Header Ads
Header Ads
Breaking News

ಮಡಪ್ಪಾಡಿಯ ಹಾಡಿಕಲ್ಲಿಗೆ ಶಂಕಿತ ನಕ್ಸಲರು ಪ್ರತ್ಯಕ್ಷ

ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನಲ್ಲಿ ಶೆಡ್ಡ್‌ನಲ್ಲಿ ವಾಸ್ತವ್ಯವಿರುವ ವ್ಯಕ್ತಿಯ ಮನೆಗೆ ನಕ್ಸಲರೆಂದು ಹೇಳಲಾದ ಮೂವರು ಭೇಟಿ ನೀಡಿ ಊಟ ಮಾಡಿ ತೆರಳಿದ ಘಟನೆ ಜೂ.೧೪ರಂದು ರಾತ್ರಿ ನಡೆದಿದೆ. ಸುಳ್ಯ ಎ.ಪಿ.ಎಂ.ಸಿಯ ಮಾಜಿ ಅಧ್ಯಕ್ಷರೂ, ಬಿಜೆಪಿ ನಾಯಕರೂ ಆಗಿರುವ ಜಯರಾಮ ಹಾಡಿಕಲ್ಲುರವರಿಗೆ ಸೇರಿದ ಜಾಗದಲ್ಲಿ ಈ ಘಟನೆ ಸಂಭವಿಸಿದೆ. ಜಯರಾಮರವರು ತನ್ನ ರಬ್ಬರ್ ಮರಗಳ ಟ್ಯಾಪಿಂಗನ್ನು ೬ ತಿಂಗಳ ಹಿಂದೆ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಎಂಬಲ್ಲಿನ ಥೋಮಸ್ ಎಂಬವರಿಗೆ ಲೀಸ್‌ಗೆ ನೀಡಿದ್ದರು. ಥೋಮಸ್ ಅವರೇ ಈ ರಬ್ಬರ್ ಮರಗಳ ಟ್ಯಾಪಿಂಗ್ ಮಾಡಿ ಶೀಟ್ ತಯಾರಿಸುತ್ತಿದ್ದರು. ಜಯರಾಮರವರ ಮನೆಯ ಸುಮಾರು 100 ಮೀಟರ್ ದೂರದಲ್ಲಿರುವ ಶೆಡ್‌ನಲ್ಲಿ ಥೋಮಸ್ ವಾಸ್ತವ್ಯವಿದ್ದರು. ಅಲ್ಲಿಯೇ ಅಡುಗೆ ತಯಾರಿಸುತ್ತಿದ್ದರು. ಜೂ. 14ರಂದು ರಾತ್ರಿ 7345ರ ಸುಮಾರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಇವರ ಶೆಡ್ಡ್ ಪ್ರವೇಶಿಸಿದ್ದಾರೆ. ಈ ಪೈಕಿ ಇಬ್ಬರು ಯುವತಿಯರು ಮತ್ತು ಓರ್ವ ಪುರುಷರಿದ್ದರು. ೨೨ರಿಂದ ೨೪ ವರ್ಷ ಅಂದಾಜಿನ ಯುವತಿ ಮತ್ತು ೩೫ ರಿಂದ 37 ವರ್ಷ ಅಂದಾಜಿನ ಮತ್ತೊರ್ವ ಯುವತಿ ಶೆಡ್ಡ್ ಒಳಗಡೆ ಬಂದಿದ್ದಾರೆ. ಮತ್ತೋರ್ವ ಯುವಕ ಬಾಗಿಲ ಹೊರಗಡೆ ನಿಂತುಕೊಂಡಿದ್ದ. ಒಳಗೆ ಚಯರ್‌ನಲ್ಲಿ ಕುಳಿತು ಊಟ ಮಾಡುತ್ತಿದ್ದ ಥೋಮಸ್ ಅವರಿಗೆ ಇದ್ದಕ್ಕಿದ್ದಂತೆಯೇ ಅಪರಿಚಿತರು ಶೆಡ್ ಪ್ರವೇಶಿಸಿದ್ದುದರಿಂದ ಭಯ ಮತ್ತು ಆತಂಕ ಉಂಟಾಯಿತು. ಅವರು ಎದ್ದು ನಿಂತರೆನ್ನಲಾಗಿದೆ. ಒಳಗೆ ಪ್ರವೇಶಿಸಿದ ಇಬ್ಬರೂ ತಮ್ಮಲ್ಲಿದ್ದ ಕೋವಿಯಿಂದ ಥೋಮಸ್ ಅವರನ್ನು ಸುಮ್ಮನಿರುವಂತೆ ಸೂಚಿಸಿದರು.

