Header Ads
Breaking News

ಮಂಗಳೂರು ಮಹಾನಗರಲ್ಲಿ ಮತ್ತೆ ಕಂಗೊಳಿಸಲಿದೆ ಪಂಪ್‍ವೆಲ್ ಕಲಶ..!; 2016ರಲ್ಲಿ ತೆರವುಗೊಂಡಿದ್ದ ಪಂಪ್‍ವೆಲ್ ಕಲಶಕ್ಕೆ ಮತ್ತೆ ಪ್ರತಿಷ್ಟಾಪನಾ ಭಾಗ್ಯ..!

ಪಂಪ್‍ವೆಲ್ ಸರ್ಕಲ್. ಒಂದು ಕಾಲದಲ್ಲಿ ಮಂಗಳೂರು ನಗರದ ಮುಕುಟಮಣಿ ಎನಿಸಿಕೊಂಡಿದ್ದ ಪ್ರದೇಶ. ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಇದ್ದಿದ್ದು ಇಲ್ಲಿನ ಕಲಶ. ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಸಂದರ್ಭದಲ್ಲಿ ತೆರವುಗೊಂಡಿದ್ದ ಕಲಶಕ್ಕೆ ಇದೀಗ ಮತ್ತೆ ಮರುಸ್ಥಾಪನೆಯ ಯೋಗ ಒದಗಿಬಂದಿದೆ.

ಒಂದು ಕಾಲದಲ್ಲಿ ಮಂಗಳೂರು ಎಂದ ಕೂಡಲೇ ಎಲ್ಲರ ತಲೆಗೆ ಹೊಳೆಯುತ್ತಿದ್ದ ವಿಚಾರ ಎಂದರೆ ಅದು ಪಂಪ್‍ವೆಲ್. ಈ ಪಂಪ್‍ವೆಲ್‍ಗೆ ಭೂಷಣವಾಗಿದ್ದುದು ಇಲ್ಲಿ ಸುಂದರವಾಗಿ ಪ್ರತಿಷ್ಠಾಪನೆಯಾಗಿದ್ದ ಕಲಶ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಭಗವಾನ್ ಮಹಾವೀರನ ಶತಮಾನೋತ್ಸವ ಆಚರಣೆ ಸಂದರ್ಭ ಪಂಪ್‍ವೆಲ್ ವೃತ್ತದಲ್ಲಿ ಶುಭ ಸಂಕೇತವಾಗಿ ಬೃಹತ್ ಗಾತ್ರದ ಕಲಶವನ್ನು ರಚಿಸಿ ಸ್ಥಾಪಿಸಲಾಗಿತ್ತು. 2003ರಲ್ಲಿ ಇದರ ಸ್ಥಾಪನೆಯಾಗಿದ್ದು, ಮೇಲ್ಸೇತುವೆ ಕಾಮಗಾರಿ ಕಾರಣಕ್ಕೆ 2016ರಲ್ಲಿ ಕಲಶವನ್ನು ತೆರವುಗೊಳಿಸಲಾಗಿತ್ತು. ಈ ಕಲಶ 26 ಅಡಿ ಎತ್ತರವಿದ್ದು, 22 ಟನ್ ತೂಕವಿದೆ. ಪಂಪ್‍ವೆಲ್ ವೃತ್ತಕ್ಕೆ ಮುಕಟಪ್ರಾಯದಂತೆ ಈ ಕಲಶ ಕಂಗೊಳಿಸುತ್ತಿತ್ತು. ಕಳೆದ ನಾಲ್ಕೈದು ವರ್ಷಗಳ ಹಿಂದೆ ತೆರವುಗೊಂಡಿದ್ದ ಕಲಶವನ್ನು ಮತ್ತೆ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಪ್ರಯತ್ನಗಳು ಕೂಡ ಆರಂಭಗೊಂಡಿವೆ.

ನಾಲ್ಕು ರಸ್ತೆ ಸಂಧಿಸುವ ಸ್ಥಳ ಪಂಪ್‍ವೆಲ್‍ನಲ್ಲಿ ಕಲಶ ಸ್ಥಾಪಿಸುವ ಮೂಲಕ ಈ ವೃತ್ತಕ್ಕೆ ಮಹಾವೀರ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ಇದು ಸರ್ಕಾರದ ಗಜೆಟ್‍ನಲ್ಲೂ ಪ್ರಕಟವಾಗಿತ್ತು. 2016 ಮಾರ್ಚ್ 21ರಂದು ಕ್ರೇನ್ ಮೂಲಕ ಬೃಹತ್ ಕಲಶವನ್ನು ತೆರವುಗೊಳಿಸಿ ಸಮೀಪಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಕಲಶ ಮರುಸ್ಥಾಪನೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಸದ್ಯಕ್ಕೆ ಈ ಕಲಶ ಸಮೀಪದ ಪೊಲೀಸ್ ಚೌಕಿಯ ಎದುರು ಇದೆ. ಮೇಲ್ಸೇತುವೆ ಕಾಮಗಾರಿ ಉಸ್ತುವಾರಿ ವಹಿಸಿಕೊಂಡ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಐಎ) ಮೇಲ್ಸೇತುವೆ ಕೆಳಭಾಗದಲ್ಲಿ ಹೊಸದಾಗಿ ವೃತ್ತವನ್ನು ರಚಿಸಿದೆ.
ಈ ವೃತ್ತದಲ್ಲಿ ಕಲಶ ಮರುಸ್ಥಾಪನೆ ಸಾಧ್ಯತೆ ಬಗ್ಗೆ ಮಂಗಳೂರಿನ ಜೈನ್ ಸೊಸೈಟಿ ಹಾಗೂ ಜನಪ್ರತಿನಿಧಿಗಳು ಚಿಂತನೆ ನಡೆಸುತ್ತಿದ್ದಾರೆ.

ಆದರೆ ವಾಸ್ತವವಾಗಿ ಇಲ್ಲೊಂದು ಮತ್ತೊಂದು ಸಮಸ್ಯೆಯಿದೆ. ಈಗ ಫ್ಲೈಓವರ್ ಕೆಳಗೆ ನಿಮಾರ್ಧಣಗೊಂಡಿರುವ ವೃತ್ತವನ್ನು ವಾಹನ ತಿರುವಿಗಾಗಿ ಯೋಜನೆ ಪ್ರಕಾರ ರಚಿಸಲಾಗಿದೆ. ಈ ವೃತ್ತ ಸಣ್ಣದಾಗಿದೆ. ಅಲ್ಲಿ ಬೃಹತ್ ಕಲಶ ಸ್ಥಾಪನೆ ಸುಲಭವಲ್ಲ. ಆದ್ದರಿಂದ ಈಗ ಕಲಶವನ್ನು ಇರಿಸಿದ ಪೊಲೀಸ್ ಚೌಕಿ ಜಾಗದಲ್ಲೇ ವ್ಯವಸ್ಥಿತ ರೀತಿಯಲ್ಲಿ ಕಲಶ ಸ್ಥಾಪಿಸಿದರೆ ಉತ್ತಮ ಎಂಬ ಸಲಹೆ ಕೂಡ ಬಂದಿದೆ. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಲಶ ಮರುಸ್ಥಾಪನೆ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ. ಮುಂದೆ ಏನಾಗುತ್ತೆ ಎನ್ನುವುದನ್ನು ಕಾದುನೋಬೇಕಿದೆ.

Related posts

Leave a Reply

Your email address will not be published. Required fields are marked *