Header Ads
Breaking News

ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ಕ್ಷೇತ್ರ.ಮಕ್ಕಳನ್ನು ಸಾಂಕೇತಿಕವಾಗಿ ಉಳ್ಳಾಲ್ತಿ ದೇವಿಗೆ ಹರಿಕೆ ಒಪ್ಪಿಸುವ ಕಜಂಬು ಉತ್ಸವ ಇಲ್ಲಿನ ವಿಶೇಷತೆ

 

ಚಿತ್ರ ವರದಿ : ಜ್ಯೋತಿಪ್ರಕಾಶ್ ಪುಣಚ

ಕರ್ನಾಟಕದಲ್ಲೇ ವಿಶಿಷ್ಟವಾಗಿ ಮಕ್ಕಳನ್ನು ದೇವರಿಗೆ ಹರಕೆ ರೂಪದಲ್ಲಿ ಒಪ್ಪಿಸುವ ವಿಶಿಷ್ಟ ಸಂಪ್ರದಾಯದ ‘ಕಜಂಬು’ ಜಾತ್ರೋತ್ಸವ ನಡೆಯುವ ಸನ್ನಿಧಾನವೇ ವಿಟ್ಲ ಸಮೀಪದ ಕೇಪು ಗ್ರಾಮದ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ಕ್ಷೇತ್ರ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಕೃತಿ ರಮಣೀಯತೆಯಿಂದ ಕಂಗೊಳಿಸುತ್ತಿರುವ ಕೇಪು ಗ್ರಾಮದ ಪ್ರಶಾಂತ ಪರಿಸರದಲ್ಲಿ ನೆಲೆನಿಂತಿರುವ ಶತಮಾನಗಳ ಇತಿಹಾಸವಿರುವ ವಿಟ್ಲ ಸೀಮೆಯ ಭಕ್ತಾದಿಗಳ ಅನುಗ್ರಹಮಾತೆ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಿ
ವಿಟ್ಲ ಸಮೀಪದ ಉಕ್ಕುಡದಿಂದ ಕಾಸರಗೋಡು ಮಾರ್ಗದಲ್ಲಿ ಸುಮಾರು ೩ ಕಿಮೀ ರಸ್ತೆ ಕ್ರಮಿಸಿದಾಗ ಸಿಗುವ ಕಲ್ಲಂಗಳ ಎಂಬಲ್ಲಿಂದ ಮಣ್ಣಿನ ರಸ್ತೆಯಲ್ಲಿ ೨ ಕಿ.ಮೀ. ಸಾಗಿದಾಗ ವನಸಿರಿ ಹಾಗೂ ಕೃಷಿ ಭೂಮಿಗಳ ಮಧ್ಯೆ ಸಿಗುವ ಗ್ರಾಮೀಣ ಪ್ರದೇಶವೇ ಕೇಪುಕಲ್ಲಂಗಳ. ಇದೇ ಕಾರಣಿಕದ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಿ ನೆಲೆ ನಿಂತ ಪುಣ್ಯ ಕ್ಷೇತ್ರ.

