Header Ads
Breaking News

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ-ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿಕೆ

ಮಂಗಳೂರು : ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದ್ದು, ನ.22ಸೇರಿದಂತೆ ಮುಂದಿನ ನಾಲ್ಕು ರವಿವಾರಗಳಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಿಂಚಿನ ನೋಂದಣಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಅವರು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದರು. ಎಲ್ಲ ಮತಗಟ್ಟೆಗಳಲ್ಲಿ ಈ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಎಲ್ಲ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈಗಾಗಲೇ ನ.18ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಡಿ.17ರವರೆಗೆ ಹಕ್ಕು ಮತ್ತು ಆಕ್ಷೇಪ ಸ್ವೀಕರಿಸಲಾಗುವುದು. ಜ.7ಕ್ಕೆ ಇವುಗಳ ವಿಲೇವಾರಿ ನಡೆಯಲಿದೆ. ಜ.18ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ 6ರಲ್ಲಿ ಅರ್ಜಿ ನೀಡಬೇಕು. ಅನಿವಾಸಿ ಭಾರತೀಯರು ಹೆಸರು ಸೇರ್ಪಡೆಗೆ ನಮೂನೆ 6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಮೂನೆ -7, ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ತಿದ್ದುಪಡಿ ಮಾಡಲು ನಮೂನೆ -8, ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭ ನಮೂನೆ -8ಎ ಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟುಹೋಗಿದೆ, ವಿಳಾಸ, ವಾರ್ಡ್ ಬದಲಾಗಿದೆ, ವಯಸ್ಸು, ಜನ್ಮದಿನಾಂಕ ಬದಲಾಗಿದೆ ಎಂದು ಮತದಾರರು ಚುನಾವಣೆ ಸಂದರ್ಭ ದೂರುವ ಬದಲಿಗೆ ಈಗ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಿ ಲೋಪದೋಷಗಳಿದ್ದರೆ ಸರಿಪಡಿಸಬಹುದು. ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಬಳಿಯೂ ಪರಿಶೀಲನೆ ನಡೆಸಬಹುದು ಎಂದು ತಿಳಿಸಿದರು.

Related posts

Leave a Reply

Your email address will not be published. Required fields are marked *