಯ ತೆರಿಗೆ ಕಚೇರಿ ಇವತ್ತು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ಅದನ್ನು ಗೋವಾಕ್ಕೆ ವರ್ಗಾವಣೆ ಮಾಡುವ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿರುವುದು ಖೇದಕರ ವಿಚಾರ ಈ ಬಗ್ಗೆ ಪ್ರತಿಭಟನೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.

ಮಂಗಳೂರಿನ ಪಿಸಿಐಟಿ ಕಚೇರಿಯನ್ನು ಗೋವಾದೊಂದಿಗೆ ವಿಲೀನ ಮಾಡದೆ ಇರುವುದು ಉತ್ತಮ. ಅವಿಭಜಿತ ಜಿಲ್ಲೆಯಲ್ಲಿ 4 ಲಕ್ಷ ಜನರು ತೆರಿಗೆ ಪಾವತಿಸುತ್ತಿದ್ದು, ಆಡಿಟ್ ಆಕ್ಷೇಪಗಳಿಗೆ ಗೋವಾಕ್ಕೆ ತೆರಳುವುದು ಕಷ್ಟಸಾಧ್ಯ. ಈ ಕಚೇರಿ ಇಲ್ಲೇ ಉಳಿಯಬೇಕು ಮತ್ತು ಕರಾವಳಿ ಜಿಲ್ಲೆಯ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಉಳಿಸುವಂತಹ ಕಾರ್ಯ ಆಗಬೇಕಿದೆ.

Related posts

Leave a Reply

Your email address will not be published. Required fields are marked *