ಜಗತ್ತಿನ ಎಲ್ಲಿಯೂ ಕಂಡು ಬಾರದ ವಿಶಿಷ್ಟ ಸಂಪ್ರದಾಯ:
ವಿಟ್ಲ ಸೀಮೆಯ ಡೊಂಬ ಹೆಗಡೆ ಅರಸರ ಆಡಳಿತಕ್ಕೊಳಪಟ್ಟ ೧೬ ಗ್ರಾಮಗಳ ೧೬ ದೈವ ದೇವರುಗಳ ಪೈಕಿ ಕೇಪು ಶ್ರೀ ಉಳ್ಳಾಲ್ತಿ ಅಮ್ಮನ ಸಾನಿಧ್ಯ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿAಗೇಶ್ವರ ದೇವಸ್ಧಾನದ ನಿಕಟ ಸಂಪರ್ಕಕೊಳಪಟ್ಟುಕೊಂಡು ಈಗಲೂ ಅರಮನೆಯವರ ಆಡಳಿತದಲ್ಲಿಯೇ ನಡೆಯುತ್ತಿದೆ. ವಿಟ್ಲ ಸೀಮೆಯಲ್ಲಿ ಭಕ್ತಾದಿಗಳಿಂದ ಪ್ರಥಮ ಮತ್ತು ಪ್ರಧಾನ ಆರಾಧನೆ ಪಡೆದುಕೊಳ್ಳುವ ಅತೀ ಪುರಾತನವೂ, ಕಾರಣಿಕವೂ ಆದ ಶ್ರೀ ಉಳ್ಳಾಲ್ತಿ ಅಮ್ಮನ ಸಾನಿಧ್ಯದ ಜೊತೆಗೆ ಮಲರಾಯಿ ಹಾಗೂ ಇತರ ಪರಿವಾರ ದೈವಗಳು ಕೂಡ ಇವೆ.
ಮಕ್ಕಳನ್ನು ಸಾಂಕೇತಿಕವಾಗಿ ಉಳ್ಳಾಲ್ತಿ ದೇವಿಗೆ ಹರಿಕೆ ಒಪ್ಪಿಸುವ ನೂರಾರು ವರ್ಷಗಳ ಇತಿಹಾಸವಿರುವ ಈ ಜಾತ್ರಾ ಸಂಪ್ರದಾಯವೇ ಕಜಂಬು ಉತ್ಸವ. ಈ ಕ್ಷೇತ್ರದ ವಿಶಿಷ್ಟ ಸಂಪ್ರದಾಯ ಜಗತ್ತಿನ ಯಾವ ಮೂಲೆಯಲ್ಲೂ ಈವರೆಗೆ ಕಂಡು ಬಂದಿಲ್ಲ.