ಬಳಿಕ ಅಲ್ಲೇ ಪಕ್ಕದಲ್ಲಿ ತಟ್ಟೆಯೊಂದರಲ್ಲಿ ಇದ್ದ ಅನ್ನ, ಪಾತ್ರೆಯಲ್ಲಿದ್ದ ಮೊಟ್ಟೆಯ ಬುರ್ಜಿ ಪದಾರ್ಥವನ್ನು ಕೆಲವು ತಟ್ಟೆಗಳ ಸಹಿತ ಹೊರಗೆ ಕೊಂಡೊಯ್ದರು. ಭಯಭೀತರಾದ ಥೋಮಸ್ ಅವರು ಒಳಗಡೆಯೇ ನಿಂತುಕೊಂಡಿದ್ದರು. ೫ ನಿಮಿಷದಲ್ಲಿ ಹೊರಗಡೆ ಊಟ ಮುಗಿಸಿದ ತಂಡ ತಟ್ಟೆಗಳನ್ನು ಅಲ್ಲೇ ಬಿಟ್ಟು ಕೈ ತೊಳೆದುಕೊಂಡು ಒಳಗೆ ಬಂದು ಅಲ್ಲಿ ತಾವಿಟ್ಟಿದ್ದ ಚೀಲ ಮತ್ತು ಥೋಮಸ್ ಅವರು ತಂದಿರಿಸಿದ್ದ ೮ ಮಧು ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋದರೆನ್ನಲಾಗಿದೆ. ನೀವು ಯಾರು, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಥೋಮಸ್ ಅವರು ಆತಂಕದಿಂದಲೇ ಪ್ರಶ್ನಿಸಿದರಾದರೂ ಅದನ್ನು ಕೇಳದ ಅವರು ತೆರಳಿದರೆಂದು ತಿಳಿದುಬಂದಿದೆ.ಘಟನೆಯ ಮಾಹಿತಿ ಪಡೆದ ನಕ್ಸಲ್ ನಿಗ್ರಹ ಪಡೆಯ ಗುಪ್ತಚರ ಸಿಬ್ಬಂದಿ ರಮೇಶ್ ಅವರು ಜೂ. ೧೫ರಂದು ಬೆಳಿಗ್ಗೆಯೇ ಹಾಡಿಕಲ್ಲಿಗೆ ಬಂದು ಮಾಹಿತಿ ಸಂಗ್ರಹಿಸಿ ನಕ್ಸಲ್ ನಿಗ್ರಹ ಪಡೆಯ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸುಳ್ಯ ಎಸ್.ಐ. ಮಂಜುನಾಥ್, ಎಎಸ್‌ಐಗಳಾದ ರವಿ, ಶಿವರಾಮರವರು ಕೂಡಾ ಸ್ಥಳಕ್ಕೆ ಬಂದು ಮಾಹಿತಿ ಪಡೆದರು. ನಡೆದಿರುವ ಘಟನೆಯನ್ನು ಥೋಮಸ್‌ರವರು ಪತ್ರಕರ್ತರು ಮತ್ತು ಪೊಲೀಸರೊಂದಿಗೆ ವಿವರಿಸಿದರು. ವಿಷಯ ತಿಳಿದು ಸ್ಥಳೀಯರು ಕೂಡಾ ಹಾಡಿಕಲ್ಲಿಗೆ ಬರತೊಡಗಿದರು.

Related posts

Leave a Reply