

ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅವರು ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎನ್ನುವಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ಮೇಳದ ಪ್ರಧಾನ ವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ‘ಮಹಾಕಲಿ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನನೀಡುತ್ತಿದ್ದ ಸಂದರ್ಭ ರಂಗದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥಗೊಂಡರು. ಅನಂತರ ತಕ್ಷಣ ವೇಷ ಕಳಚಿ, ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ಮತ್ತು ಸಹಕಲಾವಿದರು, ಸ್ಥಳೀಯರು ಜತೆಯಾಗಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು ಆಸ್ಪತ್ರೆ ತಲುಪುವಾಗ ಮೃತಪಟ್ಟಿದ್ದಾರೆ. ಪ್ರಸ್ತುತ ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸಾಧು ಕೊಠಾರಿಯವರು ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿರುವ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷ ತಿರುಗಾಟ ನಡೆಸಿದ್ದರು.
ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸಂತಾಪ
ಮಂಗಳೂರಿನ ಮಹಾನಗರ ಪಾಲಿಕೆಯ ಮಾಜಿ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ ಸಂತಾಪ ಸೂಚಿಸಿದ್ದಾರೆ. ಸಾಧು ಕೊಠಾರಿ ಅವರು ಒಬ್ಬ ಸಜ್ಜನ, ಸಂಪ್ರದಾಯ ಬದ್ಧ ಕಲಾವಿದ…ರಂಗಸ್ಥಳದಲ್ಲೇ ಸಾವನ್ನಪ್ಪುವಂತಹ ಘಟನೆಗಳು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ರು.