ಪಂಚ ಉಳ್ಳಾಲ್ತಿಗಳಲ್ಲಿ ಕೇಪು ಉಳ್ಳಾಲ್ತಿ ಎರಡನೇಯ ಸಹೋದರಿ :
ವಿಟ್ಲ ಡೊಂಬ ಹೆಗ್ಗಡೆ ಅರಸು ವಂಶಸ್ಥರ ಅನುವಂಶಿಕ ಆಡಳಿತ ಸುಪರ್ದಿಗೆ ಸೇರುವ ಕೇಪು ಶ್ರೀಉಳ್ಳಾಲ್ತಿ ದುರ್ಗಾಪರಮೇಶ್ವರೀ ದೈವಿಕ ಶಕ್ತಿಯ ಸಾನಿಧ್ಯದಲ್ಲಿ ರೂಢಿಯಾಗಿ ಆಚರಿಸಲ್ಪಡುತ್ತಿರುವ ಮಕ್ಕಳನ್ನು ಹರಕೆ ರೂಪದಲ್ಲಿ ದೇವಿಗೆ ಸಮರ್ಪಿಸುವ ಕಜಂಬು ಜಾತ್ರೋತ್ಸವ ನಿಯಮಿತ .ತುಳುಜಿಲ್ಲೆಯಲ್ಲಿ ಪಂಚ ಉಳ್ಳಾಲ್ತಿ ಸಹೋದರಿ ದೈವ ಕ್ಷೇತ್ರಗಳಿವೆ. ಬಂಟ್ವಾಳ ತಾಲೂಕಿನ ಮಾಣಿ, ಅನಂತಾಡಿ, ಕೇಪು, ಕೆಲಿಂಜ ಮತ್ತು ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿ ಈ ದೈವಿಕ ಶಕ್ತಿಗಳ ದೇವಾಲಯವಿದೆ. ಕೇಪು ಉಳ್ಳಾಲ್ತಿ ಎರಡನೆಯ ಸಹೋದರಿ ಎಂಬ ನಂಬಿಕೆಯಿದೆ. ಈ ಕೇಪು ಉಳ್ಳಾಲಿ ದೈವಿಕ ಶಕ್ತಿಗೆ ಮಕ್ಕಳಿಲ್ಲವೆಂಬ ಪ್ರತೀತಿಯಿದ್ದು, ಆ ಕಾರಣದಿಂದ ತನ್ನ ಭಕ್ತರಿಂದ ಮಕ್ಕಳನ್ನೇ ಹರಕೆಯ ರೂಪದಲ್ಲಿ ಪಡೆಯುವ ಸಂಪ್ರದಾಯ ಕ್ಷೇತ್ರದಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.
ಉಳ್ಳಾಲ್ತಿ ದೇವಿಯ ಅಭಯವನ್ನು ಪಸರಿಸುವ ನಾಲ್ಪೋಳು ದೈವಮಾಣಿಗಳು :
ವಿಟ್ಲ ಸೀಮೆಯ ವರ್ಷದ ಚೊಚ್ಚಲ ಜಾತ್ರೋತ್ಸವ ಇದೇ ಕೇಪು ಕಜಂಬು ಜಾತ್ರೋತ್ಸವ.
ಪ್ರತಿ ವರ್ಷ ತುಳು ತಿಂಗಳ ಜಾರ್ದೆ ೨೦ರಂದು ಅಂಗಳಕ್ಕೆ ಹಾರೆ ಹಾಕುವ(ಅಂಗಣೊಗು ಕೊಟ್ಟು ಪಾಡುನ) ಕಾರ್ಯಕ್ರಮದಿಂದ ಜಾತ್ರೋತ್ಸವ ಆರಂಭವಾಗಿ, ಜಾರ್ದೆ ಇಪ್ಪತ್ತೇಳುವರೆ ದಿನ ಅರಮನೆಯಿಂದ ಆಜ್ಞೆಯಾಗಿ `ನಾಲ್ಪೋಳು’ ಎಂಬ ದೈವಮಾನಿಗಳು ಕೇಪು ಗ್ರಾಮದ ಪೂರ್ವ ಪ್ರದೇಶಕ್ಕೆ ತೆರಳುತ್ತಾರೆ. ಸಂಪ್ರದಾಯದಂತೆ ಆಯಕಟ್ಟಿನ ದೈವ ದೇವರುಗಳ ಸನ್ನಿಧಿಗಳಿಗೆ ೩ ದಿನಗಳ ಬೇಟಿ ನೀಡಿ ಭಕ್ತರಿಗೆ ಉಳ್ಳಾಲ್ತಿ ಅಮ್ಮನ ಅಭಯ ನೀಡಿ ಕಾಣಿಕೆ, ಹರಿಕೆಗಳನ್ನು ಸ್ವೀಕರಿಸಿ ಧನು ಸಂಕ್ರಮಣದAದು ದೇವಾಲಯದ ಸಮೀಪವಿರುವ ಮಲರಾಯ ದೈವದ ಮಾಣಿಯ ಮನೆ ಸೇರುತ್ತಾರೆ. ಅಲ್ಲಿ ಎರಡೂರಿನ ( ಕೇಪು ಮತ್ತು ಅಳಿಕೆ ಗ್ರಾಮ) ಗುರಿಕ್ಕಾರರವರು ಮತ್ತು ಊರ ಸಮಸ್ಥರು ಸೇರಿ ಮಲರಾಯ ಭಂಡಾರ ಕೊಟ್ಯದಿಂದ ದೈವದ ಭಂಡಾರ ತೆಗೆದು ಅದನ್ನು ಉಳ್ಳಾಲ್ತಿ ದೇವಿಯ ಸನ್ನಿಧಿಯಲ್ಲಿರಿಸಿ ದೈವದ ಸೇವಾ ಕೈಂಕರ್ಯಾದಿಗಳು ನಡೆದಾಗ ತಡರಾತ್ರಿಯಾಗಿರುತ್ತದೆ. ನಂತರ ಉಳ್ಳಾಲ್ತಿ ದೇವಿಯ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆ.
ಮರುದಿನ ಬೆಳಿಗ್ಗಿನಿಂದಲೇ ದೇವಸ್ಥಾನಕ್ಕೆ ಜನಸಾಗರವೇ ಹರಿದು ಬರಲಾರಂಭಿಸುತ್ತದೆ. ಅಂದರೆ ಅಲ್ಲಿ ಜಾತ್ರೋತ್ಸವದ ಸಂಭ್ರಮ.

