
ಮಂಜೇಶ್ವರ : ಕೇರಳ ಮೀನುಗಾರಿಕೆ ಇಲಾಖೆ ಹಾಗೂ ಮಂಜೇಶ್ವರ ಗ್ರಾ. ಪಂ. ಸಹಕಾರದೊಂದಿಗೆ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಸಂಪನ್ನ ಕೇರಳ ಯೋಜನೆಯ ಭಾಗವಾಗಿ ಬ್ಯಾಂಕಿನ ಸ್ವಂತ ಸ್ಥಳದಲ್ಲಿ ಮೀನು ಕೃಷಿಯನ್ನು ಆರಂಭಿಸಿತು. ಈ ಕೃಷಿ ಕೇಂದ್ರ ಉದ್ಘಾಟನೆಗೊಂಡು ಈಗಾಗಲೇ ನಾಲ್ಕು ತಿಂಗಳುಗಳು ಕಳೆದಿವೆ . ಮಳೆಗಾಲದಲ್ಲಿ ಕೂಡಾ ಹಸಿರು ತರಕಾರಿ ಉತ್ಪಾಧಿಸಲು ಮಳೆ ಮರೆಯನ್ನು ಕೂಡಾ ಇಲ್ಲಿ ನಿರ್ಮಿಸಿ ಎಲ್ಲರ ಗಮನ ಸೆಳೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರಿಗೆ ಖುಷಿಯನ್ನು ತಂದೊಡ್ಡುತ್ತಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಈ ಕೃಷಿಯನ್ನು ಮಂಜೇಶ್ವರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಮಾತ್ರ ಕಾಣಬಹುದಾಗಿದೆ. ಇದು ವೈರಲಾಗುತ್ತಿದ್ದಂತೆ ಉತ್ಸಾಹ ಗೊಂಡ ಸಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ಹಾಗೂ ಸಿಪಿಐ ರಾಜ್ಯ ಸಮಿತಿ ಸದಸ್ಯೆ ಜ್ಯೋತಿ.ಎ ರವರು ಮಂಜೇಶ್ವರ ಸಹಕಾರಿ ಬ್ಯಾಂಕ್ ಸಂದರ್ಶಿಸಿ ಕೃಷಿಯನ್ನು ವೀಕ್ಷಿಸಿದರು. ಬ್ಯಾಂಕ್ ಅಧ್ಯಕ್ಷ ಬಿ.ವಿ.ರಾಜನ್ ಅತಿಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್, ಶ್ರೀಧರ್ ಮಾಡ, ದಯಾಕರ್ ಮಾಡ, ಅಶ್ರಫ್ , ಶಾಂತಾರಾಮ ಯತೀಶ್, ಪ್ರಭಾಕರ್ ರಾವ್, ಧನ್ರಾಜ್ ಮೊದಲಾದವರು ಉಪಸ್ಥಿತರಿದ್ದರು