Header Ads
Breaking News

ಮಂಜೂರಾದ ಕಾಮಗಾರಿಗಳ ಬದಲಾವಣೆಯೊಂದಿಗೆ ಶೀಘ್ರ ಅನುಷ್ಠಾನ-ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್

ಪುತ್ತೂರು: ರಾಜ್ಯದಲ್ಲಿ ಪಂಚಾಯತ್ ಚುನಾವಣೆ ಶೀಘ್ರದಲ್ಲೇ ನಡೆಯಲಿರುವ ಹಿನ್ನಲೆಯಲ್ಲಿ ತಾಲೂಕು ಪಂಚಾಯತ್‌ನ ಕ್ರಿಯಾ ಯೋಜನೆಯಲ್ಲಿ ಮಂಜೂರಾಗಿರುವ ಕಾಮಗಾರಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮುಂದಿನ ಮಾರ್ಚ್ ಒಳಗಡೆ ಪೂರ್ಣಗೊಳಿಸಲು ಗುರುವಾರ ನಡೆದ ಪುತ್ತೂರು ತಾಲೂಕು ಪಂಚಾಯತ್‌ನ ವಿಶೇಷ ಸಭೆ ನಿರ್ಣಯಿಸಿದೆ.

ಪುತ್ತೂರು ತಾಲೂಕು ಪಂಚಾಯತ್‌ನ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್‌ನ ವಿಶೇಷ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅಧ್ಯಕ್ಷರು, ಸದಸ್ಯರು ತಮ್ಮ ಕ್ಷೇತ್ರದಲ್ಲಿ ಮಂಜೂರಾಗಿರುವ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸುವುದಾದರೆ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಒಂದೆರಡು ಲಕ್ಷ ರೂ. ವೆಚ್ಚದ ಯೋಜನೆಗಳನ್ನು ನರೇಗಾ ಯೋಜನೆಯೊಂದಿಗೆ ಜೋಡಿಸಿಕೊಂಡು ಅನುಷ್ಠಾನಗೊಳಿಸಬಹುದಾಗಿದೆ. ಚುನಾವಣೆ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆಗಳು ಜಾರಿಯಾಗುವುದರಿಂದ ಯೋಜನೆಯನ್ನು ಪೂರ್ಣಗೊಳಿಸಲು ಕಷ್ಟಸಾಧ್ಯವಾಗುವುದರಿಂದ ಆದಷ್ಟು ಶೀಘ್ರದಲ್ಲಿ ಈ ಕುರಿತು ನಿರ್ಧರಿಸಬೇಕಾಗಿದೆ ಎಂದರು.
ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂಬರುವ ಮಾರ್ಚ್ವರೆಗೆ ಕಾಯುವುದಕ್ಕಿಂತ ಮುಂಬರುವ ಫೆಬ್ರವರಿ ತಿಂಗಳೊಳಗೆ ಮಾಡಿ ಮುಗಿಸುವುದು ಉತ್ತಮ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದರು. ಪಟ್ಟೆಯ ಅಂಗನವಾಡಿ ಕೇಂದ್ರದ ಕಟ್ಟಡ ದುರಸ್ತಿ ಕಾರ್ಯ ಅಪೂರ್ಣವಾಗಿದ್ದು, ಇದರ ಉಳಿಕೆ ಮೊತ್ತವನ್ನು ತಕ್ಷಣವೇ ಒದಗಿಸಿಕೊಡಬೇಕಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಸಭೆಯ ಗಮನಕ್ಕೆ ತಂದರು. ಇದು ರೂ. ಒಂದು ಲಕ್ಷ ವೆಚ್ಚದ ದುರಸ್ತಿ ಕಾಮಗಾರಿಯಾಗಿದ್ದು, ಈಗಾಗಲೇ ರೂ. ೫೦ ಸಾವಿರ ಮೊತ್ತ ನೀಡಲಾಗಿದ್ದು, ಉಳಿಕೆ ಮೊತ್ತವನ್ನು ಬಿಡುಗಡೆಗೊಳಿಸಲಾಗುವುದು ಎಂದು ಬೋರ್ಕರ್ ತಿಳಿಸಿದರು.
ವರದಿ: ಅನೀಶ್ ಪುತ್ತೂರು

Related posts

Leave a Reply

Your email address will not be published. Required fields are marked *