ಸಂಪ್ರದಾಯ ಮೀರುವಂತಿಲ್ಲ; ಇದು ಹರಕೆ ರೂಪದ ಉತ್ಸವ
ವಿಟ್ಲ ಸೀಮೆಗೆ ಸಂಬಂಧಪಟ್ಟ ಗ್ರಾಮದ ಭಕ್ತಾದಿಗಳು ಹಾಗೂ ಹರಕೆ ಹೇಳಿಕೊಂಡ ಭಕ್ತರು ಕಡ್ಡಾಯ ೧ ದಿನದ ವ್ರತ (ಸಾತ್ವಿಕ ಆಹಾರ, ಫಲಾಹಾರ) ಅನುಷ್ಠಾನದಲ್ಲಿರಬೇಕು. ( ಮೊಲೆ ಕುಡಿಯುವ ಹಸುಳೆಯಾದರೆ ತಾಯಿ ಕೂಡಾ ವೃತಾಚರಣೆಯಲ್ಲಿರಬೇಕು ) ಮಧ್ಯಾಹ್ನ ಸಣ್ಣ ಉಳ್ಳಾಲ್ತಿ ಮತ್ತು ದೊಡ್ಡ ಉಳ್ಳಾಲ್ತಿ ( ಎಲ್ಯಕ್ಕೆ ಮತ್ತು ಮಲ್ಲಕ್ಕೆ )ಯ ಮೂರ್ತಿಗಳೊಂದಿಗೆ ದೇವಿಗೆ ಆಭರಣ, ಭಂಡಾರಗಳು ಅರಮನೆಯಿಂದ ದೇವಾಲಯ ಸೇರುತ್ತದೆ. ಕಜಂಬು ಜಾತ್ರೋತ್ಸವದ ರಾತ್ರಿ ದೇವಾಲಯಕ್ಕೆ ಪೂರ್ಣಕುಂಭ ಸ್ವಾಗತದಲ್ಲಿ ವಿಟ್ಲ ಅರಮನೆಯಿಂದ ಅರಸು ವಂಶದ ಹಿರಿಯರ ಆಗಮನವಾಗುತ್ತದೆ.( ಹಿಂದೆ ಅರಮನೆಯಿಂದ ಅರಸುಗಳನ್ನು ಪಲ್ಲಕಿಯ ಮೂಲಕ ಕರೆತರಲಾಗುತ್ತಿತ್ತು.) ಅರಸುಗಳು ಆಸೀನರಾದ ನಂತರ ಅಮ್ಮನವರಿಗೆ ಮಹಾ ಮಂಗಳಾರತಿ ನಡೆಯುತ್ತದೆ. ದೇವಾಲಯದ ಹಿಂದೆ ಹರಿಯುತ್ತಿರುವ ಹೊಳೆಯಲ್ಲಿ ಹರಕೆ ಹೊತ್ತ ಮಕ್ಕಳು ಶುಚೀರ್ಭೂತರಾಗಿ ಸಿದ್ಧರಾಗಿ ದೇವಾಲಯದ ಮುಂಭಾಗದಲ್ಲಿ ಸೇರುತ್ತಾರೆ. ದೇವಿಯರ ಪಲ್ಲಕ್ಕಿ ಉತ್ಸವ ನಡೆದ ಬಳಿಕ ಸಂಪ್ರದಾಯದಂತೆ ದೇವಿಯ ಗುಡಿಗೆ ಅಡ್ಡಬಿದ್ದು ಅಂಗಣದ ನಾಲ್ಕೂ ದಿಕ್ಕುಗಳಲ್ಲಿ ದೇವರ ಕೆಲಸ ಮಾಡುವ `ನಾಲ್ಪೋಳು’ೆ ಎಂಬ ದೈವಮಾನಿಗಳಿಗೆ ಕಾಣಿಕೆಯಿತ್ತು ತೆರಳಿದ ನಂತರ ದೇವರ ಗರ್ಭಗುಡಿಯ ಮೆಟ್ಟಿಲಿಗೆ ಮಕ್ಕಳ ತಲೆಯನ್ನು ಸ್ಪರ್ಶಿಸಿ ಹರಕೆ ಒಪ್ಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳು ಚೀರಾಡಿದರೆ ಆರೋಗ್ಯವಂತರು ಎಂಬುವುದು ಇಲ್ಲಿನ ನಂಬಿಕೆ.
ವಿಟ್ಲ ಅರಸು ವಂಶಸ್ಥರು ತಮ್ಮ ಮನೆ ಮಕ್ಕಳನ್ನು ಉಳ್ಳಾಲ್ತಿ ದೇವರ ಸನ್ನಿಧಾನಕ್ಕೆ
ನಡೆದುಕೊಂಡು ಬಂದ ಸಂಪ್ರದಾಯದAತೆ ಮೊದಲು ಹರಕೆ ಒಪ್ಪಿಸುತ್ತಾರೆ. ಆ ಬಳಿಕ ಇತರ ಮಕ್ಕಳು ಹರಕೆಗೆ ಸಮರ್ಪಣೆಯಾಗುತ್ತಾರೆ.
ಈ ವಿಶಿಷ್ಟ ಹರಕೆ ಜಾತ್ರೋತ್ಸವದಲ್ಲಿ ಸೀಮೆಗೆ ಸಂಬಂಧಪಟ್ಟ ಸಹಸ್ರಾರು ಮಕ್ಕಳು ಹರಕೆ ರೂಪದಲ್ಲಿ ಒಪ್ಪಿಸಿಕೊಳ್ಳುತ್ತಾರೆ. ಹರಕೆ ನಡೆದ ಬಳಿಕ ಮಕ್ಕಳ ಹೆಸರಲ್ಲಿ ನೀಡುವ
ಬಲಿವಾಡು ಸೇವಾ ಪ್ರಸಾದ ಸಮೀಪದ ಸುಬ್ರಾಯ ದೇವಸ್ಥಾನದಲ್ಲಿ ಉಂಡು ಹೋಗಬೇಕು.


