Header Ads
Header Ads
Breaking News

ಮಂಜೇಶ್ವರದ ಜೆಎಂ ರಸ್ತೆ ದುರಸ್ಥಿ ವಿಚಾರ : ರಸ್ತೆಯ ಡಾಮಾರು ಸಂಪೂರ್ಣ ಅಸ್ತವ್ಯಸ್ಥ

ಮಂಜೇಶ್ವರ: ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಹತ್ತೊಂಭತ್ತನೇ ವಾರ್ಡಿನಲ್ಲಿರುವ ಜೆ ಎಂ ರಸ್ತೆ ದುರಸ್ಥಿ ಕಂಡು ಹತ್ತು ವರ್ಷಗಳೇ ಕಳೆದಿದೆ. ಆದರೆ ಇದೀಗ ಈ ರಸ್ತೆಯ ಡಾಮಾರುಗಳು ಸಂಪೂರ್ಣವಾಗಿ ಹದೆಗಟ್ಟಿದ್ದು ಕೆಸರು ನೀರು ಹೆಪ್ಪುಕಟ್ಟಿ ನಿಲ್ಲುತ್ತಿರುವುದು ಕಾಲ್ನಡೆ ಯಾತ್ರಿಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.

ಮಂಜೇಶ್ವರ ರೈಲ್ವೇ ಗೇಟ್ ಹಾಗೂ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಿಂದ ಉದ್ಯಾವರ ಜುಮಾ ಮಸೀದಿ, ಶಾಲೆಗಳಿಗೆ ಬಹು ಬೇಗನೆ ತಲುಪುವ ಏಕೈಕ ರಸ್ತೆ ಇದಾಗಿದೆ. ಈ ರಸ್ತೆಯ ಅರ್ಧ ಕಿಲೋ ಮೀಟರಿನಷ್ಟು ಭಾಗ ಈಗ ಸಂಪೂರ್ಣವಾಗಿ ಹದೆಗೆಟ್ಟು ಗುಂಡಿಗಳು ಸೃಷ್ಟಿಯಾಗಿ ರಿಕ್ಷಾ ಚಾಲಕರು ಕೂಡಾ ಈ ರಸ್ತೆಯಾಗಿ ಬರಲು ಹಿಂದೇಟು ಹಾಕ್ತಾ ಇದ್ದಾರೆ.
ಇದೇ ಮಾರ್ಚ್ ತಿಂಗಳ ಅಂತಿಮ ದಿನಗಳಲ್ಲಿ ಈ ರಸ್ತೆಯನ್ನು ದುರಸ್ಥಿಗೊಳಿಸುವುದಾಗಿ ಫಲಕ ಹಾಕಿದಾಗ ಸ್ಥಳೀಯರು ಒಮ್ಮೆಗೆ ಖುಷಿ ಪಟ್ಟಿದ್ದರೂ ಬಳಿಕ ರಾತ್ರೋ ರಾತ್ರಿ ಆ ಫಲಕ ನಾಪತ್ತೆಯಾಗಿರುವುದಾಗಿ ಊರವರು ಹೇಳುತ್ತಿದ್ದಾರೆ. ಯಾಕಾಗಿ ರಸ್ತೆ ಕಾಮಗಾರಿಯನ್ನು ಬದಲಿಸಿದರೆಂಬ ಉತ್ತರ ಲಭಿಸದ ಹಿನ್ನೆಲೆಯಲ್ಲಿ ಅದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಸುಮಾರು ಎಪ್ಪತ್ತೈದು ಕುಟುಂಬ ಆಶ್ರಯಿಸುತ್ತಿರುವ ಈ ರಸ್ತೆಯಲ್ಲಿ ಮಸೀದಿ ಹಾಗು ಶಾಲೆಗಳು ಇರುವ ಹಿನ್ನೆಲೆಯಲ್ಲಿ ಪ್ರತಿ ದಿನ ನೂರಾರು ವಾಹನಗಳು ಹಾಗು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಕಾಲ್ನಡೆ ಯಾತ್ರಿಕರು ಸಂಚರಿಸುತ್ತಿದ್ದಾರೆ.
ಒಳ ರಸ್ತೆಗೆ ತಾಗಿಕೊಂಡಿರುವ ಈ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಅದನ್ನು ಬೇಸಿಗೆ ಕಾಲದಲ್ಲಿ ಶುಚೀಕರಿಸದ ಹಿನ್ನೆಲೆಯಲ್ಲಿ ಕೆಸರು ನೀರು ಕಟ್ಟಿ ನಿಲ್ಲುತ್ತಿದೆ. ಇದನ್ನು ದಾಟಿ ಕೊಂಡೇ ಕಾಲ್ನಡೆ ಯಾತ್ರಿಕರು ಸಾಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ವಾರ್ಡ್ ಸದಸ್ಯ ಹಾಗೂ ಮಂಜೇಶ್ವರ ಗ್ರಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕ್ತಾರ್ ಎ ಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ರಸ್ತೆಗೆ ಶಾಸಕರ ಫಂಡ್ ನಿಂದ ಇಪ್ಪಂತ್ತೆಂಟು ಲಕ್ಷ ರೂ. ಮಂಜೂರಾಗಿ ಗುತ್ತಿಗೆ ಕೂಡಾ ನೀಡಲಾಗಿದೆ. ಅಲ್ಪ ಸಮಯದಲ್ಲಿ ಇದರ ಕಾಮಗಾರಿ ಆರಂಭಗೊಂಡು ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Related posts

Leave a Reply

Your email address will not be published. Required fields are marked *