
ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆಯಲ್ಲಿ ಅನುದಾನ ಪಡೆಯುತ್ತಿರುವ ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು ಮತ್ತು ಸಿಬ್ಬಂದಿಗೆ ಗೌರವಧನ ದ್ವಿಗುಣಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಿನ್ನಿಗೋಳಿ ಚರ್ಚ್ನ ಪ್ರಧಾನ ಧರ್ಮಗುರು ಫಾ. ಮ್ಯಾಥ್ಯೂ ವಾಸ್ ಅವರು, ವಿಶೇಷ ಮಕ್ಕಳ ಸೇವೆ ಎಂದರೆ ದೇವರ ಸೇವೆ ಮಾಡಿದಂತೆ. ಅಂತಹ ಸೇವೆ ನೀಡುತ್ತಿರುವ ಶಿಕ್ಷಕರಿಗೆ ಸರಕಾರ ಸರಿಯಾದ ಸವಲತ್ತು, ವೇತನ ನೀಡಬೇಕು. ವಿಶೇಷ ಶಿಕ್ಷಕರ ಅಳಲು ಆಲಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಸಂಘದ ರಾಜ್ಯ ಗೌರವ ಕಾರ್ಯದರ್ಶಿ ಡಾ. ವಸಂತ್ಕುಮಾರ್ ಶೆಟ್ಟಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಷ್ಮಾ ಮಾರ್ಟಿಸ್ ಮೊದಲಾದವರು ಉಪಸ್ಥಿತರಿದ್ದರು.