ಈ ಕ್ರಿಯೆಗಳೆಲ್ಲವೂ ರಾತ್ರಿ ಸುಮಾರು ಒಂದುವರೆ ಗಂಟೆಗೆ ಸಮಾಪ್ತಿಯಾಗುತ್ತದೆ. ಆ ಬಳಿಕ ಉಳ್ಳಾಲ್ತಿಗೆ ನೇಮೋತ್ಸವ. ಅದು ಹೊರಗಿನ ಅಂಗಣದಲ್ಲಿ. ಆ ದಿನವೇ ಜನ್ಮ ತಾಳಿದ ಕೋಳಿ ಮರಿಯೊಂದನ್ನು ಉಳ್ಳಾಲ್ತಿ ದೈವವು ಮೇಲಕ್ಕೆ ಹಾರಿಸುತ್ತದೆ. ಅದು ಕೆಳಗೆ ಬೀಳದೆ ಮೇಲೆಯೇ ಮಾಯವಾಗಿ ಬಿಡುತ್ತದೆ. ಅದಕ್ಕೆ ಉಳ್ಳಾಲ್ತಿ ಕಟ್ಟು ಕಟ್ಟು ನೆರಿ ಇಳಿಯುವುದು ಎನ್ನುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಹೆಣ್ಣು ಸಂತಾನ ದೇವಾಲಯದ ಅಂಗಣದಲ್ಲಿರುವುದು ನಿಷಿದ್ಧವಾಗಿದೆ.
ನಂತರ `ನಾಲ್ಪೋಳು’ ಎಂಬ ದೈವಮಾನಿಗಳು ಕೇಪು ಗ್ರಾಮದ ಪಶ್ಚಿಮ ಪ್ರದೇಶಕ್ಕೆ ತೆರಳುತ್ತಾರೆ. ಸಂಪ್ರದಾಯದAತೆ ಆಯಕಟ್ಟಿನ ದೈವ ದೇವರುಗಳ ಸನ್ನಿಧಿಗಳಿಗೆ ೩ ದಿನಗಳ ಬೇಟಿ ನೀಡಿ ಭಕ್ತರಿಗೆ ಉಳ್ಳಾಲ್ತಿ ಅಮ್ಮನ ಅಭಯ ನೀಡಿ ಕಾಣಿಕೆ, ಹರಿಕೆಗಳನ್ನು ಸ್ವೀಕರಿಸಿ ಮರಳಿ ಬಂದು ಗಂಡ ಗಣಗಳಿಗೆ ೩೯ ಕೋಳಿಗಳ ಬಲಿ ನಡೆದು, ಏರಿದ ಧ್ವಜವನ್ನು ಇಳಿಸುವಲ್ಲಿಗೆ ಕಜಂಬು ಉತ್ಸವ ಮುಕ್ತಾಯವಾಗುತ್ತದೆ.
ಜಾತ್ರೆ ಮರುಳು ಎಂಬ ಗದ್ದಲವನ್ನು ಮರೆಮಾಚಿ ಜಾತ್ರೆಯಲ್ಲಿ ಕೊಡು-ಕೊಳ್ಳುವಿಕೆ,ಸಂತೆ ವ್ಯಾಪಾರ,ವ್ಯವಹಾರ, ಆಡಂಭರಗಳು ಸಂಪೂರ್ಣವಾಗಿ ನಿಷೇಧವಾಗಿದೆ. ಇದನ್ನು ಮೀರಿನಡೆದರೆ ಕ್ಷಣಮಾತ್ರದಲ್ಲಿಯೇ ಸಂಕಷ್ಟಗಳು ಎದುರಾಗಿ ದೇವಿಯ ಕಾರಣೀಕದ ದರ್ಶನವಾಗುವುದು ಇಂದಿಗೂ ಕಂಡುಬರುತ್ತದೆ. ಇಲ್ಲಿನ ಕಟ್ಟುಪಾಡುಗಳನ್ನು ಮೀರಿ ನಡೆದು ಸಂಕಷ್ಟಗಳನ್ನು ಅನುಭವಿಸಿದ ಅದೆಷ್ಟೋ ಮಂದಿ ಈಗಲೂ ಪ್ರಾಯಶ್ಚಿತ್ತವಾಗಿ ಸನ್ನಿಧಿಗೆ ಬಂದು ಪ್ರಸಾದ ಸ್ವೀಕರಿಸುತ್ತಾರೆ. ಈ ಗ್ರಾಮದಲ್ಲಿ ಧರ್ಮದ ತಳಹದಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಬಾಳುವೆ. ಕಜಂಬು ಎಂಬುವುದು ಕಡ್ಡಾಯವಲ್ಲ ಹಾಗೆಂದು ನಿರ್ಲಕ್ಷಿಸಿದರೆ ದೋಷಗಳು ಮಾತ್ರ ಕಟ್ಟಿಟ್ಟ ಬುತ್ತಿ !

ಜಾತ್ರೆಯೆಂಬ ಸದ್ದುಗದ್ದಲವಿಲ್ಲದೆ ಮಕ್ಕಳನ್ನು ದೇವಿಗೆ ಹರಿಕೆಯಾಗಿ ಒಪ್ಪಿಸಿ ಕಾಣಿಕೆ ನೀಡಿ ಪಡೆದುಕೊಳ್ಳುವ ಉತ್ಸವ ವರ್ಷದಿಂದ ವರ್ಷಕ್ಕೆ ಕಾರಣೀಕತೆಯನ್ನು ಪಡೆದು ಕ್ಷೇತ್ರದ ಮಹಿಮೆ ಭಕ್ತಾಭಿಮಾನಿಗಳಲ್ಲಿ ಭಯ ಭಕ್ತಿ ಸಂಚಲನ ಮೂಡಿಸುತ್ತಿದೆ. ಕಾನತ್ತೂರು ಕ್ಷೇತ್ರದಲ್ಲಿ ನಡೆಯುವ ಸತ್ಯಾಸತ್ಯತೆಗಳ ಪ್ರಮಾಣಗಳಂತೆ ಇಲ್ಲಿ ಕೂಡಾ ನ್ಯಾಯ ಪ್ರಮಾಣಗಳು ನಿರಂತರವಾಗಿ ನಡೆದು ಧರ್ಮಜಾಗೃತಿಯಾದ ಪುಣ್ಯ ಭೂಮಿಯಿದು. ಯಾರಾದರೂ ತಪ್ಪು ಮಾಡಲು ಮುಂದಾದರೆ ‘ಉಳ್ಳಾಲ್ತಿ ಮಣ್ಣು’ ಜಾಗೃತರಾಗಿರುವಂತೆ ಹಿರಿಯರು ಎಚ್ಚರಿಸುತ್ತಾರೆ.
ಆಧುನಿಕತೆಯ ಮಧ್ಯೆ ಈ ವಿಶಿಷ್ಟ ಆಚರಣಾ ಪದ್ಧತಿ ಹಲವು ಜಿಜ್ಞಾಸೆಗಳನ್ನು ಹುಟ್ಟಿಸಿದರೂ, ಶತಶತಮಾನಗಳಿಂದ ಆಚರಿಸಿಕೊಂಡು ಬಂದ ಈ ಹರಕೆ ಸೇವಾ ಸಂಪ್ರದಾಯ ಜನರ ನಂಬಿಕೆಯ ತಳಹದಿಯ ಮೇಲೆ ನಿಂತಿದೆ.
ದಶAಬರ ೧೭ರಂದು ಅಂದರೆ ಇಂದು ಕೇಪು ಕಜಂಬು ಉತ್ಸವ ನಡೆಯಲಿದೆ.

Related posts

Leave a Reply

Your email address will not be published. Required fields are marked *